ಪ್ರಾಯಶಃ ಮುಂಜಾನೆ ಐದು ಗಂಟೆ ಇರಬೇಕು. ಇನ್ನೂಕತ್ತಲೆ. ಆದರೆ ರೂಮಿನ ಎದುರಿನ ಹೊಂಗೇಮರದಲ್ಲಿ ಆ ಗಂಡು ಸನ್ ಬರ್ಡ್ “ಟುವ್ವಿ ಟುವ್ವಿ’ ಎಂದು ಅವಸರದಲ್ಲಿ ಏನೋ ವರದಿ ಒದರುತ್ತಿದೆ. ಇದು ಪರವಾಗಿಲ್ಲ. ಹೋದ ವರ್ಷ ಇಲ್ಲಿ ಮನೆ ಮಾಡಿದ್ದನ್ನಲ್ಲ ಆ ಕೋಗಿಲೆ, ಮಾರಾಯ ಬೆಳಿಗ್ಗೆ ನಾಕೂವರೆಗೇಕುಹೂ ಕುಹೂ ಅಂತ ಜೋರಾಗಿ ಹಾಡ್ತಿದ್ದ.
ಬಾಲ್ಕನಿಯಿಂದಾಚೆಗೆ ಕೈ ಹಾಕಿಕತ್ತು ಹಿಚುಕಿ ಬಿಡೋ ಅಷ್ಟುಕೋಪ ಬರ್ತಿತ್ತು. ನನ್ನ ಪುಣ್ಯ, ಈ ವರ್ಷ ಎರಡು ಮರದಾಚೆ ಹೋಗಿ ಮನೆ ಮಾಡಿದ್ದಾನೆ. ಐದೂವರೆಗೆ ಸರಿಯಾಗಿ ಅಕ್ಕಪಕ್ಕದ ಮನೆಯವರು ಬಾಗಿಲಿಗೆ ನೀರು ಹಾಕುವ ಸದ್ದು. ಆದರೆ ಕಣ್ಣು ಬಿಡಲಾಗ್ತಿಲ್ಲ. ಈಗಲೇ ಹೊರಗೆ ಹೋದರೆ ಒಂದೆರಡು ಸುಂದರ ರಂಗೋಲಿ ಕಂಡೀತು.
ಎದುರು ಮನೆಗೆ ಈಗಕ್ಯಾನ್ ಹಾಲು ಬರುತ್ತದೆ. ಸ್ಕೂಟರಿನ ಎರಡೂ ಬದಿಗಳಲ್ಲಿದೊಡ್ಡಕ್ಯಾನ್‌ಕಟ್ಟಿದ ಆತ ಮನೆಯಮುಂದೆ ಬಂದು ಹಾಲೂ—— ಎಂದು ಕೂಗುತ್ತಾನೆ. ಅಷ್ಟು ಹೊತ್ತಿಗೆ ಎದ್ದು ಹಾಲುಹಾಕಿಸಿಕೊಳ್ಳಲು ಆಗುವುದಿಲ್ಲ ಎನ್ನುವಕಾರಣಕ್ಕೇ ಪ್ಯಾಕೆಟ್ ಹಾಲಿನ ಮೊರೆ ಹೋಗಿದ್ದೇನೆ ನಾನು.
ಆರೂವರೆಗೆಲ್ಲಾ ತಾರಸಿಯ ಮೇಲೆ ವಾಕ್ ಮಾಡಲು ಹೋಗುತ್ತೇನೆ. ಕೋವಿಡ್ ಪ್ರಭಾವ. ಸುತ್ತಲಿನ ಮನೆಗಳಲ್ಲೂ ಇದೇ ಪರಿಸ್ಥಿತಿ. ಆಚೆಮನೆಯ ಅಜ್ಜಿ ಇಯರ್‌ಫೋನ್ ಸಿಕ್ಕಿಸಿಕೊಂಡು ಅಮೆರಿಕದಲ್ಲಿರುವ ಮೊಮ್ಮಕ್ಕಳ ಜೊತೆ ಮಾತನಾಡುತ್ತಲೇ ವಾಕ್ ಮಾಡುತ್ತಾರೆ.ಕೆಳಗೆ ಸಹ ವಾಕಿಂಗ್‌ಹೋಗುವವರ ಸದ್ದು. ಮುಂಚೆ ಪಾರ್ಕಿಗೆ ಹೋಗ್ತಿದ್ದ ಇವರೆಲ್ಲಾ ಈಗ ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಸಾಮಾಜಿಕ ಅಂತರವನ್ನೆಲ್ಲಾ ಮನೆಯಲ್ಲಿಯೇ ಬಿಟ್ಟು ಬಂದಂತಿದೆ. ಮಾಸ್ಕ್ ಅಂತೂ ಮೂಗಿನಕೆಳಗೇ! ವಾಕ್ ಮುಗಿಸಿ ಕೆಳಗೆ ಬರುವಷ್ಟರಲ್ಲೇ ನ್ಯೂಸ್-ಪೇಪರ್ ಬಂದು ಬಿದ್ದಿದೆ. ಆ ಗರಿಗರಿಯ ಪೇಪರ್‌ಕೈಗೆತ್ತಿಕೊಳ್ಳಲು ಏನೋ ಸಂತೋಷ. ಪೇಪರ್ ಬಾರದದಿನ ಏನೋಕಳೆದುಕೊಂಡ ಅನುಭವ. ಮಡದಿ ಕೈಗಿತ್ತ ಬಿಸಿಬಿಸಿ ಕಾಫಿ ಹೀರುತ್ತಾ ಪೇಪರ್ ಓದುವುದೇ ಒಂದು ದಿವ್ಯಾನುಭವ. ವಾರ್ತಾ ಚಾನೆಲ್‌ಗಳ ಅಬ್ಬರ, ಗ್ರಹಗಳಿಗೂ, ಬ್ರಹ್ಮಾಂಡಕ್ಕೂ ಕ್ರಾಂತಿ ಹಬ್ಬಿಸುವ ಚೀರಾಟ ನನಗೆ ಸರಿಬರಲ್ಲ. ಎಂಟು ಗಂಟೆಗಾಗಲೇ ತಿಂಡಿಯ ಗದ್ದಲ ನಮ್ಮ ರಸ್ತೆಯಲ್ಲಿ. ಪಕ್ಕದ ಮನೆಯ ಹೆಂಚು ದೋಸೆ ಹುಯ್ಯಿಸಿ ಕೊಂಡು “ಚೊಯ್——’ ಎಂದರೆ, ಆ ಕಡೆ ಮನೆಯಿಂದ ಕುಕ್ಕರ್ ವಿಸಲ್‌ಕೇಳಿ ಬರುತ್ತಿದೆ. ಎದುರು ಮನೆಯಲ್ಲಿ ಇವತ್ತು ಗ್ಯಾರಂಟಿ ಉಪ್ಪಿಟ್ಟೇ. ಆಹಾ! ರಸ್ತೆಯಲ್ಲಿಸುಮ್ಮನೆ ನಿಂತರೇ ಹಸಿವಾಗ್ತದೆ!ಕೆಲಸದ ಗಡಿಬಿಡಿಯ ನಡುವೆ ಒಂದುಸಣ್ಣ ಬ್ರೇಕ್ ಸಿಕ್ಕಿದೆ. ಹೆಡ್‌ಫೋನ್ ತೆಗೆದ ಕೂಡಲೇ ಮತ್ತೆ ರಸ್ತೆಯ ಗಜಿಬಿಜಿ ಕೇಳಿ ಬರ್ತಿದೆ. ಒಂದೆರಡು ಸ್ಕೂಟರ್- ಕಾರ್ ಹೋದ ಸದ್ದು.
ಹಿಂದೆಯೇ ಟಮೋಟೋ, ಬೀನೀಸ್, ಆಲೂಗಡ್ಡೆ, ಈರುಳ್ಳಿ,ಕುಂಬಳಾಕಾತಿ… ಅಂತಾ ಕೂಗುತ್ತಾ ಬಂದತರಕಾರಿ ಗಾಡಿ. ಸದಾ ಫ್ರೆಶ್ ತರಕಾರಿ ತರುವಇವನ ಗಾಡಿಯಲ್ಲಿ ಆತರಕಾರಿಗಳ ಜೋಡಣೆನೋಡಲೇ ಚಂದ ಮಧ್ಯಾಹ್ನದಿಂದ ಸಂಜೆಯ ವರೆಗೆ ಈ ವ್ಯಾಪಾರಿಗಳ ಒಂದು ಪುಟ್ಟ ಸಂತೆಯೇ ಸಾಗಿರುತ್ತದೆ. ಹಳೇ ಪೇಪರ್ ಖಾಲಿ ಸೀಸಾ ಅವನು ಈಗ ಒಂದು ತೆರೆದ ಆಟೋಗಾಡಿಯಲ್ಲಿ ಬರುತ್ತಾನೆ.ಇನ್ನೊಬ್ಬಳು ಬರ್ತಾಳಪ್ಪಾ. ಮಧ್ಯಾಹ್ನ ಮೂರು ಗಂಟೆಗೆ ಇನ್ನೇನು ಕಣ್ಣಿಗೆ ಜೊಂಪು ಹತ್ತಬೇಕುಅನ್ನುವಷ್ಟರಲ್ಲಿ ಎಷ್ಟು ಗಡಸು ದನಿಯಲ್ಲಿ ಸೊಪ್ಪು ಅಂತಾಕೂಗ್ತಾಳೆ ಅಂದರೆ, ಆಚೆಮನೆಯ ಹೆಂಗಸು ಮಗುವಿಗೆ ಮಲಗ್ತೀಯೋ, ಇಲ್ಲಾ ಆ ಸೊಪ್ಪಿನವಳಿಗೆ ಕೊಟ್ಟುಬಿಡಲೋ ನಿನ್ನಾ! ಅಂತಾ ಹೆದರಿಸಿ ಮಲಗಿಸಿದ್ದು ಗ್ಯಾರಂಟಿ. ಸಂಜೆ ಆರು ಗಂಟೆ. ಮಗಳುಕ್ಯಾಮೆರಾ ಹಿಡಿದು ಮೇಲೆ ಹೋಗುವ ಸಮಯ. ಹೊಂಗೆ ಮರದ ಸನ್‌ಬರ್ಡ್ ಪುಕ್ಕ ತರಕೊಂಡು ಪೋಸ್‌ಕೊಡ್ತಿದೆ. ಚುಕ್ಕಿಚುಕ್ಕಿಯ ಸುಂದರಿ ಕೋಗಿಲೆ ಸಹಾ ಹಾರಿ ಬಂದಳಲ್ಲ!
ಸ್ವಲ್ಪ ಸಂಕೋಚ ಇವಳಿಗೆ. ಹತ್ತು ಸೆಕೆಂಡುಗಳಲ್ಲಿ ಮರದ ಎಲೆಗಳ ಮಧ್ಯೆ ಮರೆಯಾಗಿ ಬಿಡ್ತಾಳೆ. ಇಷ್ಟರಲ್ಲಿ ತುಂಟಗಿಳಿಗಳ ಹಾರಾಟ ಶುರು. ಶಾಲೆ ಮುಗಿಸಿ ಮನೆಗೆ ತೆರಳುವ ಮಕ್ಕಳಷ್ಟೇ ಸಂಭ್ರಮ ಇವಕ್ಕೇ!ಕೀಕೀಕೀ ಎನ್ನುತ್ತಾ ಒಂದನ್ನೊಂದು ಭರ್ ಎಂದು ದಾಟುತ್ತಾ, ಎಲ್ಲೋ ಮರೆಯಾಗ್ತವೆ. ಮುಸ್ಸಂಜೆ ಆಗುತ್ತಿದ್ದಂತೆ ಹೊರಬಂದ ಬಾವಲಿಗಳ ಹಿಂಡು ಪಶ್ಚಿಮದೆಡೆಗೆ ಹಾರಿ ಹೋಗುತ್ತಿವೆ.ಇನ್ನುಕತ್ತಲೆಯಾಗುತ್ತಿದಂತೆ ಒಂದು ರೀತಿಯ ನಿಶ್ಯಬ್ದ. ಆಗೀಗ ಹೋಗುವ ಗಾಡಿಗಳ ಭರ್ರೋಸದ್ದು ನಮ್ಮ ಗಮನಕ್ಕೆ ಬರುವುದಿಲ್ಲಬಿಡಿ. ಬೆಂಗಳೂರಲ್ಲಿ ಇದ್ದಮೇಲೆ ಅದೆಲ್ಲಾ ಮಾಮೂಲೇ. ಒಂದಾದ ನಂತರ ಒಂದರಂತೆ ಮನೆಗಳ ಟೀವಿ ಬಂದ್ ಆಗುತ್ತಿದ್ದ ಹಾಗೆಯೇ ರಾತ್ರಿಯ ನೀರವತೆ. ಎಲ್ಲಿಯದೋ ಗಾಡಿಯ ಹಾರ್ನ್ ಶಬ್ದ. ಇವುಗಳ ನಡುವೆ ಮಲಗುವ ಸೂಚನೆಕೊಡುವಂತೆ ಜೀರುಂಡೆ ಸದ್ದಿಗೆ ಮರುಳಾಗಿ ನಿದ್ದೆಗೆ ಜಾರಿದ್ದೇನೆ. ಅಮೆರಿಕದ ಸನ್ನಿವೇಲ್‌ನಿಂದ ಬೆಂಗಳೂರಿನ ಗಿರಿನಗರಕ್ಕೆ ಬಂದು ಮೂರು ವರ್ಷಗಳಾಗಿವೆ. ಆದರೂ ಕೋವಿಡ್ ಕೃಪೆಯಿಂದ ಈಗಷ್ಟೇ ಸುತ್ತಮುತ್ತಲ ಸೊಗಸನ್ನು ಸವಿಯುತ್ತಿದ್ದೇನೆ.
– ಸುದತ್ತ ಗೌತಮ್