Advertisement

ಅಯೋಧ್ಯೆಗೆ 3500 ಖಾಕಿ ಪಡೆ ; 45ಕ್ಕಿಂತ ಕಡಿಮೆ ವಯಸ್ಸಿನ ಪೊಲೀಸರಿಂದ ಸರ್ಪಗಾವಲು

11:44 AM Aug 04, 2020 | Hari Prasad |

ಅಯೋಧ್ಯೆ: ರಾಮಜನ್ಮಭೂಮಿಯ ಆ.5ರ ಚಾರಿತ್ರಿಕ ಭೂಮಿಪೂಜೆಗೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ 200 ಗಣ್ಯ ಅತಿಥಿಗಳು ಪಾಲ್ಗೊಳ್ಳುವ ಸಮಾರಂಭಕ್ಕೆ ಬಿಗಿಭದ್ರತೆ ಒದಗಿಸಲು ಉ.ಪ್ರ. ಸರಕಾರ ಕೋವಿಡ್ 19 ನೆಗೆಟಿವ್‌ ದೃಢಪಟ್ಟ 3500 ಪೊಲೀಸರನ್ನು ನಿಯೋಜಿಸಿದೆ.

Advertisement

ಸರ್ಪಗಾವಲಿಗೆ ಸನ್ನದ್ಧರಾದ 3500 ಪೊಲೀಸರೂ 45ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಯೋಧ್ಯೆಯ ಭದ್ರತಾ ವ್ಯವಸ್ಥೆಗಳ ಕಾರ್ಯವನ್ನು ಇವರು ನಿರ್ವಹಿಸಲಿದ್ದಾರೆ. ಗುಪ್ತಚರ ಇಲಾಖೆ ಉಗ್ರರ ದಾಳಿಯ ಮುನ್ಸೂಚನೆ ನೀಡಿರುವುದರಿಂದ ಉ.ಪ್ರ. ಸರಕಾರ‌ ಅಯೋಧ್ಯೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಿದೆ.

ಬಿಗಿ ಭದ್ರತೆ: ಅಯೋಧ್ಯೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಾಂತೀಯ ಸಶಸ್ತ್ರ ಪೊಲೀಸ್‌ ಪಡೆಯ 20 ಕಂಪೆನಿಗಳೂ ಸೇರಿ ಒಟ್ಟು 40 ಕಂಪೆನಿಗಳು ರಕ್ಷಣೆಗೆ ಸಾಥ್‌ ನೀಡಲಿವೆ. ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌, ಎಡಿಜಿ ಲಕ್ನೋ ವಲಯ ಸತ್ಯನಾರಾಯಣ್‌ ಸಬತ್‌ ಭೂಮಿಪೂಜೆಗೆ ಮುಂಚಿತವಾಗಿ ಪೊಲೀಸ್‌ ಭದ್ರತಾ ವ್ಯವಸ್ಥೆಯನ್ನು ಮುನ್ನಡೆಸಲಿದ್ದಾರೆ. ಅಯೋಧ್ಯೆ ಎಸ್‌ಎಸ್‌ಪಿ ದೀಪಕ್‌ ಕುಮಾರ್‌ ಸೇರಿದಂತೆ 8 ವರಿಷ್ಠಾಧಿಕಾರಿಗಳು, ಇಬ್ಬರು ಡಿಐಜಿ ಮಟ್ಟದ ಅಧಿಕಾರಿಗಳ ತಂಡ ಭದ್ರತೆಯನ್ನು ನಿರ್ವಹಿಸಲಿದೆ.

ಗುಂಪುಗೂಡುವಂತಿಲ್ಲ: ಆ.5ರಂದು ಅಯೋಧ್ಯೆ ನಗರದ ಬೀದಿಗಳಲ್ಲಿ 5 ಜನಕ್ಕಿಂತ ಹೆಚ್ಚು ಮಂದಿ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ಭೂಮಿಪೂಜೆ ಭದ್ರತೆ ಹಾಗೂ ಕೋವಿಡ್ 19 ಪ್ರೊಟೊಕಾಲ್‌ ಅನ್ವಯ ಈ ನೀತಿ ಪಾಲಿಸಲು ಕಟ್ಟಾಜ್ಞೆ ಜಾರಿಯಾಗಿದೆ. ‘ಅಯೋಧ್ಯೆಯಲ್ಲಿ ಕೋವಿಡ್ 19 ಸಂಪೂರ್ಣ ನಿಯಂತ್ರಣದಲ್ಲಿದೆ. ಭೂಮಿಪೂಜೆ ದೃಷ್ಟಿಯಿಂದಲೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಡಿಸಿ ಅನೂಜ್‌ ಕುಮಾರ್‌ ತಿಳಿಸಿದ್ದಾರೆ.


ಯೋಧರ ಮನೆಗಳ ಮೃತ್ತಿಕೆ ಹೊತ್ತು ಸಾಗಿದ ಪೋರ

ವರ್ಷದ ಪೋರ, ಹುತಾತ್ಮ ಯೋಧರ ಮನೆಗಳ ಪವಿತ್ರ ಮೃತ್ತಿಕೆ ಹೊತ್ತು ಶನಿವಾರ ಅಯೋಧ್ಯೆ ತಲುಪಿದ್ದಾನೆ. ದೇಶಕ್ಕಾಗಿ ಪ್ರಾಣ ಸಮರ್ಪಿಸಿದ ಯೋಧರ ಗೌರವಾರ್ಥ ಈ ಮೃತ್ತಿಕೆಯನ್ನು ಭೂಮಿಪೂಜೆಗೆ ಬಳಸಲು ಟ್ರಸ್ಟ್‌ ನಿರ್ಧರಿಸಿದೆ. ದೇವ್‌ ಪರಾಶರ್‌ ಎಂಬ ಪುಟಾಣಿ 11 ಸಾವಿರ ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾನೆ. ಈಗಾಗಲೇ ಈತ 1600 ಹುತಾತ್ಮ ಯೋಧರ ಮನೆಯ ಮೃತ್ತಿಕೆಯನ್ನು ಸಂಗ್ರಹಿಸಿದ್ದಾನೆ. ಪ್ರತಿ ಯೋಧರ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ, ಅವರ ಸಮಾಧಿಯನ್ನು ಈತ ಸ್ವಚ್ಛಗೊಳಿಸಿದ್ದಾನೆ. ಈತನ ರಾಷ್ಟ್ರಪ್ರೇಮ ಮೆಚ್ಚಿ ‘ಪುಟಾಣಿ ಸೈನಿಕ’ ಅಂತಲೇ ಕರೆಯಲಾಗುತ್ತಿದೆ.

Advertisement

ಗಣ್ಯರಿಗೆ ದೂರವಾಣಿ ಮೂಲಕ ಆಹ್ವಾನ
ರಾಮಮಂದಿರ ಹೋರಾಟದಲ್ಲಿ ನಿರ್ಣಾಯಕ ಹೋರಾಟ ನಡೆಸಿದ್ದ ಬಿಜೆಪಿ ಧುರೀಣ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಆಹ್ವಾನಿಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮೂಲಗಳು ಸ್ಪಷ್ಟಪಡಿಸಿವೆ. ಈ ಇಬ್ಬರೂ ನಾಯಕರು ಸಿಬಿಐ ಸ್ಪೆಷಲ್‌ ಕೋರ್ಟ್‌ನಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಎಲ್ಲ ಗಣ್ಯಾತಿಥಿಗಳಿಗೂ ಫೋನ್‌ ಕರೆ ಮೂಲಕ ಆಹ್ವಾನ ತಲುಪಿಸುವ ಕಾರ್ಯ ಸಾಗಿದೆ.

ಪ್ರತಿಯೊಬ್ಬ ಭಾರತೀಯನ ಸಮ್ಮತಿಯಿದೆ: ಕೈ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯನ ಸಮ್ಮತಿ ಇದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಮುಖಂಡ ಕಮಲನಾಥ್‌ ಹೇಳಿದ್ದಾರೆ. ‘ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವನ್ನು ನಾನು ಸ್ವಾಗತಿಸುತ್ತೇನೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಕೂಡ ರಾಮಮಂದಿರ ನಿರ್ಮಾಣ ಬಯಸಿದ್ದರು. ದೇಶದ ಜನರೂ ಬಹಳ ಹಿಂದಿನಿಂದಲೂ ಇದನ್ನು ನಿರೀಕ್ಷಿಸಿದ್ದು, ಅವರೆಲ್ಲರೂ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇಂಥ ಬೆಳವಣಿಗೆ ಭಾರತದಲ್ಲಿ ಮಾತ್ರವೇ ಸಾಧ್ಯ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next