Advertisement
ಸಮಯ ಎನ್ನುವುದು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುವುದಿಲ್ಲ, ಬದಲಾಗಿ ಸಮಯ ಎಲ್ಲರಿಗೂ ಒಂದೇ ರೀತಿ. ಆದರೆ ಇರುವ ಸಮಯದಲ್ಲಿ ನಾವು ಹೇಗೆ ಚಲಿಸುತ್ತಿರುತ್ತೇವೆ ಎಂಬುದು ಮಾತ್ರ ವ್ಯಕ್ತಿಗತವಾಗಿ ಬದಲಾಗುತ್ತಿರುತ್ತದೆ.
Related Articles
Advertisement
ಅಲಾರಂ ಸೆಟ್ ಮಾಡಿ
ಪೋಮೊಡೊರೊ ಸಮಯ ನಿರ್ವಹಣೆ ತತ್ವದ ಅನ್ವಯ ವ್ಯಕ್ತಿಯೊಬ್ಬ ಒಂದು ಕೆಲಸದ ಮೇಲೆ ಸಮಯದ ಮಿತಿಯನ್ನು ಇರಿಸಿಕೊಂಡಾಗ ಒಂದೇ ಕಾರ್ಯದ ಮೇಲೆ ಗಮನ ಹರಿಸುತ್ತಾನೆ. ಅಲ್ಲದೆ ಅದನ್ನು ಸಮಯದ ಮಿತಿಯೊಳಗೆ ಮುಗಿಸಲು ಪ್ರಯತ್ನ ಪಡುತ್ತಾನೆ. ಉದಾ: ಒಂದು ಕೆಲಸಕ್ಕೆ 45 ನಿಮಿಷಗಳ ಮಿತಿ ಹಾಕಿಕೊಂಡಿರಬೇಕು. 45 ನಿಮಿಷ ಆಗುವವರೆಗೂ ಕುಳಿತ ಕಡೆಯಿಂದ ಎದ್ದೇಳಬಾರದು. ಅನಂತರ 10 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡು ಮತ್ತೆ ಕೆಲಸ ಆರಂಭಿಸಬೇಕು, ಇದರಿಂದ ಸಮಯ ನಿರ್ವಹಣೆಯ ಜತೆಗೆ ಉತ್ಪಾದಕ ಮಟ್ಟವೂ ಸುಧಾರಿಸುತ್ತದೆ.
ಮೋಜಿನೊಂದಿಗೆ ಕೆಲಸ ಮಾಡಿ
ಕೆಲವೊಂದು ಕೆಲಸಗಳು ತೀರಾ ಬೇಸರ ತರಿಸುತ್ತವೆ. ಆ ಕಾರಣದಿಂದ ಎಷ್ಟು ಮಾಡಿದರೂ ಮುಗಿಯುವುದಿಲ್ಲ ಎನ್ನಿಸುತ್ತದೆ. ಸಮಯ ಓಡುತ್ತಲೇ ಇದ್ದರೂ ಕೆಲಸ ಮುಂದುವರಿಯುವುದಿಲ್ಲ. ಅಂತಹ ಸಮಯದಲ್ಲಿ ಮಧ್ಯದಲ್ಲಿ ಬ್ರೇಕ್ ತೆಗೆದುಕೊಂಡು ಒಂದಿಷ್ಟು ಮೋಜಿನ ಆಟ ಅಥವಾ ಮನೋರಂಜನೆಯಲ್ಲಿ ಮನಸ್ಸನ್ನು ತೊಡಗಿಸಿ. ಇದರಿಂದ ಮನಸ್ಸಿಗೆ ಬ್ರೇಕ್ ಸಿಕ್ಕಂತಾಗುತ್ತದೆ. ಅಲ್ಲದೆ ಕೆಲಸದಲ್ಲಿ ಪುನಃ ಮುಂದುವರಿಯಲು ಹುಮ್ಮಸ್ಸು ಸಿಕ್ಕಂತಾಗುತ್ತದೆ.
ಹಂತ ಹಂತವಾಗಿ ಕೆಲಸ ಮಾಡುವುದು
ಯಾವುದೇ ಕೆಲಸವನ್ನಾಗಲಿ ಅದನ್ನು ಹಂತ ಹಂತವಾಗಿ ವಿಂಗಡಿಸಿಕೊಳ್ಳಿ. ಒಂದು ಹಂತವನ್ನು ಮುಗಿಸಲು ಇಷ್ಟು ಹೊತ್ತು ಎಂದು ಸಮಯದ ಗಡಿ ಹಾಕಿಕೊಳ್ಳಿ. ಒಂದು ಹಂತದ ಕೆಲಸ ಮುಗಿದ ಮೇಲಷ್ಟೇ ಇನ್ನೊಂದು ಹಂತದ ಕೆಲಸ ಮುಗಿಸಿ. ಇದರಿಂದ ಸಮಯದ ಉಳಿತಾಯ ಮಾಡಬಹುದು ಜತೆಗೆ ಕೆಲಸದಲ್ಲಿ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.
ಗೊಂದಲ ಸೃಷ್ಟಿಸುವ ಅಂಶಗಳಿಂದ ದೂರವಿರಿ
ಕೆಲಸ ಮೇಲೆ ಗಮನ ಕೇಂದ್ರೀಕರಿಸಿದಾಗ ಬೇರೆಡೆ ಗಮನ ಹರಿಸಲು ಸಾಧ್ಯವಾಗದೇ ಇರುವುದು ಉತ್ತಮ, ಒಂದು ವೇಳೆ ನಿಮ್ಮ ಗಮನ ಬೇರೆಡೆಗೆ ಸೆಳೆದರೆ ಅದರಿಂದ ಕೆಲಸಕ್ಕೆ ತೊಂದರೆ ಉಂಟಾಗಬಹುದು. ಅದರಲ್ಲೂ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವ ವಿಷಯದಲ್ಲಿ ಮೊಬೈಲ್ ಫೋನ್ ಗೆ ನಂಬರ್ 1 ಸ್ಥಾನ ನೀಡಬಹುದು. ಇದು ಮಾಡುತ್ತಿರುವ ಗೊಂದಲ ಸೃಷ್ಟಿಸಲು ಕಾರಣವಾಗಬಹುದು. ಆ ಕಾರಣಕ್ಕೆ ಮೊಬೈಲ್ ಫೋನ್, ಟಿವಿಯಂತಹ ಮಾಧ್ಯಮಗಳಿಂದ ದೂರ ಇರುವುದು ಉತ್ತಮ. ಇದರಿಂದ ಸಮಯದ ಸದುಪಯೋಗವನ್ನು ಬಳಸಿಕೊಳ್ಳಬಹುದು.
ವಿಶ್ರಾಂತಿಗೂ ಗಮನ ಕೊಡಿ
ಸಮಯ ನಿರ್ವಹಣೆ ಎಂದರೆ ಕೇವಲ ಕೆಲಸ ಮಾಡುತ್ತಿರುವುದು ಮಾತ್ರವಲ್ಲ. ಇದರ ನಡುವೆ ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತಿ ಬೇಕಾಗುತ್ತದೆ. ಇದರಿಂದ ದೇಹ ಪುನಶ್ಚೇತನಗೊಂಡು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಸಮಯದ ನಿರ್ವಹಣೆಯೂ ಸಲೀಸಾಗುತ್ತದೆ.
–ಶಿಲ್ಪಾ ಪವಾರ
ವಿಜಯಪುರ