ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದು, ಮೇ 23ರಂದು ಸ್ಫೋಟಗೊಂಡು ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಿದ್ದರಾಮಯ್ಯ ಬಟನ್ ಒತ್ತಿ ಬಾಂಬ್ ಸ್ಫೋಟಗೊಳಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಇತಿಶ್ರೀ ಹಾಡಲಿದ್ದಾರೆ. ಲೋಕಸಭೆ ಹಾಗೂ ಉಪಚುನಾವಣೆಗಳ ಫಲಿತಾಂಶದ ದಿನಾಂಕ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯದ ಬೇಗುದಿ ಸ್ಫೋಟಗೊಂಡಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣವಾಗಿದ್ದಾರೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದೇ ಸಿದ್ದರಾಮಯ್ಯ. ತಮ್ಮ ಬೆಂಬಲಿಗರಾದ ಚೆಲುವರಾಯ ಸ್ವಾಮಿ ಹಾಗೂ ಬಾಲಕೃಷ್ಣ ಅವರನ್ನು ಸುಮಲತಾ ಪರ ಪ್ರಚಾರ ಮಾಡುವಂತೆ ಮಾಡಿ, ಕುಮಾರಸ್ವಾಮಿ ಪುತ್ರ ನಿಖೀಲ್ ಅವರನ್ನು ಸೋಲಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಸಿದ್ದರಾಮಯ್ಯಗೆ ನಿಖೀಲ್ ಗೆಲ್ಲುವುದು ಬೇಕಾಗಿಲ್ಲ, ಸುಮಲತಾ ಗೆಲ್ಲಬೇಕಿದೆ. ಸುಮಲತಾ ಪರ ಪ್ರಚಾರ ಮಾಡಿರುವುದಾಗಿ ಚೆಲುವರಾಯಸ್ವಾಮಿಯೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಮಾಡುತ್ತಿರುವ ಷಡ್ಯಂತ್ರ ಜೆಡಿಎಸ್ ಮುಖಂಡರಿಗೆ ಗೊತ್ತಾಗುತ್ತಿದೆ. ಇದೇ ಕಾರಣದಿಂದ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಮೂಲಕ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಭಾವನೆಯನ್ನು ವಿಶ್ವನಾಥ ಮೂಲಕ ಹೊರಹಾಕುತ್ತಿದ್ದಾರೆ. ವಿಶ್ವನಾಥ ಹೇಳಿಕೆ ನೀಡಿದ್ದಕ್ಕೆ ಜೆಡಿಎಸ್‌ನ ಯಾವುದೇ ಮುಖಂಡರು ವಿರೋಧ ವ್ಯಕ್ತಪಡಿಸಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ. ಸಿದ್ದರಾಮಯ್ಯ ಆಶೀರ್ವಾದ ಇರುವವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿರುತ್ತೇನೆ ಎಂದು ಕುಮಾರಸ್ವಾಮಿ ಹೇಳಿರುವುದು ವಸ್ತು ಸ್ಥಿತಿಯನ್ನು ಹೇಳುತ್ತದೆ ಎಂದರು.
ಸಿದ್ದರಾಮಯ್ಯ ಮಾತೆತ್ತಿದರೆ ನೈತಿಕತೆ ಬಗ್ಗೆ ಹೇಳುತ್ತಾರೆ. ಮುಂದೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಬೇಕೆನ್ನುವ ಸಿದ್ದರಾಮಯ್ಯ, ತಮ್ಮ ಚೇಲಾಗಳ ಮೂಲಕ ತಾವೇ ಮುಂದಿನ ಸಿಎಂ ಎಂದು ಹೇಳಿಸಿ, ಗೊಂದಲ ಸೃಷ್ಟಿಸಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ, ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದನ್ನು ಸಿದ್ದು ಮರೆತಂತಿದೆ ಎಂದರು.