Advertisement

ಜಲಪ್ರತಿನಿಧಿ ಆಗುವ ಸಮಯ

07:39 PM Aug 05, 2019 | keerthan |

ಇಸ್ರೇಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಗಾಧವಾದ ಪ್ರಾಕೃತಿಕ ಸಂಪತ್ತಿದೆ. ಆದರೂ ನಾವು ಕೃಷಿರಂಗದಲ್ಲಿ ಅವರಿಗಿಂತ ಹಲವಾರು ಪಟ್ಟು ಹಿಂದುಳಿದಿದ್ದೇವೆ. ಇದಕ್ಕೆ ಕಾರಣಗಳು ಹಲವಾರಿವೆ. ಮೊದಲನೆಯದಾಗಿ, ಪ್ರಾಕೃತಿಕ ಸಂಪತ್ತಿನ ಸದ್ಬಳಕೆ ಬಗ್ಗೆ ನಾವು ತೋರುವ ಉದಾಸೀನ. ಇದು ಸರ್ಕಾರದ ಮಟ್ಟದಲ್ಲಿಯೂ ಇದೆ, ಕೃಷಿಕರ ಮಟ್ಟದಲ್ಲಿಯೂ ಇದೆ (ಈ ಮಾತಿಗೆ ಅಪವಾದಗಳೂ ಇವೆ. ಆದರೆ ಇಂಥ ಉದಾಹರಣೆಗಳು ಕಡಿಮೆ). ಇದು ಕೂಡ ಕೃಷಿಯಲ್ಲಿ ನಾವು ಹಿಂದುಳಿಯಲು ಪ್ರಮುಖ ಕಾರಣ.

Advertisement

ಇಸ್ರೇಲಿನ ಪರಿಸ್ಥಿತಿ ಹೀಗಿದೆ
ಅಗಾಧ ಬಿಸಿಲು, ಅತಿಕಡಿಮೆ ಮಳೆ. ಈ ಎರಡನ್ನೂ ಅವರು ಬಳಸುತ್ತಾರೆ. ಅವರು ಮಾಡುವಷ್ಟು ಬಿಸಿಲುಕೊಯ್ಲು, ಮಳೆಕೊಯ್ಲನ್ನು ಜಗತ್ತಿನ ಮತ್ಯಾವ ರಾಷ್ಟ್ರವೂ ಮಾಡುವುದಿಲ್ಲ. ಇವುಗಳ ಮಹತ್ವವನ್ನು ಎಳವೆಯಿಂದಲೇ ಕಲಿಸುವುದು ಅಲ್ಲಿಯ ವಿಶೇಷ. ಇದರಿಂದ ಮಕ್ಕಳು ವಯಸ್ಕರಾಗುವುದರೊಳಗೆ ಪ್ರಾಕೃತಿಕಸಂಪತ್ತಿನ ಸದ್ಬಳಕೆಯ ಸಾಕ್ಷರರಾಗಿರುತ್ತಾರೆ. ಕರ್ನಾಟಕದಲ್ಲಿ ಹನಿನೀರಾವರಿ, ತುಂತುರು ನೀರಾವರಿ ತಂತ್ರಜ್ಞಾನ ಇಂದು ಅತಿಹೆಚ್ಚು ಬಳಕೆಯಲ್ಲಿದೆ. ಇದರ ಮೂಲ ಇಸ್ರೇಲ್‌ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಜೊತೆಗೆ ಅವರು 100ಕ್ಕೆ 90%ರಷ್ಟು ಸೌರಶಕ್ತಿಯ ಸದ್ಬಳಕೆ ಮಾಡುತ್ತಾರೆ. ಪ್ರತಿಕೃಷಿಕರ ಮನೆಗಳಲ್ಲಿ, ಕೃಷಿಭೂಮಿಯಲ್ಲಿ ಸೌರಶಕ್ತಿಯ
ಬಳಕೆಯಿದೆ. ಈ ನಿಟ್ಟಿನಲ್ಲಿ ಅತ್ಯಾಧುನಿಕ ಎನ್ನುವ ತಂತ್ರಜ್ಞಾನವನ್ನು ಅಲ್ಲಿ ಬಳಸಲಾಗಿದೆ. ಇದರಿಂದ ಕೃಷಿವೆಚ್ಚ ಗಣನೀಯವಾಗಿ ತಗ್ಗುತ್ತದೆ.

ನಮ್ಮಲ್ಲಿಯೂ ಗೋಬರ್‌ ಗ್ಯಾಸ್‌ ಇವೆ. ಅವುಗಳ ಸ್ಲರಿಯನ್ನು ವ್ಯವಸಾಯಕ್ಕೆ
ಬಳಕೆ ಮಾಡುವ ಬಗೆಯೂ ತಿಳಿದಿದೆ. ಆದರೆ ಅಲ್ಲಿ ಜೈವಿಕಅನಿಲಗಳನ್ನು  ಹೀರಿಕೊಂಡುಬೆಳವಣಿಗೆ ಹೊಂದುವ ಜಲಸಸ್ಯಗಳ ಕೃಷಿಯನ್ನೂ
ಮಾಡುತ್ತಾರೆ. ಇದನ್ನು ಆಲ್ಗೆ ಎಂದು ಕರೆಯಲಾಗುತ್ತದೆ. ಇದರಿಂದ ಮತ್ತೆ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ. ಆ ಅನಿಲದಿಂದ ಜನರೇಟರ್‌ಗಳನ್ನು ಚಾಲೂ ಮಾಡಿ ವಿದ್ಯುತ್‌ ಪಡೆಯುತ್ತಾರೆ.

ನೀರಿಗೂ ರೇಷನ್‌ ಕಾರ್ಡ್‌!
ನೀರಿನ ಬಳಕೆಯ ವಿಚಾರದಲ್ಲಿ ಅವರು ತುಂಬಾ ಎಚ್ಚರ ವಹಿಸುತ್ತಾರೆ. ಅಲ್ಲೆಲ್ಲಾ ಕೊಳವೆಬಾವಿ, ಅಣೆಕಟ್ಟುಗಳ ನೀರನ್ನು ನೇರವಾಗಿ ಕೃಷಿಕಾರ್ಯಕ್ಕೆ
ಬಳಸುವಂತಿಲ್ಲ. ಬದಲಾಗಿ ಈಗಾಗಲೇ ಬೇರೆಬೇರೆ ಉದ್ದೇಶಗಳಿಗಾಗಿ ಬಳಕೆಯಾಗಿ, ಸಂಸ್ಕರಿಸಲ್ಪಟ್ಟ ನೀರನ್ನು ಕೃಷಿಕಾರ್ಯಕ್ಕೆ ಬಳಸುತ್ತಾರೆ. ನಮ್ಮಲ್ಲಿ ಬೃಹತ್‌ ಕಾಲುವೆಗಳ ಮೂಲಕ ಕೃಷಿಭೂಮಿಗಳಿಗೆ ನೀರು
ಪೂರೈಸಲಾಗುತ್ತದೆ. ಇದು ನಂತರ ಸಣ್ಣಸಣ್ಣ ಕಾಲುವೆಗಳಮುಖಾಂತರ ಜಮೀನುಗಳಿಗೆ ತಲುಪುತ್ತದೆ. ಯಾವಬೆಳಗೆ ಎಷ್ಟುನೀರು ಬೇಕು ಎಂಬ ಲೆಕ್ಕಾಚಾರ ಮಾಡದೆ ಎಲ್ಲವಕ್ಕೂ ಒಂದೇ ತೆರನಾಗಿ ನೀರನ್ನು ಬಳಸಿಕೊಳ್ಳುತ್ತೇವೆ.

ಅಲ್ಲಿ ನೀರಿನ ಪೋಲಿಗೆ ಅವಕಾಶವೇ ಇಲ್ಲ. ಪೈಪುಗಳ ಮೂಲಕ ನೀರು ಹರಿಸಲಾಗುತ್ತದೆ. ಇಂಥ ಬೆಳೆಗೆ, ಇಂತಿಷ್ಟು ವಿಸ್ತೀರ್ಣದ ಜಮೀನಿಗೆ ಇಂತಿಷ್ಟೆ ನೀರು ಎಂದು ನಿಗದಿಪಡಿಸಲಾಗಿರುತ್ತದೆ. ಇದೂ ಕೂಡ ಒಂದು ರೀತಿಯಲ್ಲಿ “ವಾಟರ್‌ ರೇಷನ್‌’ ಅಂದರೆ ನೀರಿನ ಪಡಿತರ ಪದ್ಧತಿ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಅತಿ ಕಡಿಮೆ ನೀರಿನಲ್ಲಿ ಬದುಕಿ ಬೆಳೆಯುವ ಬೆಳೆಗಳ ತಳಿಗಳನ್ನು ಅಲ್ಲಿ ಅಭಿವೃದ್ಧಿಪಡಿಸಲಾಗಿರುವುದು. ಅಲ್ಲಿ ಫ್ಲಡ್‌ ಇರಿಗೇಷನ್‌ ಎನ್ನುವುದೇ ಇಲ್ಲ. ಅಂದರೆ ಇಸ್ರೇಲಿನಲ್ಲಿ ಧಾರೆಯಾಗಿ ಹರಿಯುವ ನೀರನ್ನು ಬಳಸಿಕೊಂಡು ಕೃಷಿ ಮಾಡುವ ಪದ್ಧತಿ ಇಲ್ಲವೇ ಇಲ್ಲ. ಪ್ರತಿ ಕೃಷಿ ಭೂಮಿಯಲ್ಲಿಯೂ ಬೆಳೆಯುವ ಬೆಳೆಗೆ ಅನುಸಾರವಾಗಿ ಹನಿನೀರಾವರಿ ಪದ್ಧತಿ
ಅಥವಾ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿರಬೇಕು. ಕೃಷಿತಜ್ಞರು ಸೂಚಿಸಿದ ಪ್ರಮಾಣದಷ್ಟೇ ನೀರನ್ನು ಬಳಸಬೇಕು.

Advertisement

ಸಮನ್ವಯವೇ ಮುಖ್ಯ
ಕೃಷಿಯ ಜೊತೆಗೆ ನಮ್ಮಲ್ಲಿ ಆಡು ಕುರಿ ಮತ್ತು ಕೋಳಿಸಾಕಣೆಯನ್ನು ಉಪ ಕಸುಬು ಎನ್ನುತ್ತೇವೆ. ಆದರೆಅಲ್ಲಿನಕೃಷಿಕರು ಅವುಗಳ ಬೃಹತ್‌ ಘಟಕಗಳನ್ನೇ ನಿರ್ವಹಣೆ ಮಾಡುತ್ತಾರೆ. ಪ್ರತಿಯೊಂದು ಕೀಬೂತ್‌ಗಳು ಸಹ ತಾವು ಹೊಂದಿರುವ ಕೃಷಿಭೂಮಿಗಳಲ್ಲಿ ಏಕಬೆಳೆಯನ್ನೇ ಪುನರಾವರ್ತನೆ ಮಾಡುತ್ತಾ ಹೋಗುವುದಿಲ್ಲ. ಬೆಳೆಗಳನ್ನು ಬದಲಿಸಲಾಗುತ್ತದೆ. ಜೊತೆಗೆ ನಿಖರವಾಗಿ ಇಂತಿಷ್ಟೆ ಪ್ರಮಾಣದ ಪೋಷಕಾಂಶಗಳನ್ನೂ ಬೆಳೆಗಳಿಗೆ
ಪೂರೈಸಲಾಗುತ್ತದೆ. ಇಸ್ರೇಲಿನ ಕೃಷಿರಂಗದ ಸಾಧನೆಗೆ ಬಹುಮುಖ್ಯ ಕಾರಣ
ಕೃಷಿತಜ್ಞರು ಮತ್ತು ಕೃಷಿಕರ ನಡುವಿನ ಸಮನ್ವಯ. ಇವರು ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಅಲ್ಲಿಯ ಕೃಷಿತಂತ್ರಜ್ಞಾನ ನಿರಂತರವಾಗಿ ಅಭಿವೃದ್ಧಿಯಾಗುತ್ತಿದೆ.

ಅಲ್ಲಿದೆ ಕೂಡು ಕೃಷಿ
ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ನಾವು ಸಾಧಿಸಿದ್ದೇವೆ. ಆದರೆ ಕೃಷಿರಂಗದಲ್ಲಿ ಸೊಸೈಟಿ, ಬ್ಯಾಂಕು ಇತ್ಯಾದಿ ಹೊರತುಪಡಿಸಿದರೆ ಸಹಕಾರಿ ತತ್ವದಲ್ಲಿ ಕೃಷಿ ನಡೆಸುವ ಉದಾಹರಣೆಗಳು ನಮ್ಮಲ್ಲಿ ಅತಿವಿರಳ. ಇದರಿಂದ ವರ್ಷದಿಂದ ವರ್ಷಕ್ಕೆ ಕೃಷಿ ಉತ್ಪಾದನೆ ಇಳಿಮುಖವಾಗುತ್ತಿದೆ. ಹಿಡುವಳಿಗಳು ಸಣ್ಣಸಣ್ಣ ತುಂಡುಗಳಾಗಿ ಒಡೆದುಹೋಗುತ್ತಿರುವುದು ಇದಕ್ಕೆ ಕಾರಣ. ಆದರೂ ನಾವು ಇನ್ನೂ ಎಚ್ಚೆತ್ತಿಲ್ಲ. ಈ ವಿಷಯದಲ್ಲಿಯೂ ನಾವು
ಇಸ್ರೇಲಿನಿಂದ ಕಲಿಯಬೇಕಿರುವುದು ಅಪಾರ. ಅಲ್ಲಿಯ ಕೀಬೂತ್‌ಗಳು ಸಹಕಾರಿ ಕೃಷಿತತ್ವದ ಯಶಸ್ಸಿಗೆ ಒಂದು ಪ್ರಮುಖ ಮಾದರಿ. ಅಲ್ಲಿ ನೂರು, ಸಾವಿರ ಸಂಖ್ಯೆಯಲ್ಲಿ ಕುಟುಂಬಗಳು ಒಟ್ಟಿಗೆ ಕೃಷಿ ಮಾಡುತ್ತವೆ. ಬಂದ ಕೃಷಿಉತ್ಪಾದನೆಯನ್ನೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಜಗಳ, ವೈಮನಸ್ಯದ ಮಾತೇ ಅಲ್ಲಿ ವಿರಳ.

ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next