ನ್ಯೂಯಾರ್ಕ್ : ದಿ ಟೈಮ್ ಮ್ಯಾಗಜೀನ್ ತನ್ನ ಅಂತಾರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ 68ರ ಹರೆಯದ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಪ್ರಕಟಿಸಿದ್ದು ಅದಕ್ಕೆ “ಇಂಡಿಯಾಸ್ ಡಿವೈಡರ್ ಇನ್ ಚೀಫ್’ (ಭಾರತದ ಮುಖ್ಯ ವಿಭಜಕ) ಎಂಬ ವಿವಾದಾತ್ಮಕ ಶೀರ್ಷಿಕೆಯನ್ನು ಕೊಟ್ಟಿದೆ.
ಉಪ ಶೀರ್ಷಿಕೆಯಲ್ಲಿ “ಮೋದಿ ದ ರಿಫಾರ್ಮರ್’ ಎಂಬ ಸಾಲನ್ನು ಕೂಡ ಪ್ರಕಟಿಸಿದೆ.
ದಿ ಟೈಮ್ ಮ್ಯಾಗಜೀನ್ ನಲ್ಲಿ ಪ್ರಕಟವಾಗಿರುವ ಮೋದಿ ಕುರಿತ ಲೇಖನವನ್ನು ಆತೀಶ್ ತಸೀರ್ ಬರೆದಿದ್ದಾರೆ. ಇವರು ಖ್ಯಾತ ಪತ್ರಕರ್ತೆ ತವ್‌ಲೀನ್ ಸಿಂಗ್ ಮತ್ತು ದಿವಂಗತ ಪಾಕ್ ರಾಜಕಾರಣಿ ಮತ್ತು ಉದ್ಯಮಿ ಸಲ್ಮಾನ್ ತಸೀರ್ ಅವರ ಪುತ್ರ.
ಜಗತ್ತಿನ ಅತೀ ದೊಡ್ಡ ಪ್ರಜಾಸತ್ತೆಯಾಗಿರುವ ಭಾರತ, ಮೋದಿ ಸರಕಾರವನ್ನು ಇನ್ನೂ ಐದು ವರ್ಷಗಳ ಅವಧಿಗೆ ತಾಳಿಕೊಂಡೀತೇ ಎಂಬ ಪ್ರಶ್ನೆಯನ್ನು ಮೋದಿ ಕುರಿತ ಲೇಖನದಲ್ಲಿ ಚರ್ಚಿಸಲಾಗಿದೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷಕ್ಕೆ ವಂಶಾಡಳಿತೆಯ ತತ್ವಗಳನ್ನು ಬಿಟ್ಟರೆ ದೇಶಕ್ಕೆ ಬೇರೇನೂ ಕೊಡುವುದಕ್ಕಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ.
ದಿ ಟೈಮ್ ಮ್ಯಾಗಜೀನ್‌ನ 2019 ಮೇ 20ರ ಈ ಆವೃತ್ತಿಯು ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕ, ಏಶ್ಯ ಮತ್ತು ದಕ್ಷಿಣ ಫೆಸಿಪಿಕ್ ದೇಶಗಳಲ್ಲಿ ಪ್ರಕಟವಾಗಿದೆ.
ದಿ ಟೈಮ್ ಮ್ಯಾಗಜೀನ್‌ನ ಅಮೆರಿಕ ಆವೃತ್ತಿಯ ಮುಖ ಪುಟದಲ್ಲಿ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೆಮೋಕ್ರಾಟ್ ಅಭ್ಯರ್ಥಿ ಎಲಿಜಬೆತ್ ವಾರನ್ ಅವರ ಚಿತ್ರ ಮತ್ತು ಲೇಖನ ಇದೆ.