Advertisement

ವನವಾಸದ ಟೈಂ ಟೇಬಲ್‌

09:00 AM Apr 14, 2019 | mahesh |

ರಾಮಾಯಣದ ವ್ಯಾಖ್ಯಾನಕಾರರ ಅಭಿಪ್ರಾಯದಂತೆ ಪ್ರಭು ಶ್ರೀರಾಮಚಂದ್ರನ ವನವಾಸಕಾಲದ ವಿವರಗಳು ಹೀಗಿವೆ.

Advertisement

ಚೈತ್ರಶುದ್ಧ ಪಂಚಮಿಯಂದು ಸೀತಾ-ಲಕ್ಷ್ಮಣಸಮೇತನಾದ ಶ್ರೀರಾಮನಿಂದ ವನವಾಸಕ್ಕಾಗಿ ಅಯೋಧ್ಯೆಯಿಂದ ನಿರ್ಗಮನ. ಅಂದು ರಾತ್ರಿ ತಮಸಾನದಿಯ ತೀರದಲ್ಲಿ ವಾಸ. ಷಷ್ಠಿಯಂದು ಶೃಂಗವೇರಪುರ-ಗುಹಸಂದರ್ಶನ-ಸಪ್ತಮಿಯಂದು ಮರದ ಕೆಳಗೆ ನಿದ್ದೆ. ಅಷ್ಟಮಿಯಂದು ಭರದ್ವಾಜಾಶ್ರಮ-ನವಮಿಯಂದು ಯಮುನಾತೀರದಲ್ಲಿವಾಸ. ದಶಮಿಯಂದು ಚಿತ್ರಕೂಟ-ಅಂದೇ ಸುಮಂತ್ರನು ಅಯೋಧ್ಯೆಗೆ ಹಿಂದಿರುಗಿದ್ದು.

ದಶಮಿಯರಾತ್ರಿಯೇ ದಶರಥ ನಿರ್ಯಾಣವಾಗಿದ್ದು. ಸಚಿವರ ಸಲಹೆಯಂತೆ ಏಕಾದಶಿಯಂದು ತೈಲದ್ರೋಣಿಯಲ್ಲಿ ಶರೀರದ ರಕ್ಷಣೆ. ದ್ವಾದಶಿಯಂದು ಕೇಕಯಕ್ಕೆ ದೂತಪ್ರೇಷಣ-ತ್ರಯೋದಶೀ ಹಾಗೂ ಚತುರ್ದಶಿಗಳಂದು ಪ್ರಯಾಣಮಾಡಿ ಪೌರ್ಣಮಿಯಂದು ದೂತರು ಕೇಕಯವನ್ನು ತಲುಪುತ್ತಾರೆ. ಚೈತ್ರ ಬಹುಳ ಪ್ರತಿಪತ್‌ ದಿನದಂದು ಭರತನ ಪ್ರಸ್ಥಾನ, ಮಾರ್ಗದಲ್ಲಿ ಏಳುದಿನ ವಸತಿಯನ್ನು ಮಾಡಿ ಎಂಟನೆಯ ದಿನ ರಾತ್ರಿಯೂ ಪ್ರಯಾಣಿಸಿದ ಭರತ-ಶತ್ರುಘ್ನರಿಂದ ನವಮಿಯ ಪ್ರಾತಃಕಾಲ ಅಯೋಧ್ಯಾಪ್ರವೇಶ. ಅಂದೇ ದಶರಥನ ದಹನಸಂಸ್ಕಾರವೂ ನಡೆಯಿತು. ಅಲ್ಲಿಂದ ಮುಂದೆ ಹದಿಮೂರುದಿನ ವೈಶಾಖಶುಕ್ಲ ಚತುರ್ಥೀ-ಪಂಚಮೀಪರ್ಯಂತ ಅಂತ್ಯಕ್ರಿಯಾವಿಧಿಗಳು ನೆರವೇರಿದವು. ಷಷ್ಠಿಯಂದು ದಹನದೇಶ ಶೋಧ-ಸಪ್ತಮಿಯಂದು ಶ್ರೀರಾಮನ ಪ್ರತಿನಿವರ್ತನಕ್ಕಾಗಿ ಒತ್ತಾಯಿಸಲು ವನಕ್ಕೆ ಹೋಗಲು ಮಾರ್ಗಶೋಧಕ್ಕಾಗಿ ಕರ್ಮಕರರ ಪ್ರೇಷಣ. ದಶಮಿಯವರೆಗೆ ಕರ್ಮಚಾರಿಗಳಿಂದ ಮಾರ್ಗಶೋಧನವಾಗುತ್ತದೆ. ಏಕಾದಶಿಯಂದು ಭರತನ ವನಾಗಮನ-ಅಂದುರಾತ್ರಿ ಗಂಗಾತೀರದಲ್ಲೇ ವಾಸ. ದ್ವಾದಶಿಯಂದು ಭರದ್ವಾಜಾಶ್ರಕ್ಕೆ ಆಗಮನ. ತ್ರಯೋದಶೀ ದಿನ ಚಿತ್ರಕೂಟದಲ್ಲಿ ಶ್ರೀರಾಮ ಸಮಾಗಮ. ಚತುರ್ದಶೀ ಪೌರ್ಣಿಮಾ,ಪ್ರತಿಪತ್‌ ಗಳಂದು ಅಲ್ಲಿಯೇ ವಾಸ. ವೈಶಾಖ ಬಹುಳ ದ್ವಿತೀಯಾದಂದು ಭರತನ ಅಯೋಧ್ಯಾಗಮನ. ಚತುರ್ಥಿಯಂದು ಅಯೋಧ್ಯಾಪ್ರವೇಶವಾಯಿತು. ವೈಶಾಖ ಬಹುಳ ಪಂಚಮಿಯಂದು ಚಿತ್ರಕೂಟದಿಂದ ಶ್ರೀರಾಮಸೀತಾಲಕ್ಷ್ಮಣರ ನಿರ್ಗಮನ.

ಮುಂದೆ ಅತ್ರ್ಯಾಶ್ರಮಪ್ರವೇಶ-ವಿವಿಧ ಋಷ್ಯಾಶ್ರಮಗಳಲ್ಲಿ ಮುನಿಮಂಡಲಗಳಲ್ಲಿ ಹತ್ತೂವರೆ ವರ್ಷವಾಸ. ಉಳಿದಕಾಲ ಪಂಚವಟಿಯಲ್ಲಿ ನೆಲೆ. ಹೀಗೆ ಹದಿಮೂರು ವರ್ಷ ಕಳೆದು ಹದಿನಾಲ್ಕನೆಯ ವರ್ಷದ ಚೈತ್ರಮಾಸಕ್ಕೆ ಕಾಲಿಟ್ಟಾಗ ರಾವಣನಿಂದ ಸೀತಾಪಹರಣವಾಗುತ್ತದೆ. ಸಹೋದರರಿಂದ ಸೀತಾನ್ವೇಷಣೆ- ವೈಶಾಖದಲ್ಲಿ ಸುಗ್ರೀವದರ್ಶನವಾಗುತ್ತದೆ. ಆಷಾಢಮಾಸದಲ್ಲಿ ವಾಲಿವಧೆ. ಆಶ್ವಯುಜಮಾಸದಲ್ಲಿ ಸೈನ್ಯೋದ್ಯೋಗ-ಫಾಲ್ಗುಣಮಾಸದಲ್ಲಿ ಸಾಗರತೀರದಲ್ಲಿ ಪ್ರಾಯೋಪವೇಶ. ಫಾಲ್ಗುಣಶುದ್ಧ ಚತುರ್ದಶಿಯಂದು ಲಂಕಾದಹನವಾಯಿತು. ಅದೇ ಮಾಸದ ಅಮಾವಾಸ್ಯೆಯಂದು ರಾವಣವಧೆ ಕೂಡ ನಡೆಯಿತು. ಚೈತ್ರಶುಕ್ಲ ಪ್ರತಿಪತ್‌ ದಿನ ರಾವಣನ ದೇಹಸಂಸ್ಕಾರವಾಯಿತು. ದ್ವಿತೀಯಾದಂದು ವಿಭೀಷಣಪಟ್ಟಾಭಿಷೇಕ, ಸೀತಾಪ್ರಾಪ್ತಿ, ದೇವತಾದರ್ಶನ -ತೃತೀಯಾದಂದು ಲಂಕೆಯಿಂದ ನಿರ್ಗಮನ. ಚತುರ್ಥೀಯಂದು ಮತ್ತೆ ಕಿಷ್ಕಿಂಧಾವಾಸ. ಪಂಚಮಿಯಂದು ಮುನಿಯ ಆದೇಶದಂತೆ ಭರದ್ವಾಜಾಶ್ರಮದಲ್ಲಿ ವಾಸ. ಷಷ್ಠಿ ಪುಷ್ಯನಕ್ಷತ್ರದಂದು ಪ್ರಭು ಶ್ರೀರಾಮಚಂದ್ರನು ಸೀತಾಲಕ್ಷ್ಮಣಸಹಿತನಾಗಿ ಅಯೋಧ್ಯೆಯನ್ನು ಪ್ರವೇಶಿಸಿದ.

ಪೂರ್ಣೇ ಚತುರ್ದಶೇ ವಷೇ ಪಂಚಮ್ಯಾಂ ಲಕ್ಷ್ಮಣಾಗ್ರಜಃ|
ಭರದ್ವಾಜಾಶ್ರಮಂ ಪ್ರಾಪ್ಯ ವವನೆ ನಿಯತೋ ಮುನಿಮ್‌ ||
ಎಂಬ ಮಾತಿನಿಂದ ಪಂಚಮಿಯಂದು ಭರದ್ವಾಜಾಶ್ರಮಪ್ರವೇಶ ಎಂದು ದೃಢಪಡುತ್ತದೆ.
“ಅವಿಘ್ನಂಪುಷ್ಯಯೋಗೇನ ಶೊ ರಾಮಂ ದ್ರಷ್ಟುಮರ್ಹಸಿ’ ಎಂದು ಆಂಜನೇಯನು ಭರತನೊಂದಿಗೆ ಹೇಳಿದ ಮಾತಿನಿಂದ ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದ್ದು ಪುಷ್ಯನಕ್ಷತ್ರದಲ್ಲಿಯೇ ಎಂಬುದು ಸ್ಪಷ್ಟವಾಗುತ್ತದೆ.
ಚೈತ್ರಮಾಸದಲ್ಲಿ ಹೊರಟಿದ್ದರಿಂದ ಚೈತ್ರಮಾಸದಲ್ಲಿಯೇ ವನವಾಸದ ಪರಿಸಮಾಪ್ತಿ.

Advertisement

ಸತ್ಯನಾರಾಯಣ ಶರ್ಮ, ಅಶೋಕವನ, ಗೋಕರ್ಣ

Advertisement

Udayavani is now on Telegram. Click here to join our channel and stay updated with the latest news.

Next