ಗಜೇಂದ್ರಗಡ: ಬಾದಾಮಿ ತಾಲೂಕಿನಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗಜೇಂದ್ರಗಡ ತಾಲೂಕಿನ ಜನತೆಯಲ್ಲೂ ಆತಂಕ ಶುರುವಾಗಿದೆ.
ಸೋಂಕಿತರು ತಾಲೂಕಿನ ಮುಶಿಗೇರಿ, ಸರ್ಜಾಪೂರ ಮತ್ತು ಶಾಂತಗೇರಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂಬುದು ಟ್ರಾವೆಲ್ ಹಿಸ್ಟರಿಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಗರ್ಭಿಣಿಯ ಸಂಪರ್ಕದಿಂದ ಸೋಂಕು ತಗುಲಿರುವ ವ್ಯಕ್ತಿ ಗಜೇಂದ್ರಗಡ ತಾಲೂಕಿನ ಮೂರು ಗ್ರಾಮಗಳಲ್ಲಿ ಸಂಚರಿಸಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಮುಶಿಗೇರಿ, ಸರ್ಜಾಪೂರ ಮತ್ತು ಶಾಂತಗೇರಿ ಗ್ರಾಮಗಳ ಜನರು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್ ಆಗಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸೋಂಕಿತ (ಪಿ-681) ಮತ್ತು (ಪಿ-683) ವ್ಯಕ್ತಿಗಳು ಎಲ್ಲೆಲ್ಲಿ ಸಂಪರ್ಕಿಸಿದ್ದಾರೆಂಬುದು ಪತ್ತೆ ಹಚ್ಚು ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಈಗಾಗಲೇ ರೋಣ ಪಟ್ಟಣದ ಕೃಷ್ಣಾಪುರದಲ್ಲಿ ತಲ್ಲಣ ಸೃಷ್ಟಿಸಿರುವ ಕೋವಿಡ್ 19 ಪ್ರಕರಣ ಇದೀಗ ಗಜೇಂದ್ರಗಡ ತಾಲೂಕಿನಲ್ಲೂ ಭೀತಿಗೆ ಕಾರಣವಾಗಿದೆ. ಸೋಂಕಿತ ವ್ಯಕ್ತಿ ಯಾವ ಸ್ಥಳಕ್ಕೆ ಭೇಟಿ ನೀಡಿದ್ದಾನೆ ಎಂಬುದು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ. ಜಿಲ್ಲೆಯ ಗದಗ ಹೊರತು ಪಡಿಸಿ, ಜಿಲ್ಲೆಯ ಯಾವೊಂದು ತಾಲೂಕಿನಲ್ಲಿ ಕೋವಿಡ್ 19 ಪ್ರಕರಣಗಳು ಬಾರದಂತೆ ನಿಯಂತ್ರಿಸಲಾಗಿತ್ತು. ಈ ಮಧ್ಯೆ ಅನ್ಯ ಜಿಲ್ಲೆಯ ಜನರು ಕದ್ದುಮುಚ್ಚಿ ಆಗಮಿಸುತ್ತಿರುವುದು ಜನರಲ್ಲಿ ಆತಂಕ ತಂದಿದೆ.