Advertisement

ಸಮಯ ಪ್ರಜ್ಞೆ ಮುಖ್ಯ

10:03 PM Jul 16, 2019 | mahesh |

ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತೀರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯದ ಅಗತ್ಯ ಬಹಳ ಇದೆ. ಅದೇ ರೀತಿ ಸಮಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ವಿದ್ಯಾರ್ಥಿಗಳು ಸಮಯವನ್ನು ಹೊಂದಿಸಿಕೊಳ್ಳುವುದು ಮುಖ್ಯ. ಹೀಗೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಕಾಲೇಜು ಜೀವನದಲ್ಲಿ ಎಷ್ಟೋ ವಿದ್ಯಾರ್ಥಿಗಳು ಸಮಯದ ಅರಿವಿಲ್ಲದೇ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡ ಉದಾಹರಣೆಗಳು ಬಹಳಷ್ಟಿವೆ. ಅನಂತರ ಉದ್ಯೋಗ ಹುಡುಕುವ ವೇಳೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟದ್ದು ಇದೆ.

Advertisement

ಸಮಯದ ನಿರ್ವಹಣೆ ಹೇಗೆ?
ಕಾಲೇಜಿಗೆ ಬರುವ ಸಮಯವನ್ನು ಸರಿಯಾಗಿ ನಿಗದಿಪಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ವಿಚಾರಗೋಷ್ಠಿ, ಕಾರ್ಯಯೋಜನೆಯಂತಹ ಪಠ್ಯೇತರ ಚಟುವಟಿಕೆಗಳನ್ನು ಹೇಳಿದ ಸಮಯಕ್ಕೆ ಸರಿಯಾಗಿ ಹಾಜರುಪಡಿಸುವುದು. ಜತೆಗೆ ಅಂತಹ ಚಟುವಟಿಕೆಗಳನ್ನು ಸಮಯಕ್ಕಿಂತ ಮೊದಲೇ ಮಾಡಿ ಮುಗಿಸುವುದು ಉತ್ತಮ. ಅವಸರದಲ್ಲಿ ಮಾಡಿದರೆ ಅದರ ಮೌಲ್ಯ ಕುಸಿಯುತ್ತದೆ.

ಮೊಬೈಲ್‌ ಬಳಕೆಗೆ ಮಿತಿ ಇರಲಿ
ಇಂದು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಕಸಿದುಕೊಳ್ಳುತ್ತಿವೆ. ಶಾಲಾ ಕಾಲೇಜುಗಳಲ್ಲಿ ಮೊಬೈಲ್‌ ಬಳಕೆಯನ್ನು ನಿಯಂತ್ರಿಸಿದರೂ ಕೂಡ ಅದರ ಬಳಕೆ ಕಡಿಮೆಯಾಗುತ್ತಿಲ್ಲ. ಸಮಯವನ್ನು ಹೊಂದಿಸಿಕೊಂಡು ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದರೆ ಯಶಸ್ಸು ನಿಮ್ಮದಾಗುತ್ತದೆ. ಮೊಬೈಲ್‌, ಸಾಮಾಜಿಕ ಜಾಲತಾಣಗಳ ಬಳಕೆ ತಪ್ಪಲ್ಲ. ಆದರೆ ಅವುಗಳ ಬಳಕೆಗೆ ಮಿತಿ ಇರಲಿ.

ಕೆಲಸಗಳನ್ನು ಮೊದಲು ನಿಗದಿಪಡಿಸಿಕೊಳ್ಳಿ
ಸಮಯದ ಪರಿಪಾಲನೆಗೆ ಒಂದು ಉತ್ತಮ ಅಭ್ಯಾಸ ಕೆಲಸಗಳ ಪಟ್ಟಿಯನ್ನು ತಯಾರಿಸಿಕೊಳ್ಳುವುದು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅಂದಿನ ಕೆಲಸದ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಕಾರ್ಯಗಳನ್ನು ಮಾಡತೊಡಗಿದರೆ ಯಾವುದೇ ಸಮಸ್ಯೆಗಳಿಲ್ಲದೆ ಆ ದಿನ ಕೆಲಸಗಳು ಸಲೀಸಾಗಿ ಮಾಡಿಕೊಂಡು ಹೋಗಲು ಹಾಗೂ ಸಮಯ ನಿರ್ವಹಣೆ ಕೂಡ ಸರಿಯಾಗಿ ಆಗುತ್ತದೆ. ವಿದ್ಯಾರ್ಥಿಗಳಂತೂ ಈ ವೇಳಾಪಟ್ಟಿಯನ್ನು ತಯಾರಿಸಿದ್ದಲ್ಲಿ ವಿದ್ಯಾಭ್ಯಾಸ, ಪಠ್ಯೇತರ ಚಟುವಟಿಕೆಗಳಿಗೆ ಸಮಯ ಸರಿಯಾಗಿ ಹೊಂದಿಸಿಕೊಳ್ಳಲು ಸಾಧ್ಯ. ಸಮಯ ಎಲ್ಲಿ ವ್ಯರ್ಥವಾಗುತ್ತಿದೆ ಎಂಬುದಕ್ಕೆ ಈ ವೇಳಾಪಟ್ಟಿ ಉತ್ತರ ನೀಡುತ್ತದೆ.

ಪೂರ್ವ ಯೋಜನೆಯಿರಲಿ
ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಲೇಬೇಕಾಗುತ್ತದೆ. ಆದರೆ ಅದಕ್ಕೂ ಒಂದು ಉತ್ತಮ ಪೂರ್ವಯೋಜನೆ ಬೇಕು. ಸಮಯದ ಹೊಂದಾಣಿಕೆ ಇಲ್ಲದೆ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವೇ ಇಲ್ಲ. ಪರೀಕ್ಷೆಗೆ ಒಂದೆರಡು ತಿಂಗಳ ಮೊದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಪ್ರತಿಯೊಂದು ವಿಷಯಕ್ಕೂ ಇಂತಿಷ್ಟೇ ಸಮಯವನ್ನು ಮೀಸಲಿಡಬೇಕು. ಯಾವ ವಿಷಯ ಹೆಚ್ಚು ಕಷ್ಟವೋ ಅದಕ್ಕಾಗಿ ಅಧಿಕ ಸಮಯ ಮೀಸಲಿಡುವುದು ಒಳಿತು.

Advertisement

– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next