Advertisement

ಸಮಯ ನಿಮಗಾಗಿ ಕಾಯುವುದಿಲ್ಲ!

12:43 AM Feb 24, 2020 | Sriram |

ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ. ಹೌದು ಸಮಯ ಎನ್ನುವುದು ಬೆಲೆ ಕಟ್ಟಲಾಗದ, ಒಮ್ಮೆ ಕೈ ಜಾರಿದರೆ ಮತ್ತೆಂದೂ ಸಿಗಲಾರದ ಅಮೂಲ್ಯ ಸಂಗತಿ.

Advertisement

ಅನುಭವಗಳೇ ಪಾಠವಾಗಲಿ
ಸಮಯದ ಮಹತ್ವವನ್ನು ಅರಿಯಬೇಕಾದರೆ ಕೊನೆ ಕ್ಷಣದಲ್ಲಿ ರೈಲು ತಪ್ಪಿಸಿಕೊಂಡ ಪ್ರಯಾಣಿಕನಲ್ಲಿ ಕೇಳಬೇಕು, ಸಂದರ್ಶನವನ್ನು ತಪ್ಪಿಸಿಕೊಂಡ ನಿರುದ್ಯೋಗಿಗೆ ಗೊತ್ತು ಸಮಯದ ಮೌಲ್ಯ, ಅನುತ್ತೀರ್ಣನಾದ ವಿದ್ಯಾರ್ಥಿ ಅರಿಯುತ್ತಾನೆ ಸಮಯದ ಪಾತ್ರವನ್ನು….ಇಂತಹ ಅನುಭವಗಳು ನಮಗೆ ಪಾಠವಾಗಬೇಕು. ಅದರಲ್ಲೂ ವಿದ್ಯಾರ್ಥಿಗಳಿಗೆ ಸಮಯದ ಮಹತ್ವ ಅರಿವಾದರಷ್ಟೇ ಅವರು ಸಾಧನೆಯ ಮೆಟ್ಟಿಲೇರಲು ಸಾಧ್ಯ.

ಅಂದಿನ ಪಾಠ ಅಂದೇ ಮನನ ಮಾಡಬೇಕು-ಹಿಂದಿನಿಂದಲೂ ನಾವು ಕೇಳಿಕೊಂಡು ಬಂದ ಮಾತು. ಹೀಗೆ ಮಾಡುವುದರಿಂದ ಪರೀಕ್ಷೆ ಸಮಯದಲ್ಲಿ ಒತ್ತಡ ಆಗುವುದನ್ನು ತಪ್ಪಿಸಬಹುದು ಎನ್ನುವ ಸತ್ಯವನ್ನು ಹಿರಿಯರು ಕಂಡುಕೊಂಡಿದ್ದರು. ಅವನು ಪಿಯು ವಿದ್ಯಾರ್ಥಿ. ದಿನಾ ಅಭ್ಯಾಸ ಮಾಡು ಎನ್ನುವ ಹೆತ್ತವರ, ಶಿಕ್ಷಕರ ಮಾತಿಗೆ ಅವನು ಬೆಲೆಯೇ ಕೊಟ್ಟಿರಲಿಲ್ಲ. ನಾಳೆ ಓದಿದರಾಯಿತು. ಪರೀಕ್ಷೆಗೆ ಇನ್ನೂ ಸಮಯವಿದೆ ಎಂದು ಹೇಳಿ ಮೋಜು ಮಸ್ತಿಯಲ್ಲಿ ಅವನಿದ್ದ. ಇನ್ನೇನು ಪರೀಕ್ಷೆಗೆ ಹತ್ತು ದಿನ ಇದೆ ಎನ್ನುವಾಗ ಅವನಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಒಂದು ಕಡೆ ಪರೀಕ್ಷೆ ಹತ್ತಿರವಾಯಿತು, ಓದಿ ಆಗಿಲ್ಲ ಎನ್ನುವ ಚಿಂತೆ…ಇನ್ನೊಂದು ಕಡೆ ಕಾಯಿಲೆ…ಅವನು ಹೈರಾಣಾಗಿದ್ದ. ಹುಷಾರಾಗಿ ಪರೀಕ್ಷೆಯ ಮುನ್ನಾ ದಿನ ಮನೆಗೆ ಬಂದ. ಅನಂತರ ನಿದ್ದೆಗೆಟ್ಟು ಓದಬೇಕಾಯಿತು. ಮೊದಲೇ ಓದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಪಶ್ಚಾತ್ತಾಪ ಪಟ್ಟುಕೊಂಡ. ಆದರೆ ಕಾಲ ಮಿಂಚಿ ಹೋಗಿತ್ತು. ಜಸ್ಟ್‌ ಫ‌ಸ್ಟ್‌ ಕ್ಲಾಸ್‌ನಲ್ಲಿ ತೇರ್ಗಡೆ ಹೊಂದಿದ ಅವನಿಗೆ ಉತ್ತಮ ಕಾಲೇಜಿನಲ್ಲಿ ಸೀಟ್‌ ಸಿಗುವುದು ಕಷ್ಟವಾಯಿತು. ಇಂತಹ ಪ್ರಸಂಗ ನಮಗೆಲ್ಲ ಪಾಠವಾಗಬೇಕು. ವಿದ್ಯಾರ್ಥಿ ಎಂದಲ್ಲ. ಎಲ್ಲರಿಗೂ ಇದು ಅನ್ವಯವಾಗುತ್ತದೆ. ಯಾವುದೇ ಕೆಲಸವನ್ನು ಮುಂದಕ್ಕೆ ತಳ್ಳುವ ಮುನ್ನ ಈಗಲೇ ಮಾಡುತ್ತೇನೆ ಎನ್ನುವ ಮನೋಭಾವ ಮೂಡಿದರೆ ಭವಿಷ್ಯದಲ್ಲಿ ಕೊರಗುವುದನ್ನು ತಪ್ಪಿಸಬಹುದು.

ಕಂಟ್ರೋಲ್‌ ಝಡ್‌ಗೆ ಅವಕಾಶವಿಲ್ಲ!
ಜೀವನದಲ್ಲಿ ಕಂಟ್ರೊಲ್‌ ಝಡ್‌ಗೆ ಅವಕಾಶವಿಲ್ಲ. ಆದ್ದರಿಂದ ಸಮಯವನ್ನು ವ್ಯರ್ಥ ಮಾಡದೆ ಕಾರ್ಯ ನಿರ್ವಹಿಸಲು ಮುಂದಾಗಬೇಕು. ಯಾವುದೇ ಕೆಲಸ ಮಾಡುವುದನ್ನು ಮುಂದೆ ತಳ್ಳಿ ಕೊನೆಗೆ ಛೇ! ಇಷ್ಟು ದಿನ ವ್ಯರ್ಥ ಮಾಡಿದೆನಲ್ಲ ಎಂದು ಸಂಕಟ ಪಡುವುದರಿಂದ ಪ್ರಯೋಜನವಿಲ್ಲ. ನಮ್ಮ ಬಳಿ ಟೈಮ್‌ ಮೆಷಿನ್‌ ಇಲ್ಲ. ಹಿಂದಕ್ಕೆ ಹೋಗಿ ಮತ್ತೆ ಆ ಸಮಯದಲ್ಲಿ ಜೀವಿಸಲು ಸಾಧ್ಯವಿಲ್ಲ. ಹೀಗಾಗಿ ಸಿಕ್ಕ ಸಮಯದಲ್ಲೇ ನಾವು ಮಾಡಬೇಕೆಂದಿರುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹಾಗಂತ ಎಲ್ಲವೂ ನಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ ಎಂದಲ್ಲ. ಕೊನೆ ಪಕ್ಷ ಪ್ರಯತ್ನವಾದರೂ ಪಟ್ಟೆನಲ್ಲ ಎನ್ನುವ ಸಮಾಧಾನ, ತೃಪ್ತಿ ಇರುತ್ತದೆ.

ಆರ್‌.ಬಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next