Advertisement

ಏ.14ರವರೆಗೆ ಕಾಲಾವಕಾಶ

12:20 PM Mar 28, 2018 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರಿಲ್‌ 14ರ ವರೆಗೆ ಅವಕಾಶವಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 87,98,335 ಮತದಾರರಿದ್ದಾರೆ. ಆ ಪೈಕಿ ಪುರುಷ ಮತದಾರರು 46,04,190, ಮಹಿಳಾ ಮತದಾರರು 41,92,706 ಹಾಗೂ 1,439 ಇತರೆ ಮತದಾರರಲಿದ್ದು,  ಏಪ್ರಿಲ್‌ 14ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ.

ಜತೆಗೆ ಪಟ್ಟಿಯಿಂದ ಬಿಟ್ಟು ಹೋಗಿರುವ ಹಾಗೂ ಹೊಸದಾಗಿ ಸೇರಬಯಸುವವರು ಪಟ್ಟಿಗೆ ಹೆಸರು ಸೇರಿಸಬಹುದಾಗಿದೆ ಎಂದು ತಿಳಿಸಿದರು. ಕಳೆದ ಫೆಬ್ರವರಿ 28ರವರೆಗೆ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ 3,16,467 ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಮತದಾರರ ಪಟ್ಟಿಯಿಂದ 1,10,892 ಹೆಸರುಗಳನ್ನು ತೆಗೆಯಲಾಗಿದೆ.

ಹೊಸದಾಗಿ ಸೇರ್ಪಡೆಗೊಂಡಿರುವ ಮತದಾರರ ಪೈಕಿ 2 ಲಕ್ಷ ಜನರಿಗೆ ಗುರುತಿನ ಚೀಟಿ ದೊರೆಯಬೇಕಿದೆ. ಸದ್ಯ 60 ಸಾವಿರ ಹಾಲೋಗ್ರಾಮ್‌ ಸ್ಟಿಕ್ಕರ್‌ಗಳು ಲಭ್ಯವಿದ್ದು, 1.40 ಲಕ್ಷ ಹಾಲೋಗ್ರಾಮ್‌ಗಳನ್ನು ನೀಡುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ. ಅದರಂತೆ 10 ದಿನಗಳಲ್ಲಿ ಎಲ್ಲ ಮತದಾರರಿಗೆ ಗುರುತಿನ ಚೀಟಿಗಳನ್ನು ಮನೆಗಳಿಗೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿರುವ ವಿಕಲಚೇತನ ಮತದಾರರನ್ನು ಸಂಪರ್ಕಿಸಲಾಗಿದ್ದು, ಅವರಿಗೆ ಮತಗಟ್ಟೆ ಬರಲು ಅಗತ್ಯವಾದ ವಾಹನ ವ್ಯವಸ್ಥೆ ಮಾಡಲಾಗುವುದು. ಜತೆಗೆ ಪ್ರತಿ ಮತಗಟ್ಟೆಯಲ್ಲಿ ರ್‍ಯಾಂಪ್‌ಗ್ಳನ್ನು ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಪಾಲಿಕೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. 

Advertisement

ಖಾಸಗಿ ಸಿಬ್ಬಂದಿ ಬಳಕೆಗೆ ಚಿಂತನೆ: 28 ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಕ್ಕೆ ಒಟ್ಟು 55 ಸಾವಿರ ಸಿಬ್ಬಂದಿಯ ಅಗತ್ಯವಿದೆ. ಆದರೆ, ಸದ್ಯ 35 ಸಾವಿರ ಸಿಬ್ಬಂದಿಯ ಮಾಹಿತಿ ಸಿಕ್ಕಿದ್ದು, ವಿವಿಪ್ಯಾಟ್‌ ಬಳಕೆಯಿಂದಾಗಿ ಪ್ರತಿ ಮತಗಟ್ಟೆಗೆ ಹೆಚ್ಚುವರಿಯಾಗಿ ಒಬ್ಬರು ಸಿಬ್ಬಂದಿ ಬೇಕಾಗಿದೆ. ಆ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಗಾಗಿ ಎಚ್‌ಎಎಲ್‌, ಬಿಎಚ್‌ಇಎಸ್‌ ಸೇರಿದಂತೆ ಸರ್ಕಾರಿ ಸಂಸ್ಥೆಗಳಿಂದ ಸಿಬ್ಬಂದಿಯ ಮಾಹಿತಿ ಪಡೆಯಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಖಾಸಗಿ ಶಾಲಾ-ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳುವ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

ಇಂದಿರಾ ಭಾವಚಿತ್ರಕ್ಕೆ ತೊಂದರೆಯಿಲ್ಲ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಳವಡಿಸಿರುವ ಮಾಜಿ ಪ್ರಧಾನಿ “ಇಂದಿರಾ ಗಾಂಧಿ’ ಅವರ ಬೃಹತ್‌ ಭಾವಚಿತ್ರ ತೆರವುಗೊಳಿಸಲು ಅವಕಾಶವಿಲ್ಲ. ದಿವಂಗತರಾದ ರಾಷ್ಟ್ರದ ಗಣ್ಯರ ಭಾವಚಿತ್ರಗಳ ತೆರವುಗೊಳಿಸಲಾಗುವುದಿಲ್ಲ. ಬದಲಿಗೆ ಕ್ಯಾಂಟೀನ್‌ಗಳಲ್ಲಿನ ಮುಖ್ಯಮಂತ್ರಿಗಳ ಭಾವಚಿತ್ರ, ಸರ್ಕಾರದ ಸಾಧನೆಗಳ ತಿಳಿಸುವ ಭಿತ್ತಿಪತ್ರಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು. 

ಪಾಲಿಕೆ ಮೇಯರ್‌ ಕಾರು ವಾಪಸ್‌: ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪಾಲಿಕೆಯಿಂದ ನೀಡಲಾಗಿದ್ದ ವಾಹನಗಳನ್ನು ಹಿಂಪಡೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. 

ಅಂಕಿ-ಅಂಶಗಳು
-8287 ನಗರದಲ್ಲಿನ ಒಟ್ಟು ಮತಗಟ್ಟೆಗಳು    
-806 ಹೆಚ್ಚುವರಿ ಮತಕೊಠಡಿಗಳು    
-7,259 ನಗರ ವ್ಯಾಪ್ತಿಯ ಮತಗಟ್ಟೆಗಳು    
-1,028 ಗ್ರಾಮಾಂತರ ಭಾಗದ ಮತಗಟ್ಟೆಗಳು    

ಸಿಬ್ಬಂದಿ, ತಂಡಗಳ ವಿವರ 
-28 ನೋಡಲ್‌ ಅಧಿಕಾರಿಗಳು
-168 ಸಂಚಾರಿ ವಿಚಕ್ಷಣ ದಳ    
-84 ಸ್ಥಿರ ವಿಚಕ್ಷಣ ದಳ
-84 ವಿಡಿಯೋ ಚಿತ್ರೀಕರಣ ತಂಡಗಳು
-28 ವಿಡಿಯೋ ಪರಿಶೀಲನಾ ತಂಡಗಳು
-28 ಹೊಣೆಗಾರಿಕೆ ತಂಡಗಳು    

ಚುನಾವಣಾ ಸಿಬ್ಬಂದಿ
-10,880 ಚುನಾವಣಾಧಿಕಾರಿ
-10,880 ಸಹಾಯಕ ಚುನಾವಣಾಧಿಕಾರಿ
-32,640 ಮತಗಟ್ಟೆ ಅಧಿಕಾರಿಗಳು    
-54,400 ಒಟ್ಟು ಅಧಿಕಾರಿಗಳು

ನಗರದ ಮತದಾರರ ವಿವರ
-46,04,190 ಪುರುಷ ಮತದಾರರ ಸಂಖ್ಯೆ
-41,92,706 ಮಹಿಳಾ ಮತದಾರರ ಸಂಖ್ಯೆ    
-1,439 ಇತರೆ ಮತದಾರರು
-87,98,335 ಒಟ್ಟು ಮತದಾರರ ಸಂಖ್ಯೆ

ಚುನಾವಣೆಗೆ ಬಳಸುವ ವಾಹನಗಳ ವಿವರ
-1400 ಸರ್ಕಾರಿ ಬಸ್‌ಗಳು
-500 ಖಾಸಗಿ ವಾಹನಗಳು
-700 ಲಘು ವಾಹನಗಳು

Advertisement

Udayavani is now on Telegram. Click here to join our channel and stay updated with the latest news.

Next