Advertisement
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಸರಕಾರದ ಎನ್‌ಆರ್ ಎಚ್‌ಎಂ ಯೋಜನೆಯ ಜನನಿ ಸುರಕ್ಷಾ ವಾಹಿನಿ, ನಗು-ಮಗು ಸೇರಿ 14 ಹಾಗೂ ಆರೋಗ್ಯ ಕವಚ 108 ಅಡಿ 13 ಸೇರಿದಂತೆ ಒಟ್ಟು 27 ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ 2, ಜಿಲ್ಲೆಯ ನಾಲ್ಕೂ ತಾಲೂಕು ಕೇಂದ್ರಗಳಲ್ಲಿ ತಲಾ ಒಂದು, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಸೇರಿದಂತೆ ವಿವಿಧ ಹೋಬಳಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.
Related Articles
Advertisement
ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರ ಮತ್ತು ರೋಣ ತಾಲೂಕಿನ ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಲಾ 108 ಆ್ಯಂಬುಲೆನ್ಸ್‌ಗಳು ದುರಸ್ತಿಗೀಡಾಗಿವೆ. ಅದರಲ್ಲಿ ಬೆಳವಣಕಿ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ಗೆ ತಿಂಗಳೇ ಕಳೆದರೂ ದುರಸ್ತಿ ಭಾಗ್ಯ ಒದಗಿ ಬಂದಿಲ್ಲ. ಈ ಪೈಕಿ ನಾಲ್ಕು ಹೊರತಾಗಿ ಇನ್ನುಳಿದ ಆ್ಯಂಬುಲೆನ್ಸ್‌ಗಳು ಸಣ್ಣಪುಟ್ಟ ದೋಷಗಳಿಂದ ಕುಡಿದ್ದು, ಸ್ಥಗಿತಗೊಂಡಿವೆ. ಇವು ಒಂದೆರಡು ದಿನಗಳಲ್ಲಿ ದುರಸ್ತಿಯಾಗುವ ಸಾಧ್ಯತೆಗಳಿವೆ.
ವಿಮೆ ಕಟ್ಟದೇ ಕೊಳೆಯುತ್ತಿವೆ!: ಆರೋಗ್ಯ ಇಲಾಖೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಿರುವ ಆ್ಯಂಬುಲೆನ್ಸ್ ವಾಹನಗಳಿಗೆ ವಿಮೆ ಕಟ್ಟದ ಹಿನ್ನೆಲೆಯಲ್ಲಿ ತಿಂಗಳುಗಳಿಂದ ಮೂಲೆ ಸೇರಿವೆ. ಅದರಲ್ಲಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ವಿಮೆ ನವೀಕರಣಗೊಳ್ಳದ ಪರಿಣಾಮ ಕಳೆದ ಆರೇಳು ತಿಂಗಳಿಂದ ಆ್ಯಂಬುಲೆನ್ಸ್ ರಸ್ತೆಗಿಳಿದಿಲ್ಲ. ಬೆಟಗೇರಿಗೆ ಹೊಸದಾಗಿ ಮಂಜೂರಾಗಿರುವ ಆ್ಯಂಬುಲೆನ್ಸ್‌ಗೆ ವಿಮೆ ಕಟ್ಟಿಲ್ಲ ಹಾಗೂ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿಲ್ಲ. ಹೀಗಾಗಿ ತಾತ್ಕಾಲಿಕ ನೋಂದಣಿ ಸಂಖ್ಯೆಯಡಿಯೇ ಸ್ಥಳೀಯವಾಗಿ ಸೇವೆ ಒದಗಿಸುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಆ್ಯಂಬುಲೆನ್ಸ್ ಎಂಬುದು ಸಾವು ಬದುಕಿನ ಮಧ್ಯೆ ಹೋರಾಡುವವರಿಗೆ ಸಂಜೀವಿನಿಯಾಗಬೇಕು. ಆದರೆ, ಆ್ಯಂಬುಲೆನ್ಸ್‌ಗಳು ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂರಕ್ಕಿಂತ ಅಧಿಕ ಜನರು ಕೊನೆಯುಸಿರೆಳೆದಿದ್ದಾರೆ. ಆ ಪೈಕಿ ಗಜೇಂದ್ರಗಡದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಓರ್ವ ಯುವಕ, ಗದುಗಿನ ರೋಟರಿ ವೃತ್ತದಲ್ಲಿ ಸಂಭವಿಸಿದ ಅಫಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇನ್ನು, ಹೊರಗುತ್ತಿಗೆ ನೌಕರರನೊಬ್ಬ ವೇತನ ಬಾಕಿ ಉಳಿಸಿಕೊಂಡಿರುವುದನ್ನು ಖಂಡಿಸಿ ಜಿ.ಪಂ. ಲೆಕ್ಕಾಧಿಕಾರಿ ಕಚೇರಿಯಲ್ಲೇ ವಿಷ ಸೇವಿಸಿದಾಗಲೂ ಆ್ಯಂಬುಲೆನ್ಸ್ ಬರಲಿಲ್ಲ. ಹೀಗಾಗಿ ಆಟೋವೊಂದರಲ್ಲಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ, ಬಹುತೇಕ ಆ್ಯಂಬುಲೆನ್ಸ್ ಹುಬ್ಬಳ್ಳಿ, ಇಲ್ಲವೇ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತದೆ ಎಂಬ ಸಿದ್ಧ ಉತ್ತರ ಸಿಗುತ್ತದೆ ಎಂಬುದು ಸಾರ್ವಜನಿಕರ ಆರೋಪ.
ಆಂಬ್ಯುಲೆನ್ಸ್‌ಗೆ ಸಾರಥಿ ಇಲ್ಲ!ಮುಂಡರಗಿ ತಾಲೂಕಿನಲ್ಲಿರುವ ಮೂರು ಆಂಬ್ಯುಲೆನ್ಸ್‌ಗಳ ಪೈಕಿ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ತುರ್ತು ವಾಹನಕ್ಕೆ ಚಾಲಕನೇ ಇಲ್ಲ. ಈ ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದ ಚಾಲಕನ ಅವಧಿ ಮುಕ್ತಾಯಗೊಂಡಿದೆ. ತಾಲೂಕಿನ ‘ಡಿ’ ಗ್ರುಪ್ ಸೇವೆಯನ್ನು ಹೊರ ಗುತ್ತಿಗೆಗೆ ನೀಡಲಾಗಿದ್ದರೂ ಗುತ್ತಿಗೆದಾರ ಹಾಗೂ ಹಳೇ ಸಿಬ್ಬಂದಿ ನಡುವಿನ ಹಗ್ಗಜಗ್ಗಾಟದಿಂದ ಈ ಹುದ್ದೆ ಖಾಲಿ ಉಳಿದಿದೆ. ಹೀಗಾಗಿ ಕೆಲ ದಿನಗಳಿಂದ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ವಾಹನ ನಿಂತಲ್ಲೇ ತುಕ್ಕು ಹಿಡಿಯುತ್ತಿದೆ ಎಂಬುದು ಗಮನಾರ್ಹ. ಬೆಟಗೇರಿ ಹಾಗೂ ಶಿರಹಟ್ಟಿ ಆ್ಯಂಬುಲೆನ್ಸ್‌ಗಳ ವಿಮೆ ಪಾವತಿಗೆ ಸಂಬಂಧಿಸಿ ಕೆ-2 ಅಡಿ ಅನುದಾನ ಲಭಿಸಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಇನ್ನುಳಿದಂತೆ ವಾಹನಗಳು ದುರಸ್ತಿಗೀಡಾಗುತ್ತಿದ್ದಂತೆ ಆರ್‌ಟಿಒ ಅಧಿಕಾರಿಗಳಿಂದ ವರದಿ ಪಡೆದು ರಿಪೇರಿ ಮಾಡಿಸಲಾಗುತ್ತದೆ. ಸರಕಾರದಿಂದ ಮತ್ತಷ್ಟು ಹೊಸ ಆ್ಯಂಬುಲೆನ್ಸ್‌ಗಳು ಲಭಿಸುವ ನಿರೀಕ್ಷೆಯಿದೆ.
.ಸತೀಶ್ ಬಸರಿಗಿಡದ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ವೀರೇಂದ್ರ ನಾಗಲದ್ನಿನಿ