Advertisement

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಆಗುವ ಕಾಲ ಸನ್ನಿಹಿತ: ಕಾರಜೋಳ

08:31 PM Oct 28, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಸತತ ಪ್ರಯತ್ನದಿಂದ ಭದ್ರಾ ಮೇಲ್ದಂಡೆ ಯೋಜನೆ “ರಾಷ್ಟ್ರೀಯ ಯೋಜನೆ’ ಎಂದು ಘೋಷಣೆಯಾಗುವ ಕಾಲ ಹತ್ತಿರವಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹುತೇಕ ಕೇಂದ್ರ ಸರಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದರು.

ಯೋಜನೆಗೆ ಈಗಾಗಲೇ ಕೇಂದ್ರ ಆರ್ಥಿಕ ಸಚಿವಾಲಯದ ಒಪ್ಪಿಗೆಯೂ ದೊರೆತಿದ್ದು, ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದರಿಂದ ಒಟ್ಟಾರೆ ಶೇ. 60ರಷ್ಟು ಮೊತ್ತ ಕೇಂದ್ರದಿಂದ ಬರಲಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ನೆರವಾಗಲಿದೆ ಭದ್ರಾ ಮೇಲ್ದಂಡೆ ಯೋಜನೆಗೆ 23 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಭೂ ಸ್ವಾಧೀನ ಪರಿಹಾರ, ಪುನರ್ವಸತಿ ಕಾರ್ಯ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಒಟ್ಟು 36 ಸಾವಿರ ಎಕ್ರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಇದುವರೆಗೆ 26 ಸಾವಿರ ಎಕ್ರೆ ಸ್ವಾಧೀನ ಮುಗಿದಿದೆ. ಉಳಿದದ್ದು ಡಿ.31ರೊಳಗೆ ಆಗಲಿದೆ ಎಂದು ತಿಳಿಸಿದರು.

Advertisement

ಈ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ 10 ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು. ಒಂದೇ ವರ್ಷದಲ್ಲಿ ಇಷ್ಟು ಬೃಹತ್‌ ಮೊತ್ತ ಖರ್ಚು ಮಾಡಿದ್ದು ಇದೇ ಮೊದಲು ಎಂದು ಹೇಳಿದರು.

ತುಂಗಭದ್ರಾ ನದಿಗೆ ಕೊಪ್ಪಳದ ನವಲಿ ಬಳಿಕ ಸಮತೋಲನ ಜಲಾಶಯ ನಿರ್ಮಾಣಕ್ಕೆ 13 ಸಾವಿರ ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಕಾವೇರಿ ಸಹಿತ ರಾಜ್ಯದ ಬಹುತೇಕ ನದಿಗಳಿಗೆ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ನೀರು, ಕಲುಷಿತ ನೀರು, ಕೈಗಾರಿಕೆಗಳ ವಿಷಕಾರಕ ತ್ಯಾಜ್ಯ ಸೇರ್ಪಡೆಯಿಂದ ಮಲಿನವಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ನದಿ ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಗೂ ಈ ಕುರಿತು ನಿರ್ದೇಶನ ನೀಡಲಾಗಿದೆ.
– ಗೋವಿಂದ ಕಾರಜೋಳ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next