ದುಬೈ: ಈ ಐಪಿಎಲ್ ಮೊದಲ ಬಾರಿಗೆ ಅಮೆರಿಕದ ಕ್ರಿಕೆಟಿಗನಿಗೂ ಬಾಗಿಲು ತೆರೆಯುವ ಮೂಲಕ ಸುದ್ದಿಯಾಗಿತ್ತು. ಅಲ್ಲಿನ ವೇಗಿ ಅಲಿ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದರು. ಆದರೆ ಅವರು ಒಂದೂ ಪಂದ್ಯವಾಡದೆ ಕೂಟದಿಂದ ಹೊರ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ.
ಪಾರ್ಶ್ವಸ್ನಾಯು ಸೆಳೆತದಿಂದ ಹೊರಬಿದ್ದಿರುವ ಅವರ ಬದಲಿಗೆ ನ್ಯೂಜಿಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಅವರು ಕೆಕೆಆರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
28 ವರ್ಷದ, ಪಾಕಿಸ್ತಾನಿ ಮೂಲದ ಅಮೆರಿಕನ್ ಬೌಲರ್ ಅಲಿ ಖಾನ್ ಐಪಿಎಲ್‌ಗಿಂತ ಮೊದಲು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದರು. ಕೂಟದಲ್ಲಿ ಅಲಿ ಖಾನ್ ಎಂಟು ವಿಕೆಟ್ ಕಬಳಿಸಿದ್ದರು.
95 ಟಿ 20 ಪಂದ್ಯಗಳನ್ನಾಡಿರುವ ಟಿಮ್ ಸೀಫರ್ಟ್ 1775 ರನ್ ಗಳಿಸಿದ್ದಾರೆ. 50 ಲಕ್ಷ ಮೂಲಬೆಲೆಯೊಂದಿಗೆ ಐಪಿಎಲ್ ಹರಾಜಿಗೆ ನೋಂದಾವಣೆಯಾಗಿದ್ದ ಸೀಫರ್ಟ್ ನ್ನು ಯಾವುದೇ ತಂಡ ಖರೀದಿಸಿರಲಿಲ್ಲ.
ಕೆಕೆಆರ್ ತಂಡದ ನಾಯಕನಾಗಿದ್ದ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್ ನಲ್ಲಿದ್ದು, ನಾಯಕತ್ವವನ್ನೂ ಇಯಾನ್ ಮಾರ್ಗನ್ ಗೆ ಹಸ್ತಾಂತರಿಸಿದ್ದಾರೆ. ಸೀಫರ್ಟ್ ಆಗಮನದಿಂದ ಕೆಕೆಆರ್ ಗೆ ವಿಕೆಟ್ ಕೀಪರ್ ಆಯ್ಕೆಯೊಂದು ಲಭಿಸಿದ್ದು, ಮುಂದಿನ ದಿನಗಳಲ್ಲಿ ದಿನೇಶ್ ಕಾರ್ತಿಕ್ ಬೆಂಚ್ ಕಾಯ್ದರೂ ಅಚ್ಚರಿಯಿಲ್ಲ.