Advertisement
ವಿಧಾನಸಭೆ ಚುನಾವಣೆ ನಂತರ ವಿರುದ್ಧ ದಿಕ್ಕುಗಳಂತಿದ್ದ ಜೆಡಿಎಸ್-ಕಾಂಗ್ರೆಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಒಲ್ಲದ ಮನಸ್ಸಿನಿಂದ ಮೈತ್ರಿ ಒಪ್ಪಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನದಲ್ಲಿ “ಲೋಕಸಭೆ ಚುನಾವಣೆವರೆಗೂ ಸುಮ್ಮನಿರಿ. ಆಮೇಲೆ ಏನಾಗುತ್ತೋ ನೋಡೋಣ’ ಎಂಬ ಹೇಳಿಕೆಯಿಂದ ಶುರುವಾದ ಅಪನಂಬಿಕೆ, ಅನುಮಾನ ಲೋಕಸಭೆ ಚುನಾವಣೆಯಲ್ಲಿ ಮನಸ್ಸಿನಲ್ಲದೆ ಮೈತ್ರಿ ಮಾಡಿ ಎರಡೂ ಪಕ್ಷಗಳು ಕೈ ಸುಟ್ಟುಕೊಂಡು ಕೊನೆಗೆ ಸಮ್ಮಿಶ್ರ ಸರ್ಕಾರ ಪತನಗೊಳ್ಳುವಲ್ಲಿ ಅಂತ್ಯಗೊಂಡಿತು.
Related Articles
Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಅವರು ಸೋಲು ಕಂಡಿದ್ದು, ಬಿಜೆಪಿಯಿಂದ ಯುವ ಮುಖಂಡ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದಿಂದ, ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಹಾಸನದಿಂದ ಲೋಕಸಭೆ ಪ್ರವೇಶಿಸಿದರು. ನಟ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ದೊಡ್ಡ ಸವಾಲು ಸ್ವೀಕರಿಸಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ಕುಮಾರಸ್ವಾಮಿ ವಿರುದ್ಧ ಜಯ ಗಳಿಸಿದ್ದು ರಾಜ್ಯ ರಾಜಕಾರಣ ಅದರಲ್ಲೂ ಮಂಡ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.
ಗೆಲುವು ತಂದುಕೊಟ್ಟ ಹೆಗ್ಗಳಿಕೆ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಆಯ್ಕೆಯಾಗಿ ಉಪ ಚುನಾವಣೆಯಲ್ಲಿ ಪಕ್ಷದ ಜಯಭೇರಿ ಮೂಲಕ ಮೊದಲ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾದರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಬೇಲೂರು ಶಾಸಕ ಎಚ್.ಕೆ.ಕುಮಾರಸ್ವಾಮಿ ನೇಮಕವಾಗಿದ್ದು 2019ನೇ ವರ್ಷದಲ್ಲಿಯೇ. ಆದರೆ, ಅವರಿಗೆ ಪಕ್ಷದ ಶೂನ್ಯ ಸಾಧನೆ ಹಿನ್ನೆಡೆಯುಂಟಾಯಿತು.
ಎ.ಕೆ.ಸುಬ್ಬಯ್ಯ,ಶಿವಳ್ಳಿ ನಿಧನ: ಈ ವರ್ಷ ಹಲವು ನಾಯಕರನ್ನು ರಾಜಕೀಯ ಕ್ಷೇತ್ರ ಕಳೆದುಕೊಂಡಿತು. ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ, ಹಿರಿಯ ಮುಖಂಡ ಎ.ಕೆ.ಸುಬ್ಬಯ್ಯ ಅವರು ನಿಧನರಾದರು. ಸಿ.ಎಸ್.ಶಿವಳ್ಳಿ ನಿಧನದಿಂದ ಕುಂದಗೋಳ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾ ಶಿವಳ್ಳಿ ಕಾಂಗ್ರೆಸ್‌ನಿಂದ ಆಯ್ಕೆಯಾದರು.
ಮತ್ತೂಂದೆಡೆ ಕಾಂಗ್ರೆಸ್‌ನಿಂದ ಗೆದ್ದಿದ್ದ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಚಿಂಚೋಳಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಡಾ. ಅವಿನಾಶ್ ಜಾಧವ್ ಬಿಜೆಪಿಯಿಂದ ಗೆಲುವು ಸಾಧಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಉಮೇಶ್ ಜಾಧವ್ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು. ಒಂದು ವರ್ಷದಲ್ಲಿ ಒಟ್ಟು ಹದಿನೇಳು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಂತಾಯಿತು.
ಕಾಂಗ್ರೆಸ್‌ಗೆ ಮರ್ಮಾಘಾತ: ಉಪ ಚುನಾವಣೆಯಲ್ಲಿನ ಸೋಲು ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು. ಐದು ವರ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ನಂತರ ಎದುರಾದ ವಿಧಾನಸಭೆ ಚುನಾವಣೆಯಲ್ಲಿ 115 ಸ್ಥಾನಗಳಿಂದ 79 ಸ್ಥಾನಗಳಿಗೆ ಕುಸಿಯಿತು. ನಂತರ ಎದುರಾದ ಲೋಕಸಭೆ ಚುನಾವಣೆಯಲ್ಲೂ10 ಸ್ಥಾನಗಳಿಂದ ಒಂದು ಸ್ಥಾನಕ್ಕೆ ಇಳಿದು ಮರ್ಮಾಘಾತ ಅನುಭವಿಸಿತು.
ಇದರ ಜತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎದುರಾದ ಉಪ ಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳಲ್ಲಿ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳನ್ನೂ ಕಳೆದುಕೊಂಡು ವಿಧಾನಸಭೆಯಲ್ಲಿ 68 ಸ್ಥಾನಕ್ಕೆ ಕುಸಿಯಿತು. ಈ ಘಟನಾವಳಿ ಹೊರತುಪಡಿಸಿದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿದ್ದು, ಸುಮಾರು 50 ದಿನ ತಿಹಾರ್ ಜೈಲಿನಲ್ಲಿ ಇದ್ದಿದ್ದಕ್ಕೂ 2019ನೇ ವರ್ಷ ಸಾಕ್ಷಿಯಾಯಿತು.
ತಾತ, ಮೊಮ್ಮಗನಿಗೆ ಸೋಲು: 2019ನೇ ವರ್ಷ ಜೆಡಿಎಸ್‌ಗೆ ಆತಂಕದ ವರ್ಷ. ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಯಾವಾಗ ಸರ್ಕಾರ ಪತನಗೊಳ್ಳುತ್ತೋ ಎಂಬ ಆತಂಕವಿತ್ತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಹೆಚ್ಚು ಸ್ಥಾನ ಗೆಲ್ಲುವ ಕನಸು ಕಂಡಿದ್ದರೂ ಖುದ್ದು ದೇವೇಗೌಡರು ಸೋಲುವ ಜತೆಗೆ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದು ಜೆಡಿಎಸ್‌ಗೆ ತೀವ್ರ ಹಿನ್ನೆಡೆಯುಂಟಾಯಿತು. ಉಪ ಚುನಾವಣೆಯಲ್ಲಿ ಜೆಡಿಎಸ್ ಐದು ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದರೂ ಒಂದೇ ಒಂದು ಸ್ಥಾನದಲ್ಲೂ ಗೆಲ್ಲಲಾಗದೆ 38 ಸಂಖ್ಯಾಬಲ 35 ಕ್ಕೆ ಇಳಿಯುವಂತಾಯಿತು. ಮುಂದೆಯೂ ಜೆಡಿಎಸ್ ಶಾಸಕರು ಬಿಜೆಪಿಯತ್ತ ಹೋಗುವ ಆತಂಕ ಪಕ್ಷಕ್ಕೆ ಇದ್ದೇ ಇದೆ.
ಪ್ರಮುಖಾಂಶಗಳು-ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಲೋಕಸಭೆ ಚುನಾವಣೆಯಲ್ಲೂ ಮುಖಭಂಗ
-ದೇವೇಗೌಡ, ಮಲ್ಲಿಕಾರ್ಜು ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೋಲು
-ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಬೆ. ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಗೆಲುವು
-ಸಮ್ಮಿಶ್ರ ಸರ್ಕಾರ ಪತನ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ
-ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್-ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ಕೆ.ಕುಮಾರಸ್ವಾಮಿ
-ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ-12 ರಲ್ಲಿ ಭರ್ಜರಿ ಗೆಲುವು
-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲುವಾಸ
-ಸಿ.ಎಸ್.ಶಿವಳ್ಳಿ, ಎ.ಕೆ.ಸುಬ್ಬಯ್ಯ ನಿಧನ