ಚಾಮರಾಜನಗರ: ಕೋವಿಡ್ 19 ವೈರಸ್ ಹರಡದಂತೆ ತಡೆಯಲು ಸಾರ್ವಜನಿಕ ಜಾಗೃತಿಗಾಗಿ ನಿಯೋಜಿಸಿರುವ ಸೆಕ್ಟರ್ ಮ್ಯಾಜಿ ಸ್ಟ್ರೇ ಟ್‌ಗಳು ವಹಿಸಿರುವ ಕಾರ್ಯನಿರ್ವಹಣೆ ಮುಂದುವರಿಯುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸೂಚಿಸಿದರು. ನಗರದಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, 5ನೇ ಹಂತದ ಲಾಕ್‌ಡೌನ್ ಈಗಾಗಲೇ ಜಾರಿಯಾಗಿದೆ.
ಜಿಲ್ಲೆ ಹಸಿರು ವಲಯದಲ್ಲಿದೆ. ಪ್ರಸ್ತುತ ಲಾಕ್‌ಡೌನ್ ಸಡಿಲಿಕೆಯಾಗಿರುವುದರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಕೋವಿಡ್-19 ಜಾಗೃತಿ ಕಾರ್ಯಗಳಿಗಾಗಿ ನಿಯೋಜಿಸಿರುವ ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳು ತಮ್ಮ ಕರ್ತವ್ಯ ಮತ್ತಷ್ಟು ಚುರುಕುಗೊಳಿಸಬೇಕು ಎಂದರು.
ಚೆಕ್‌ಪೋಸ್ಟ್‌ಗಳಲ್ಲಿ ಜಾಗ್ರತೆ: ಜಿಲ್ಲೆಯು ಹಸಿರು ವಲಯವನ್ನಾಗಿ ಉಳಿಸಿಕೊಳ್ಳುವುದು ಸವಾಲಾಗಿದೆ. ಮತ್ತಷ್ಟು ಜಾಗೃತರಾಗಬೇಕು. ಅಂತರ ಜಿಲ್ಲೆ ಚೆಕ್‌ಪೋಸ್ಟ್ ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಅಂತರರಾಜ್ಯ ಚೆಕ್ ಪೋಸ್ಟ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಚೆಕ್ ಪೋಸ್ಟ್‌ಗಳ ಮೂಲಕ ಒಳಬರುವ ಸರಕು ವಾಹನಗಳಿಗೆ ಮಾತ್ರ ಸ್ಯಾನಿಟೈಜೇಷನ್ ಮಾಡಬೇಕು ಎಂದರು.
ಸಾಂಸ್ಥಿಕ ಕ್ವಾರಂಟೈನ್: ಜಿಲ್ಲೆಗೆ ಕೇರಳ ಹಾಗೂ ತಮಿಳುನಾಡಿಂದ ಬರುವವರನ್ನು ನಿಗದಿಪಡಿಸಿರುವ ಹಾಸ್ಟೆಲ್, ಹೋಟೆಲ್‌ಗಳಂತಹ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ತಮಿಳುನಾಡಿಂದ ಬರುವವರಿಗೆ ಕಡ್ಡಾಯವಾಗಿ 7 ದಿನಗಳವರೆಗೆ ಕ್ವಾರೆಂಟೈನ್ ಮಾಡಿದ ಬಳಿಕ ಮನೆಗೆ ಕಳುಹಿಸಬೇಕು. ಜಿಲ್ಲೆಯ ಜನ ಅಂತಾರಾಜ್ಯ ಸೇರಿದಂತೆ ಹೊರಗಿನಿಂದ ಬಂದವರನ್ನು ಕ್ವಾರಂಟೈನ್ ಮಾಡುವಂತೆ ಮಾಹಿತಿ ನೀಡಿ ಸಹಕರಿಸಬೇಕೆಂದರು. ಸಭೆಯಲ್ಲಿ ಎಸ್ಪಿ ಆನಂದ್ ಕುಮಾರ್, ಎಸಿ ನಿಖೀತಾ, ಡಿಎಚ್‌ಒ ಡಾ.ಎಂ.ಸಿ. ರವಿ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಡಾ.ಸಂಜೀವ್ ಮತ್ತಿತರ ಅಧಿಕಾರಿಗಳಿದ್ದರು.
ಸಮುದಾಯ ಜಾಗೃತಿ ಅಗತ್ಯ: ಜಿಲ್ಲೆಯ ಜನತೆ ಸಮುದಾಯ ಹೆಚ್ಚು ಜಾಗೃತರಾಗಿದ್ದಾರೆ. ಆದರೂ ಜೂ.8ರ ನಂತರ ದೇವಸ್ಥಾನಗಳು, ಹೋಟೆಲ್‌ಗಳು ತೆರೆಯುವುದರಿಂದ ಜನಸಂದಣಿ ಅಧಿಕವಾಗಲಿದ್ದು, ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳು ಜನರಿಗೆ ಭೌತಿಕ ಅಂತರ ಕಾಪಾಡಿಕೊಳ್ಳುವಿಕೆ, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವಂತೆ ತಿಳಿವಳಿಕೆ ನೀಡಬೇಕು. ತಪ್ಪಿದರೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ನಿರ್ದೇಶನ ನೀಡಿದರು.