Advertisement

ಪರಿಸರದ ರಕ್ಷಣೆಗೆ ಇಂದೇ ಕಾರ್ಯೋನ್ಮುಖರಾಗೋಣ: ವಿಶ್ವಸಂಸ್ಥೆಯ ಪರಿಸರ ಸಮಾವೇಶದಲ್ಲಿ ಮೋದಿ ಮಾತು

08:30 AM Sep 24, 2019 | Hari Prasad |

ನ್ಯೂಯಾರ್ಕ್: ವಿಶ್ವ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಮಾತನಾಡುವ ಸಮಯ ಮುಗಿದಿದೆ ಇದೀಗ ನಾವೆಲ್ಲರೂ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾದ ಅನಿವಾರ್ಯತೆ ಒದಗಿಬಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಪಡೆಯ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರಿಂದು ಮಾತನಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Advertisement

ಜಗತ್ತು ಇಂದು ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಹೆಚ್ಚು ಒತ್ತನ್ನು ನೀಡಬೇಕು ಮತ್ತು ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದೂ ಸಹ ಪ್ರಧಾನಿ ಮೋದಿ ಅವರು ವಿಶ್ವ ಸಮುದಾಯಕ್ಕೆ ಕರೆ ನೀಡಿದರು.

ಇದಕ್ಕೆ ಪೂರಕವಾಗಿ ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಭಾರತ ಪ್ರಾರಂಭಿಸಿರುವ ಯೋಜನೆಗಳ ಕುರಿತಾಗಿಯೂ ಮೋದಿ ಅವರು ವಿಶ್ವ ಸಮುದಾಯಕ್ಕೆ ಮಾಹಿತಿ ನೀಡಿದರು. ಮತ್ತು ಭಾರತದ ಈ ಮಹತ್ವಾಕಾಂಕ್ಷಿ ಕಾರ್ಯದಲ್ಲಿ 80 ದೇಶಗಳು ಈಗಾಗಲೇ ಕೈಜೋಡಿಸಿವೆ ಎಂಬ ವಿಚಾರವನ್ನೂ ಸಹ ಮೋದಿ ಅವರು ಸಭೆಯ ಗಮನಕ್ಕೆ ತಂದರು.

ಪರಿಸರ ರಕ್ಷಣೆಯ ವಿಚಾರದಲ್ಲಿ ಈಗಾಗಲೇ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಕಾರಣ ಇದರ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಹ ಪ್ರಧಾನಿ ಮೋದಿ ಅವರು ವಿಶ್ವದ ವಿವಿಧ ದೇಶಗಳ ನಾಯಕರನ್ನು ಒತ್ತಾಯಿಸಿದರು. ‘ರಾಶಿಗಟ್ಟಲೆ ಮಾತನಾಡುವುದಕ್ಕಿಂತ ಒಂದು ಚಿಟಿಕೆಯಷ್ಟು ಕ್ರಿಯೆ ಪರಿಣಾಮವನ್ನು ನೀಡಬಲ್ಲದು’ ಎಂಬುದು ಪ್ರಧಾನಿ ಮೋದಿ ಅವರ ಅಭಿಪ್ರಾಯವಾಗಿತ್ತು.

ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಹಮ್ಮಿಕೊಂಡಿರುವ ವಿವಿಧ ಅಭಿಯಾನಗಳ ಕುರಿತಾಗಿಯೂ ಸಹ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ವಿವರಿಸಿದರು. ಅದರಲ್ಲಿ 150 ಮಿಲಿಯನ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿರುವುದು, ಜಲಸಂಪನ್ಮೂಲಗಳ ಅಭಿವೃದ್ಧಿಗೆ ಹಮ್ಮಿಕೊಂಡಿರುವ ‘ಜಲ ಜೀವನ್ ಮಿಶನ್’, ಜಲಮೂಲಗಳ ರಕ್ಷಣೆ ಮತ್ತು ಮಳೆ ಕೊಯ್ಲು ವಿಧಾನ ಮೊದಲಾದವುಗಳ ಕುರಿತಾಗಿ ಮೋದಿ ಅವರು ಜಾಗತಿಕ ನಾಯಕರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದರು.

Advertisement

ಈ ಬಾರಿಯ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಒಮ್ಮೆಗೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿರುವುದನ್ನು ಮೋದಿ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು ಹಾಗೂ ಪ್ಲಾಸ್ಟಿಕ್ ಬಳಕೆಯ ಕುರಿತಾಗಿ ಜಾಗತಿಕ ಮಟ್ಟದಲ್ಲಿಯೂ ಸಹ ಜಾಗೃತಿ ಮೂಡುತ್ತಿದೆ ಎಂಬ ವಿಶ್ವಾಸವನ್ನು ಮೋದಿ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next