Advertisement

ಆಮ್ಲಜನಕ ಬೆನ್ನಿಗೆ ಕಟ್ಟಿಕೊಳ್ಳುವ ಕಾಲ ಬರುತ್ತೆ: ಸಚಿವ

07:07 AM Jun 06, 2019 | Lakshmi GovindaRaj |

ಚಾಮರಾಜನಗರ: ಆಮ್ಲಜನಕವನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾದ ಪರಿಸ್ಥಿತಿ ಹತ್ತಿರದಲ್ಲೇ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಸ್ಥಿತಿ ಬಾರದಿರಲು ಪ್ರತಿಯೊಬ್ಬರೂ ಮರಸಸಿಗಳನ್ನು ಬೆಳೆಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

Advertisement

ನಗರದ 20ನೇ ವಾರ್ಡಿನ ಮಹದೇಶ್ವರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಸಿ ನೆಟ್ಟು ಪೋಷಿಸಿ: ಪರಿಸರ ಮಾಲಿನ್ಯದ ಪರಿಣಾಮವನ್ನು ಇಡೀ ಜಗತ್ತೇ ಎದುರಿಸುತ್ತಿದೆ. ಆಮ್ಲಜನಕದ ಸಿಲಿಂಡರ್‌ ಅನ್ನು ಜನರು ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾದ ಸ್ಥಿತಿ ಬರಲಿದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಇದಕ್ಕೆಲ್ಲಾ ಪರಿಹಾರ ಮರ-ಸಸಿಗಳನ್ನು ಹೆಚ್ಚೆಚ್ಚು ಬೆಳೆಸಿ ಪೋಷಿಸುವುದಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಹಾಗೂ ಮುಂದಿನ ಪೀಳಿಗೆ ಕಾಪಾಡುತ್ತದೆ. ಪ್ರಕೃತಿ ಮುನಿದರೆ ಅಪಾರ ಹಾನಿ ಸಂಭವಿಸಲಿದೆ. ಇದನ್ನು ತಿಳಿದ ಜನರು ಮರ-ಸಸಿಗಳನ್ನು ಕಡಿಯುವುದನ್ನು ನಿಲ್ಲಿಸಿ ಬೆಳೆಸುವ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ಲಾಸ್ಟಿಕ್‌ ನಿಷೇಧವಾಗಲಿ: ದೇಶವನ್ನು ಕಾಡುತ್ತಿರುವ ಮತ್ತೂಂದು ಸಮಸ್ಯೆ ಪ್ಲಾಸ್ಟಿಕ್‌. ಇದು ಕೊಳೆಯದೆ ಭೂಮಿ ಮೇಲೆ ರಾಸಾಯನಿಕ ಅಂಶದ ಪ್ರಭಾವ ಬೀರಿ ಭೂ ಮಾಲಿನ್ಯ, ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ. ಇದರ ಸಂಪೂರ್ಣ ಬಳಕೆ ನಿಷೇಧವಾದಾಗ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

Advertisement

ಒಂದು ಮನೆ, ಒಂದು ಊರು ಕಟ್ಟುವ ರೀತಿ ಪ್ರತಿ ಮನೆ ಹಾಗೂ ಗ್ರಾಮಕ್ಕೆ ಮರ-ಸಸಿ ಬೆಳೆಸುವ ಭಾವನೆ ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಮಾತ್ರ ಅರಣ್ಯ ಸಂರಕ್ಷಣೆ ಆಗುತ್ತದೆ ಎಂದರು.

ಪರಿಸರ ಪ್ರೇಮ ಬೆಳೆಸಿಕೊಳ್ಳಿ: ನಗರಸಭಾ ಸದಸ್ಯ ಸಿ.ಜಿ.ಚಂದ್ರಶೇಖರ್‌ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಅದರಲ್ಲೂ ಶಾಲಾ ಮಕ್ಕಳಲ್ಲಿ ಮರ-ಸಸಿ ಬೆಳೆಸುವ ಗುಣ ಬೆಳೆಸಿ ಈ ಮೂಲಕ ಸಮಾಜದಲ್ಲಿ ಪರಿಸರ ಪ್ರೇಮ ಬೆಳೆಸಬಹುದು ಎಂದರು.

ಸರ್ಕಾರಿ ಶಾಲೆಗೆ ಸೇರಿಸಿ: ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು. ಸರ್ಕಾರಿ ಶಾಲೆಗೆ ಸರ್ಕಾರ ವಿವಿಧ ಮೂಲಭೂತ ಸೌಕರ್ಯ, ಉತ್ತಮ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಹಾಲು, ಬಿಸಿಯೂಟ, ವಿದ್ಯಾರ್ಥಿ ವೇತನ ನೀಡಿ ಉತ್ತಮ ಶಿಕ್ಷಣ ನೀಡುತ್ತಿದೆ. ಹೀಗಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ವಿದ್ಯಾವಂತರನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷೆ ಮಂಗಳಾ, ಶಿಕ್ಷಣ ಸಂಯೋಜಕ ಸಿದ್ದಮಲ್ಲಪ್ಪ ಸಿ.ಆರ್‌.ಪಿ ಮಹದೇವಸ್ವಾಮಿ, ಮುಖ್ಯ ಶಿಕ್ಷಕ ನಂಜುಂಡಸ್ವಾಮಿ ಹಾಗೂ ಎಸ್‌ಡಿಎಂಸಿ ಸದಸ್ಯರು ಪೋಷಕರು -ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next