Advertisement

ಕಾಲ ನಿನ್ನದೇ ಕೈಗಡಿಯಾರ…

09:45 AM Mar 19, 2020 | mahesh |

ನಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳುವುದಕ್ಕಿಂತ, ನಮ್ಮ ಜೀವನವನ್ನು, ಬೇಕು ಬೇಡಗಳನ್ನು ನಾವು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜೀವನ ಪ್ರೀಪೇಯ್ಡ ಮೊಬೈಲ್‌ ಇದ್ದ ಹಾಗೆ. ಅದರ ಸದುಪಯೋಗ ನಮ್ಮ ಕೈಯಲ್ಲೇ ಇರುತ್ತದೆ.

Advertisement

ಇಪ್ಪತ್ತೇಳು ವರ್ಷದ ರೇಖಾ ವೃತ್ತಿಯಲ್ಲಿ ವೈದ್ಯೆ. ಗಂಡ ರಜತ್‌ ಕೂಡಾ ವೈದ್ಯರು. ಇತ್ತೀಚೆಗೆ ರೇಖಾ ತನ್ನ ಹೆಚ್ಚಿನ ವ್ಯಾಸಂಗವನ್ನು ಎಲ್ಲಿ ಮಾಡಬೇಕು ಮತ್ತು ಯಾವ ವೈದ್ಯಕೀಯ ವಿಷಯದಲ್ಲಿ ಮಾಡಬೇಕು ಎಂಬ ಚರ್ಚೆ ಶುರು ಮಾಡಿದಾಗ, “ಮೊದಲು ಮಕ್ಕಳಾಗಲಿ. ಆಮೇಲೆ ವಿದ್ಯೆ-ವೃತ್ತಿ ಮುಂದುವರಿಯಲಿ’ ಎಂದು ಕುಟುಂಬದ ಹಿರಿಯರು ಅಭಿಪ್ರಾಯ ಪಟ್ಟಿದ್ದಾರೆ. ಅದನ್ನು ಕೇಳಿ ರೇಖಾಗೆ ಮಂಕು ಕವಿದಂತಾಗಿ, ಮಾತು ಕಡಿಮೆ ಮಾಡಿದ್ದಾಳೆ. ಅವಳಿಗೆ ಊಟ ಸೇರುತ್ತಿಲ್ಲ. ಮುಖ ಕಳೆಗುಂದಿದೆ. ಯಾರು ಎಷ್ಟು ಸಮಾಧಾನ ಮಾಡಿದರೂ ಒಂದೇ ಸಮನೆ ಅಳುತ್ತಿದ್ದಾಳೆ.

ರೇಖಾ ಯಾವಾಗಲೂ ಪ್ರಥಮ ಶ್ರೇಣಿಯಲ್ಲಿ ಪಾಸಾದವಳು. ವೈದ್ಯೆಯಾಗಿ ಹತ್ತಾರು ಕನಸಿಟ್ಟುಕೊಂಡವಳಿಗೆ ಗರ್ಭಿಣಿಯಾದರೆ, ತನ್ನ ವೃತ್ತಿ ಜೀವನ ಕುಂಠಿತವಾಗುವುದೆಂಬ ಭಯ ಕಾಡತೊಡಗಿತ್ತು. ಗಂಡ ರಜತ್‌, ಕಾಲೇಜಿನಲ್ಲಿ ಆಕೆಯ ಸಹಪಾಠಿ. ಅವನ ಬಳಿ ತನ್ನ ಕನಸು ಹಂಚಿಕೊಂಡಾಗ, ರಜತ್‌ ಕೂಡಾ ತನ್ನ ವೃತ್ತಿಗೆ ವಿರೋಧವಾಗಿ ಮಾತನಾಡುತ್ತಾನಲ್ಲಾ ಎಂದೆನಿಸಿ ರೇಖಾಳಲ್ಲಿ ಹತಾಶೆ ಮನೆಮಾಡಿತ್ತು. ಆಗ ಅವಳ ತಾಯಿ ನನ್ನ ಬಳಿ ಸಮಾಲೋಚನೆಗೆ ಕರೆತಂದರು. ರೇಖಾ ನನ್ನ ಬಳಿ ಬಹಳ ಅತ್ತಳು. ಯಾರೂ ತನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂಬುದು ಆಕೆಯ ದೂರು.

ನಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳುವುದಕ್ಕಿಂತ, ನಮ್ಮ ಜೀವನವನ್ನು, ಬೇಕು ಬೇಡಗಳನ್ನು ನಾವು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜೀವನ ಪ್ರೀಪೇಯ್ಡ ಮೊಬೈಲ್‌ ಇದ್ದ ಹಾಗೆ. ಅದರ ಸದುಪಯೋಗ ನಮ್ಮ ಕೈಯಲ್ಲೇ ಇರುತ್ತದೆ. ರೇಖಾ ಜೊತೆ ಸಂವಾದ ಮಾಡುತ್ತಾ, ಜೀವನದಲ್ಲಿ ಸಮಯದ ಲೆಕ್ಕಾಚಾರವನ್ನು ಆಕೆಗೆ ಮನದಟ್ಟು ಮಾಡಿಸಿದೆ.

ಜೀವನದ ಮೊದಲ 15 ವರ್ಷ ಕಳೆಯುವಷ್ಟರಲ್ಲಿ, ಹತ್ತನೇ ತರಗತಿ ಪಾಸು ಮಾಡಿರುತ್ತೇವೆ. 15-30 ವರ್ಷಗಳು ಸಂಘರ್ಷಮಯ ಸಮಯ. ಇಲ್ಲಿ, ವೃತ್ತಿಯ ಆಯ್ಕೆ, ತಕ್ಕ ಶಿಕ್ಷಣದ ಕೋರ್ಸು, ಸ್ನಾತ್ತಕೋತ್ತರ ಪದವಿ, ನಂತರ ಸಂಗಾತಿಯ ಆಯ್ಕೆ, ಮದುವೆಯಾದರೆ ಸ್ಥಳ ಬದಲಾವಣೆ, ಮಕ್ಕಳಾದರೆ ಕೌಟುಂಬಿಕ ಜವಾಬ್ದಾರಿ ಎದುರಾಗುತ್ತದೆ. ಇದನ್ನು ಹೆಣ್ಣು-ಗಂಡು ಇಬ್ಬರೂ ಎದುರಿಸುತ್ತಾರೆ. ಆದರೆ ಸಂತಾನೋತ್ಪತ್ತಿಯಲ್ಲಿ ಹೆಚ್ಚಿನ ಪಾತ್ರ ಮಹಿಳೆಯದ್ದು. 30 ರಿಂದ 45 ವರ್ಷಗಳು, ವೈದ್ಯ ವೃತ್ತಿಗೆ ಸಂಬಂಧಿಸಿದ ಕೆಲವು ವಿಶೇಷ ಕೌಶಲಗಳನ್ನು ಕಲಿಯಬೇಕು. ಆಗಾಗ ತರಬೇತಿ ಪಡೆಯಬೇಕು. ಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು, ಪರಿಣತರಾಗಲು ಪರಿಶ್ರಮ ಪಡುವ ಸಮಯವದು. 45-60 ವರ್ಷಗಳು, ವೈದ್ಯ ವೃತ್ತಿಯಲ್ಲಿ ಕೀರ್ತಿ ಶಿಖರ ಏರುವ ಹಂತ. ಇವುಗಳ ಮಧ್ಯೆ, ವಿಹಾರ-ವಿನೋದಗಳೂ ಇರಬೇಕು, ಅದಕ್ಕೂ ಸಮಯ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

Advertisement

15-30 ವರ್ಷಗಳಲ್ಲಿ ಸಾಂಸಾರಿಕ ಜೀವನ ಮತ್ತು ವೃತ್ತಿ ಜೀವನಕ್ಕೆ ಅಡಿಪಾಯ ಹಾಕಿಕೊಂಡರೆ, ಎರಡರಲ್ಲೂ ಉತ್ತಮ ಹತೋಟಿ ಸಾಧಿಸಬಹುದೆಂದು ರೇಖಾಗೆ ತಂತಾನೇ ಅನಿಸಿತು. ರೇಖಾಗೆ ಮಕ್ಕಳಾಗುವುದು ಖಂಡಿತವಾಗಲೂ ಇಷ್ಟವಿತ್ತು. ಹೇಗೂ ಸರ್ಜರಿಯಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದ ಇಪ್ಪತ್ತೇಳು ವಯಸ್ಸಿನ ರೇಖಾ ಸದ್ಯಕ್ಕೆ ಕೆಲಸಕ್ಕೆ ಸೇರುವುದಾಗಿ ನಿರ್ಧರಿಸಿ, ಗರ್ಭಿಣಿಯಾಗುವ ಆಯ್ಕೆಯನ್ನು ತಾನೇ ಮಾಡಿಕೊಂಡಳು.

ದೊಡ್ಡವರ ಮಾರ್ಗದರ್ಶನದಲ್ಲಿ ಅಧಿಕಾರಯುತ ಆಗ್ರಹಪೂರ್ವಕ ನಿರ್ಧಾರಗಳು ಹಿತವಚನವಾಗುವುದಿಲ್ಲ. ವ್ಯಕ್ತಿಗೆ ಸಕಾಲಿಕ ಆಯ್ಕೆಯನ್ನು ಕಲಿಸುವುದೇ ಚಿಕಿತ್ಸಾ ಮನೋವಿಜ್ಞಾನ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next