ಮೈಸೂರು: ಸಂರಕ್ಷಿತಾರಣ್ಯಗಳ ನಡುವೆ ವಿಶಾಲವಾಗಿ ಹರಡಿಕೊಂಡಿರುವ ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ಅರ್ಧ ಕಿ.ಮೀ.ಗೂ ಹೆಚ್ಚು ಈಜಿ ದಡ ಸೇರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಡುವೆ ಸಾವಿರಾರು ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಚಾಚಿಕೊಂಡಿರುವ ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸೋಮವಾರ ಮುಂಜಾನೆ ಬಂಡೀಪುರ ಅರಣ್ಯದಂಚಿನಿಂದ ಹುಲಿ ನೀರಿನಲ್ಲಿ ಈಜುತ್ತಾ ಬಂದು ನಾಗರಹೊಳೆ ಅರಣ್ಯವನ್ನು ಪ್ರವೇಶಿಸಿದೆ. ಈ ದೃಶ್ಯವನ್ನು ಸೆರೆ ಹಿಡಿದಿರುವ ಅರಣ್ಯಾಧಿಕಾರಿಗಳು ಮತ್ತು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹುಲಿಯೊಂದು ಸಣ್ಣ ಪ್ರಮಾಣದ ತೊರೆ, ನದಿಯನ್ನು ಈಜಿರುವ ದೃಶ್ಯಗಳು ಕಂಡುಬಂದಿತ್ತಾದರೂ ಜಲಾಶಯವೊಂದರಲ್ಲಿ ತುಂಬಿ ತುಳುಕುತ್ತಿರುವ ಹಿನ್ನೀರನ್ನು ಯಾವ ನಿರ್ಭಯವೂ ಇಲ್ಲದೇ ಹುಲಿ ಈಜಿರುವ ದೃಶ್ಯ ಇದೇ ಮೊದಲು ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ:ಫಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್
ಹುಲಿಯೊಂದು ಅರ್ಧ ಕಿ.ಮೀ. ದೂರ ಕಬಿನಿ ಹಿನ್ನೀರಿನಲ್ಲಿ ಈಜಿರುವುದು ತೀರಾ ಸಾಮಾನ್ಯ ಸಂಗತಿ. ಈ ನೋಟ ನಮಗೆ ಅಪರೂಪವಾಗಿದ್ದರೂ, ವನ್ಯಜೀವಿಗಳು ನದಿ, ತೊರೆ ದಾಟುವುದು ಸಾಮಾನ್ಯ. ಅವುಗಳಿಗೆ ಈಜುವ ಕಲೆ ಸಹಜವಾಗಿ ಬಂದಿರುವಂಥದ್ದು.
– ಕೃಪಾಕರ ಸೇನಾನಿ ವನ್ಯಜೀವಿ ತಜ್ಞರು.