ವಾಡಿ: ಸಂಘಟಿತರಾಗಿರುವ ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಪ್ರಾಮಾಣಿಕ ಬೀದಿ ವ್ಯಾಪಾರಿಗಳಿಗೆ ಮಾತ್ರ ಸರ್ಕಾರ ಸಾಲ ಸೌಲಭ್ಯದ ಮೊತ್ತ ಹೆಚ್ಚಿಸುತ್ತದೆ. ವ್ಯಾಪಾರ, ವ್ಯವಹಾರ ವೃದ್ಧಿಯಾಗುವುದರಿಂದ ಮಾತ್ರ ಆರ್ಥಿಕ ಸಬಲತೆ ಕಾಣಲು ಸಾಧ್ಯ ಎಂದು ಕಲಬುರಗಿ ಕೌಶಲ್ಯ ಅಭಿವೃದ್ಧಿ ಇಲಾಖೆಯ ಮಿಷನ್ ಮ್ಯಾನೇಜರ್ ರಾಜಕುಮಾರ ಗುತ್ತೇದಾರ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಪುರಸಭೆ ಆಡಳಿತ ಹಾಗೂ ದೀನ್‌ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ ಏರ್ಪಡಿಸಲಾಗಿದ್ದ ಬೀದಿ ವ್ಯಾಪಾರಿಗಳ ತರಬೇತಿ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.
ಬಟ್ಟೆ, ಹೂವು, ಹಣ್ಣು, ತರಕಾರಿ ಹೀಗೆ ವಿವಿಧ ರೀತಿಯ ವ್ಯಾಪಾರಸ್ಥರು ಪ್ರತ್ಯೇಕವಾಗಿ 60 ಜನರುಳ್ಳ ಸಂಘಗಳನ್ನು ರಚಿಸಿಕೊಂಡರೆ ಆರೋಗ್ಯ ವಿಮೆ, ಪಿಂಚಣಿ, ಸಾಲ ಸೌಲಭ್ಯ ಹೀಗೆ ಅನೇಕ ಸೌಲಭ್ಯ ಪಡೆದುಕೊಳ್ಳಲು ಸರಳವಾಗುತ್ತದೆ ಎಂದರು.
ಆಯುಷ್ಮಾನ್ ಭಾರತ ಕಾರ್ಡ್, ಅಟಲ್ ಪಿಂಚಣಿ ಯೋಜನೆ ಕಾರ್ಡ್, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಗುರುತಿನ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೇ ವ್ಯಾಪಾರ ವ್ಯವಹಾರ ಉತ್ತಮವಾಗಿ ನಡೆಯಲು ಮತ್ತು ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು ಸ್ಥಳವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಮಾತನಾಡಿ, ಸರ್ಕಾರ ಮತ್ತು ಪುರಸಭೆ ಆಡಳಿತ ನೀಡುವ ಸಾಲ ಸೌಲಭ್ಯವನ್ನೇ ಸದ್ಬಳಕೆ ಮಾಡಿಕೊಂಡರೆ ಕಿರುಕುಳಗಳಿಂದ ತಪ್ಪಿಸಿಕೊಳ್ಳಬಹುದು ಎಂದರು.
ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಉದ್ಘಾಟಿಸಿದರು. ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಚಂದ್ರಕಾಂತ ಪಾಟೀಲ, ಪರಿಸರ ಅಭಿಯಂತರ ಪೂಜಾ ಫುಲಾರೆ, ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಲತಾಮಣಿ ಎಲ್., ಸೇಡಂ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಗ್ವಾಲೇಶ ಹೊನ್ನಾಳಿ, ಶಹಾಬಾದ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ರಘುನಾಥ ನರಸಾಳೆ, ಬೀದಿ ವ್ಯಾಪಾರಿಗಳ ಸಂಘದ ರಿಯಾಜ್ ಅಹ್ಮದ್, ವಿಜಯಕುಮಾರ ಫುಲ್ಸೆ, ದೇವರಾಜ ಮಡಿವಾಳ, ಮಶಾಕ್ ಶಹಾ, ನೂರೊಂದಯ್ಯಸ್ವಾಮಿ ಮಠಪತಿ, ಅಲ್ಲಾಭಕ್ಷ, ಮನೋಹರ ತೇಲಕರ, ಹಣಮಯ್ಯ ಗುತ್ತೇದಾರ, ಸುರೇಶ ಮಡಿವಾಳ, ಅಬ್ದುಲ್ ಖಾದರ್, ಮೋಹಸೀನ್ ಪಾಲ್ಗೊಂಡಿದ್ದರು.