Advertisement

ಗಣೇಶೋತ್ಸವ-ಮೊಹರಂಗೆ ಬಿಗಿ ಬಂದೋಬಸ್ತ್

10:21 AM Aug 30, 2019 | Suhan S |

ಬೆಳಗಾವಿ: ಶ್ರೀ ಗಣೇಶೋತ್ಸವ ಹಾಗೂ ಮೊಹರಮ್‌ ಹಬ್ಬ ಜೊತೆಯಾಗಿ ಬಂದಿರುವುದರಿಂದ ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಬಿಗಿ ಪೊಲೀಸ್‌ ಬಂದೋಬಸ್ತ್ ವಹಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 2ರಂದು ಗಣೇಶ ಚತುರ್ಥಿ ಹಾಗೂ 10ರಂದು ಮೊಹರಮ್‌ ಹಬ್ಬ ಆಚರಣೆ ಅಗಲಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಬ್ಬ ಆಚರಿಸುವ ಸಂಘ ಸಂಸ್ಥೆಗಳು ಶಾಂತ ರೀತಿಯಿಂದ ಆಚರಿಸುವ ಮೂಲಕ ಅವಘಡಗಳು ನಡೆಯದಂತೆ ಮುತುವರ್ಜಿ ವಹಿಸಬೇಕು ಎಂದರು.

ಐದು ಜಿಲ್ಲೆಗಳಲ್ಲಿ 12 ಸಾವಿರ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌, ಅಗತ್ಯಕ್ಕೆ ತಕ್ಕಂತೆ ಹೋಮ್‌ ಗಾರ್ಡ್‌ ಹಾಗೂ ಕೆಎಸ್‌ಆರ್‌ಪಿ ಪಡೆ ಕಟ್ಟೆಚ್ಚರ ವಹಿಸಲಿವೆ. ಒಟ್ಟಾರೆ 10 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಅನುಮತಿ ಕೇಳಿದ್ದು, ಎಲ್ಲರಿಗೂ ಅನುಮತಿ ನೀಡಲಾಗಿದೆ ಎಂದರು.

ಮಂಟಪಗಳನ್ನು ನಿರ್ಮಾಣ ಮಾಡಿದ ಸ್ಥಳಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಹೆಸ್ಕಾಂಗೆ ನಿರ್ದೇಶನ ನೀಡಲಾಗಿದ್ದು, ಎಲ್ಲ ಕಡೆಯೂ ಯಾವುದೇ ತೊಂದರೆ ಆಗದಂತೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸರಳ ಗಣೇಶೋತ್ಸವ ಅಚರಣೆ ಆಗಲಿದೆ. ಗಣೇಶೋತ್ಸವ ಆಚರಣೆ ಜತೆಗೆ ಸ್ಥಳೀಯರ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಯಾವುದಾದರೂ ಸಮಸ್ಯೆ ಇದ್ದಲ್ಲಿ ಎಸ್‌ಪಿ ಅವರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು. ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆ ಮಾರ್ಗದಲ್ಲಿ ಸಿಸಿ ಕ್ಯಾಮರಾಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಅಳವಡಿಸಲಾಗುತ್ತಿದೆ ಎಂದರು.

ಸಂಪೂರ್ಣ ಮುಳುಗಡೆಯಾದ ಗ್ರಾಮಗಳಲ್ಲೂ ಗಣೇಶ ಪ್ರತಿಷ್ಠಾಪನೆ ನಡೆಯಲಿದೆ. ಸರಳವಾಗಿ ಗಣೇಶೋತ್ಸವ ಆಚರಿಸುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಇಂಥ ಪ್ರದೇಶಗಳಲ್ಲಿ ಮುತುವರ್ಜಿ ವಹಿಸಿ ದುರ್ಘ‌ಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಹಬ್ಬ ಆಚರಿಸಲಾಗದ ಸ್ಥಿತಿಯಲ್ಲಿರುವ ಊರುಗಳಲ್ಲಿಯೂ ಕೆಲವು ಸಂಘ ಸಂಸ್ಥೆಗಳು ಸಂತ್ರಸ್ತರನ್ನು ತೊಡಗಿಸಿಕೊಂಡು ಆಚರಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

Advertisement

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಡಚಣೆ ಆಗದಂತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಕೆಲ ಕಡೆಗೆ ವಿದ್ಯುತ್‌ ಕಂಬ, ತಂತಿಗಳು ಮುರಿದು ಬಿದ್ದಿದ್ದು, ಇದರ ದುರಸ್ತಿ ಕಾರ್ಯ ನಡೆಸುವಂತೆ ಆಯಾ ಇಲಾಖೆಗಳಿಗೆ ತಿಳಿಸಲಾಗಿದೆ.

ಹಬ್ಬದ ವೇಳೆ ಶಾಂತಿಭಂಗ ಮಾಡಬಹುದಾದ 3 ಸಾವಿರ ಜನರಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಸದಂತೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಆಯಾ ಜಿಲ್ಲೆಗಳಲ್ಲಿ ಈಗಾಗಲೇ ಶಾಂತಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು. ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ರಾಮ ಅರಸಿದ್ಧಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next