ಮುಂಬಯಿ: ಚೀನಾ ಮೂಲದ ಟಿಕ್ ಟಾಕ್ ಆ್ಯಪ್ ಇಂದು ಮನೆಮಾತಾಗಿದೆ. ಎಲ್ಲಾ ವರ್ಗದ ಮತ್ತು ಎಲ್ಲಾ ವಯಸ್ಸಿನ ಹಾಗೂ ಲಿಂಗಬೇಧವಿಲ್ಲದೇ ಎಲ್ಲರೂ ಈ ಆ್ಯಪ್ ಅನ್ನು ಅಪ್ಪಿಕೊಂಡುಬಿಟ್ಟಿದ್ದಾರೆ. ಜನಪ್ರಿಯತೆಯ ತುತ್ತ ತುದಿಯಲ್ಲಿರುವ ಟಿಕ್ ಟಾಕ್ ಹುಚ್ಚಿಗೆ ಬಿದ್ದು ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಉದಾಹರಣೆಯೂ ಸಾಕಷ್ಟಿದೆ. ಆದರೆ ಇದೇ ಟಿಕ್ ಟಾಕ್ ದೇಶಾದ್ಯಂತ ಹಲವಾರು ಪ್ರತಿಭೆಗಳು ಬೆಳಕಿಗೆ ಬರುವಲ್ಲಿಯೂ ನೆರವಾಗಿದೆ.
ಸದ್ಯ ಭಾರತದಲ್ಲಿ ಸುಮಾರು 200 ಮಿಲಿಯನ್ ಅಂದರೆ 20 ಕೋಟಿ ಸಕ್ರೀಯ ಬಳಕೆದಾರರನ್ನು ಹೊಂದಿದೆ. ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿರುವ ಟಿಕ್ ಟಾಕ್ ಬಳಕೆಯಿಂದ ಭಾರತದಿಂದಲೇ ಸಾವಿರಾರು ಕೋಟಿ ರೂ.ಗಳ ಆದಾಯವನ್ನು ಪಡೆದುಕೊಳ್ಳುತ್ತಿದೆ. ಎಪ್ರಿಲ್ ತಿಂಗಳಲ್ಲಿ ಕಾನೂನಿನ ತೊಡಕಿನಿಂದ ಕೆಲವು ದಿನಗಳು ಟಿಕ್ ಟಾಕ್ ಸೇವೆ ಅಲಭ್ಯಗೊಂಡಿದ್ದರೂ ಬಳಿಕ ಮತ್ತೆ ಸೇವೆಗೆ ಲಭ್ಯವಾಗಿತ್ತು.
ಟಿಕ್ ಟಾಕ್ ಹೇಗೆ ವ್ಯಕ್ತಿಯ ಬದುಕನ್ನು ಬದಲಿಸಬಹುದು ಎಂಬುದಕ್ಕೆ ಒಂದು ಸಾಕ್ಷಿಯಾಗಿ ಇಲ್ಲೊಂದು ನಿದರ್ಶನವಿದೆ. ಚಂಡಿಗಢದ ಹೊರವಲಯದ ಶುಶಾಂತ್ ಖನ್ನಾ ಎಂಬ ಅಟೋ ರಿಕ್ಷಾ ಚಾಲಕ ತನ್ನ ಬಿಡುವಿನ ವೇಳೆಯಲ್ಲಿ ಟಿಕ್ ಟಾಕ್ ಮೂಲಕ ಮನರಂಜನೆ ಪಡೆದುಕೊಳ್ಳುತ್ತಿದ್ದರು. ತನ್ನ ಆಟೋ ರಿಕ್ಷಾಕ್ಕೆ ಬಾಡಿಗೆ ಬರುವ ಜನರೊಂದಿಗೆ ಬೆರೆತು, ಬಿಡುವಿದ್ದಾಗ ಟಿಕ್ ಟಾಕ್ ಆ್ಯಪ್ ತೆರೆಯುತ್ತಿದ್ದರು. ತನ್ನ ಮನರಂಜನೆ ಇಂದು ಶುಶಾಂತ್‌ನ ನ್ನು ಪ್ರಸಿದ್ಧ ಕಲಾವಿದನನ್ನಾಗಿಸಿತು.
ಸಲ್ಮಾನ್ ಖಾನ್ ಅವರ ಅಭಿಮಾನಿಯಾಗಿದ್ದ ಇವರು ಬಹುತೇಕ ಸಲ್ಲುನಂತೆ ನಟನೆ ಮಾಡುತ್ತಿದ್ದರು.1.70 ಲಕ್ಷ ಫಾಲೋವರ್ಸ್ ಅನ್ನು ಸಂಪಾದಿಸಿದ್ದರು. ಈಗ ಇವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ನಾನು ವೀಡಿಯೋಗಳನ್ನು ಟೈಂ ಪಾಸ್‌ಗಾಗಿ ಮಾಡುತ್ತಿದ್ದೆ. ನನಗೆ ಅದು ಖುಷಿಕೊಡುತ್ತಿತ್ತು. ಆದರೆ ಈಗ ಅದೃಷ್ಟವೇ ಬದಲಾಗಿದೆ ಎಂದು ಶುಶಾಂತ್ ಹೇಳುತ್ತಾರೆ. ಇವರಂತಹ ನೂರಾರು ಜನರು ಇಂದು ಸ್ಟಾರ್ ಆಗಿ ಬದಲಾಗಿದ್ದು, ಅವುಗಳಿಗೆ ಟಿಕ್ ಟಾಕ್ ವೇದಿಕೆಯೇ ಕಾರಣವಾಗಿದೆ.