Advertisement
ಅದೇ ಕಾಡಿನಲ್ಲಿ ಹುಟ್ಟಿ ಬೆಳೆದ ಚೋಮ ಆ ಅರಣ್ಯದ ಒಂದು ಭಾಗವೇ ಆಗಿದ್ದ. ಅವನು ಬಾಲ್ಯದಿಂದಲೇ ಹುಲಿ, ಚಿರತೆ, ಆನೆಗಳನ್ನು ತುಂಬಾ ಹತ್ತಿರದಿಂದ ಕಂಡವನು. ಹಾಡಿಗಳಲ್ಲಿ ಬೆಳೆದವನು. ಹೀಗಾಗಿ ಹುಲಿಯ ಓಡಾಟದ ದಾರಿ, ಅದು ಕೂರುವ ಸ್ಥಳ, ಅದು ತನ್ನ ಟೆರಿಟರಿ ಸ್ಥಾಪನೆಗಾಗಿ ಮೂತ್ರ ವಿಸರ್ಜನೆ ಮಾಡುವ ಮರಗಳ ಪರಿಚಯ ಅವನಿಗೆ ಚೆನ್ನಾಗಿ ಗೊತ್ತು. ಅವನು ಆಗಾಗ ಇಣುಕಿ ನೆಲವನ್ನು ದಿಟ್ಟಿಸಿ ನೋಡುತ್ತಿದ್ದದ್ದು ಹುಲಿಯ ಹೆಜ್ಜೆಗಳನ್ನು ಗಮನಿಸಲು. ಆ ಮೂಲಕ ಹುಲಿ ಇವತ್ತು ಯಾವ ದಾರಿಯಲ್ಲಿ ನಡೆದುಹೋಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು.
Related Articles
ಮೊದಲ ಸಲ ಹುಲಿ ನೋಡಲು ಹೋಗಿದ್ದ ನಮಗೆಲ್ಲಾ ಬೇಗ ಅದನ್ನು ನೋಡಿಬಿಡುವ ವಿಚಿತ್ರ ತರಾತುರಿ ಇತ್ತು. ಆದರೆ ಹುಲಿ ಅಷ್ಟು ಸಲೀಸಾಗಿ ಸಿಗುವ ಪ್ರಾಣಿಯಲ್ಲ. ಮೃಗಾಲಯಗಳಿಗೆ ಹೋಗಿ ತತ್‌ಕ್ಷಣವೇ ಎಲ್ಲ ಪ್ರಾಣಿಗಳನ್ನು ನೋಡಿ ಮುಗಿಸುವ ದುರಭ್ಯಾಸ ಇರುವ ಜನರಿಗೆ ಕಾಡಿನೊಳಗಿನ ಅಗಮ್ಯ ಹುಡುಕಾಟ ಮೂರ್ಖತನದ ಪರಮಾವಧಿಯಂತೆ ಕಾಣುತ್ತದೆ. ಇಲ್ಲಿ ಮೌನವಾಗಿದ್ದು ಪ್ರತಿಶಬ್ದವನ್ನೂ ಆಲಿಸಿ ಅದರ ಗೂಡಾರ್ಥವನ್ನು ಹೆಕ್ಕಿ ತೆಗೆಯಬೇಕು. ಕಣ್ಣು, ಕಿವಿ ಎಚ್ಚರವಾಗಿರಬೇಕು. ಹುಲ್ಲಿನೊಳಗೆ ಮಲಗಿರುವ ಹುಲಿಯನ್ನು ಗುರುತು ಹಚ್ಚುವುದು ಬಲು ಕಠಿಣ ಕೆಲಸ. ಎಷ್ಟೋ ಸಲ ಅದು ನಮ್ಮ ಪಕ್ಕದಲ್ಲೇ ಮಲಗಿದ್ದರೂ ನಮಗೆ ಗೋಚರಿಸುವುದಿಲ್ಲ. ಎಷ್ಟೋ ಸಲ ನಾವು ಹುಲಿಯನ್ನು ನೋಡದಿದ್ದರೂ ಅದು ನಮ್ಮನ್ನು ಗಮನಿಸಿರುತ್ತದೆ.
Advertisement
ಅಲ್ಲಿ ಕಾಣಿಸಿತು ಹುಲಿ ಹೆಜ್ಜೆತುಂಬಾ ಹೊತ್ತು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಜೀಪನ್ನು ಅಲ್ಲಲ್ಲಿ ನಿಲ್ಲಿಸಿ ತಾನೊಬ್ಬನೇ ಮುಗಮ್ಮಾಗಿ ಚಿಂತಿಸಿ ಏನೇನೋ ಹುಡುಕುತ್ತಿದ್ದ ಬೊಮ್ಮ ನಮಗೊಬ್ಬ ರಹಸ್ಯ ವ್ಯಕ್ತಿಯಾಗಿ ಕಾಣುತ್ತಿದ್ದ. ಮೇಲುನೋಟಕ್ಕೆ ಸಾಮಾನ್ಯನಂತೆ ಕಾಣುವ ಅವನಿಗೆ ಮಾತ್ರ ಕಾಡಿನ ಭಾಷೆಯ ಪರಿಚಯವಿದೆ. ಪ್ರತಿ ಪ್ರಾಣಿಯ ಶಬ್ದಕ್ಕೂ ಇರುವ ಸ್ಪಷ್ಟ ಅರ್ಥಗಳನ್ನು ಅವನು ಗ್ರಹಿಸಬಲ್ಲ. ನಡುವೆ ಒಂದು ಹಾದಿಯಲ್ಲಿ ಮೂಡಿದ್ದ ಹುಲಿಯ ಹೆಜ್ಜೆಗಳನ್ನು ಬೊಮ್ಮ ಗುರುತಿಸಿದ. ಅದು ಈಗಷ್ಟೇ ಬಂದು ಇಲ್ಲೇ ಎಲ್ಲೋ ಹತ್ತಿರ ಕೂತಿದೆ ಎಂದು ಖಚಿತವಾಗಿ ಹೇಳಿದ. ಇಲ್ಲಿ ನಡೆದು ಹೋಗಿರುವುದು ಗಂಡುಹುಲಿಯೆಂದು ಸ್ಪಷ್ಟವಾಗಿ ಹೇಳಿದ. ಕೆಂಪುಮಣ್ಣಿನ ಮೇಲೆ ತಾಜಾತನದಲ್ಲಿ ಅಚ್ಚೊತ್ತಿದ್ದ ಹುಲಿಯ ಹೆಜ್ಜೆಗಳನ್ನು ನೋಡಿದ ತಕ್ಷಣ ನನಗಾದ ಖುಷಿ ಅಷ್ಟಿಷ್ಟಲ್ಲ. ಸಾಕ್ಷಾತ್ ಹುಲಿಯನ್ನೇ ನೋಡಿದಷ್ಟು ಖುಷಿ ಆ ಕ್ಷಣಕ್ಕೆ ಆಯಿತು. ಮುಂದೆ ನೀರಿರುವ ಸಣ್ಣ ಕೆರೆಯ ಕಡೆಗೆ ನಮ್ಮನ್ನು ಕರೆದುಕೊಂಡು ಹೋದ. ಅಲ್ಲಿ ಸ್ವಲ್ಪ ಹೊತ್ತು ಸುಮ್ಮನೆ ಕೂತು ಆಲಿಸ ತೊಡಗಿದೆವು. ಅಷ್ಟು ಹೊತ್ತಿಗೆ ಅಲ್ಲಿಗೊಂದು ಆನೆಗಳ ಹಿಂಡು ಬಂತು. ಮೊದಲಿಗೆ ಶಾಂತವಾಗಿ ಬಂದ ಆನೆಗಳು ಕೆರೆಯಲ್ಲಿ ನೀರು ಕುಡಿದವು. ಆಮೇಲೆ ಅವು ಅಲ್ಲಿನ ಏರಿಯನ್ನು ಹತ್ತಿ ಕೆಳಗೆ ಇಳಿಯಲು ಹೊರಟ ತಕ್ಷಣವೇ ಒಮ್ಮೆಲೆ ಹೆದರಿ ಘೀಳಿಟ್ಟವು. ತಮ್ಮ ಜೊತೆಗೆ ಮರಿಗಳು ಇರುವ ಕಾರಣ ಆನೆಗಳು ಹೀಗೆ ವರ್ತಿಸುತ್ತಿರಬಹುದೆಂದು ನಾವೆಲ್ಲ ಭಾವಿಸಿದವು. ಸಿಡಿಲಿನಂಥ ಗರ್ಜನೆ
ಇದಾದ ಕೆಲವೇ ಕ್ಷಣಗಳಲ್ಲಿ ಕೆಳಗಿದ್ದ ಹಳ್ಳದ ಕಡೆಯಿಂದ ಹುಲಿಯ ಭೀಕರ ಗರ್ಜನೆ ಕೇಳಿಬಂತು. ವ್ಯಾಘ್ರದ ಸಿಟ್ಟಿನ ಗಡಸು ದನಿಯನ್ನು ಕೇಳಿದರೆ ಎಂಥವರೂ ಉಚ್ಚೆ ಹೊಯ್ದುಕೊಳ್ಳುವುದು ಗ್ಯಾರಂಟಿ. ಜೀವನದಲ್ಲಿ ಮೊದಲ ಸಲ ಕೇಳಿದ ಹುಲಿಯ ಘರ್ಜನೆ ನಿಜಕ್ಕೂ ತಲ್ಲಣವನ್ನು ಮೂಡಿಸಿತು. ಅಬ್ಬಾ! ಅದೇನು! ಎದೆ ಸೀಳಿ ಹೋಗುವ ಭಯಾನಕ ಸಿಡಿಲ ದನಿ. ಧೂಳು ರಸ್ತೆಯ ಮೇಲೆ ನಡೆದುಹೋಗಿದ್ದ ಹುಲಿ ಅಲ್ಲಿ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು. ಇದು ಬೊಮ್ಮನಿಗೆ ಗೊತ್ತಾಗಿಯೇ ಇರಬೇಕು, ಅವನು ನಮ್ಮ ಜೀಪನ್ನು ಅಲ್ಲಿಯೇ ತರುಬಿ ನಿಲ್ಲಿಸಿದ್ದು. ಹುಲಿಯನ್ನು ನೋಡಿ ಅಂಜಿದ ಆನೆಗಳು ಪ್ರತಿಯಾಗಿ ಕಿರಿಚಾಡಿದ್ದು. ಈಗ ಎಲ್ಲವೂ ನಮಗೆ ಸ್ಪಷ್ಟವಾಗ ತೊಡಗಿತ್ತು. ಇನ್ನು ಆನೆಗಳಿಗೂ ಹುಲಿಗೂ ಜಗಳ ಬೀಳುವುದು ಗ್ಯಾರಂಟಿ ಎಂದೇ ನಾವೆಲ್ಲ ಭಾವಿಸಿದೆವು. ಹಾಗೊಂದು ಫೈಟಿಂಗ್ ಸೀನ್ ನಡೆದೇ ಬಿಟ್ಟರೆ ಒಳ್ಳೆಯ ಚಿತ್ರಗಳು ಸಿಕ್ಕುತ್ತವೆ ಎಂಬ ದುರಾಲೋಚನೆ. ಆದರೆ ಅಂಥದ್ದೇನೂ ಘಟಿಸಲಿಲ್ಲ. ಬದಲಾಗಿ ಆನೆಗಳೆಲ್ಲವೂ ಒಗ್ಗಟ್ಟಾಗಿ ಒಟ್ಟಿಗೆ ಘೀಳಿಟ್ಟು ಹುಲಿಯನ್ನು ಓಡಿಸಿಬಿಟ್ಟವು. ಹುಲಿ ಗೊಣಗಾಡುತ್ತಾ, ಕೆರೆ ದಡದ ಕೆಳಗೆ ನಡೆದು ಹೋಗಿದ್ದು ನಮ್ಮ ಗಮನಕ್ಕೆ ಬಂತು. ಹುಲಿ ಪ್ರತ್ಯಕ್ಷ ಕಾಣದಿದ್ದರೂ ಅದರ ಒದರಾಟ, ನಡೆದು ದೂರ ಹೋಗುತ್ತಿರುವ ಸದ್ದು ನಮ್ಮ ಕಿವಿಗೆ ಬೀಳುತ್ತಿತ್ತು. ಮತ್ತೆ ಕಂಡನಾ ಹುಲಿರಾಯನು…
ತಕ್ಷಣ ಚುರುಕಾದ ಬೊಮ್ಮ ಜೀಪನ್ನು ವೇಗವಾಗಿ ಇನ್ನೊಂದು ದಿಕ್ಕಿನ ಕಡೆಗೆ ತೆಗೆದುಕೊಂಡು ಹೊರಟ. ಪ್ರಾಯಶಃ ಹುಲಿ ಅತ್ತಕಡೆ ಹೊರಟಿದೆ ಎಂಬ ಖಚಿತ ಊಹೆ ಅವನದಾಗಿತ್ತು. ಮುಂದೆ ಒಂದು ಹಳ್ಳವನ್ನು ದಾಟಿ ಕೊಂಚ ದಿಣ್ಣೆಯಂತಹ ಪ್ರದೇಶಕ್ಕೆ ಹೋಗಿನಿಂತು ಮತ್ತೆ ನಮಗೆಲ್ಲಾ ಶಾಂತವಾಗಿರುವಂತೆ ಸೂಚಿಸಿದ. ನಾವು ತೆಪ್ಪಗೆ ಕೂತು ಅತ್ತಿತ್ತ ಕುತೂಹಲದಿಂದ ನೋಡ ತೊಡಗಿದೆವು. ಕಾಡಿನ ಸಣ್ಣಪುಟ್ಟ ಶಬ್ದಗಳಿಗೂ ಮಹತ್ ಅರ್ಥಗಳನ್ನು ಕಲ್ಪಿಸುತ್ತಾ ಹುಲಿ ಇಲ್ಲಿಂದ ಬರಬಹುದು? ಅಲ್ಲಿಂದ ಎಗರಬಹುದು? ಎಂದೆಲ್ಲಾ ಆಲೋಚಿಸುತ್ತಾ ಕೂತೆವು. ನಮ್ಮ ಹೃದಯ ಹೊಯ್ದಾಡುತ್ತಿದ್ದರೆ ಕಣ್ಣುಗಳು ತೀಕ್ಷ್ಣವಾಗಿದ್ದವು. ಬೊಮ್ಮನ ತಿಳುವಳಿಕೆಯ ಮಟ್ಟ ಎಷ್ಟು ನಿಖರವಾಗಿತ್ತು ಎಂದರೆ, ಕೆಲವೇ ನಿಮಿಷಗಳಲ್ಲಿ ಹುಲಿ ಅವನು ನಿರೀಕ್ಷಿಸಿದ್ದ ಪೊದೆಯಿಂದ ಥಟ್ಟನೆ ಹೊರಗೆ ಬಂದಿತು. ನಮ್ಮನ್ನು ನೋಡಿ ಕೊಂಚ ಗಲಿಬಿಲಿಯಾದ ಹುಲಿ ಮತ್ತೆ ಸಾವರಿಸಿಕೊಂಡು ಹಾಗೆ ಪಕ್ಕದಲ್ಲಿ ನಡೆಯುತ್ತಾ ನಡೆಯುತ್ತಾ ಮುಂದೆ ಹೋಗತೊಡಗಿತು. ಅದರ ಜೊತೆ ಜೊತೆಗೆ ಬೊಮ್ಮ ನಿಧಾನವಾಗಿ ಜೀಪನ್ನು ಚಲಾಯಿಸಿಕೊಂಡು ಹೊರಟ. ಕೊಂಚದೂರ ನಡೆದ ಹುಲಿ ಒಮ್ಮೆ ನಿಂತು ಆಕಳಿಸಿ ಅತ್ತ ಇತ್ತ ನೋಡಿ ನೆಲದ ಮೇಲೆ ಕೂತೇಬಿಟ್ಟಿತು. ನಡೆದು ದಣಿದಿದ್ದ ಅದರ ಬಾಯಿಂದ ಜೊಲ್ಲು ದಳದಳ ಸುರಿಯುತ್ತಿತ್ತು. ನಾವು ಭರಪೂರ ಚಿತ್ರಗಳನ್ನು ತೆಗೆದುಕೊಂಡೆವು. ಹುಲಿಯ ಗರ್ಜನೆ ಜೊತೆಗೆ ಅದು ನಡೆದ ದಾರಿಯ ಹೆಜ್ಜೆಗಳನ್ನು ಹಿಂಬಾಲಿಸಿ ಪ್ರತ್ಯಕ್ಷವಾಗಿ ನೋಡಿದ ಆ ದಿನ ಇವತ್ತಿಗೂ ಹಸಿರಾಗಿದೆ. ಆಮೇಲೆ ಅದೆಷ್ಟೋ ಹುಲಿಗಳನ್ನು ನೋಡಿದ್ದೇನಾದರೂ ಮೊದಲ ಸಲ ಬೊಮ್ಮನ ಜೊತೆಯಲ್ಲಿ ಹೋಗಿದ್ದ ಆ ಕ್ಷಣಗಳನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಜೀವ ಬಾಯಿಗೆ ಬರುವ ಆ ಕ್ಷಣ!
ಹುಲಿಯನ್ನು ನೋಡಲು ಹೊರಟಾಗ ಇರುವ ಉತ್ಸಾಹ ಮತ್ತು ಸಂತೋಷ ಅದನ್ನು ನಿಜವಾಗಿ ನೋಡುವಾಗ ಭಯವಾಗಿ ಬದಲಾಗಿರುತ್ತದೆ. ಹುಲಿ ಎದುರಿಗೆ ಇದ್ದಾಗ ಮಾತೇ ಹೊರಡುವುದಿಲ್ಲ. ಎಲ್ಲಿ ಎಗರಿ ನಮ್ಮನ್ನು ಮಟಾಶ್ ಮಾಡಿಬಿಡುತ್ತದೆಯೋ! ಎಂಬ ಭಯ ಕಾಡಲು ಶುರುವಾಗುತ್ತದೆ. ಮೈಮೇಲೆ ಮುಳ್ಳುಗಳು ಎದ್ದು, ತಲೆಯಲ್ಲಿ ರಕ್ತ ಬಿಸಿಯಾಗಿ ಓಡಾಡುತ್ತದೆ. ಬುದ್ದಿಗೆ ದಿಗಿಲು ಕೌಚಿಕೊಂಡು ಗಂಟಲು ಒಣಗಿ ಹೋಗಿರುತ್ತದೆ. ಹುಲಿಯ ನೇರ ನೋಟವೇ ಭಯಾನಕ. ಅದರ ತೀಕ್ಷ್ಣಕಣ್ಣುಗಳನ್ನು ಎದುರಿಸುವುದು ಸಖತ್ ಕಷ್ಟದ ಕೆಲಸ. ಹೆದರುತ್ತಲೇ ಜೀವ ಅಂಗೈಯಲ್ಲಿ ಇಟ್ಟುಕೊಂಡು ಇದನ್ನು ನೋಡಿದ ಮೇಲೆ ಸಿಗುವ ಸಂತೋಷ ಬೆಲೆ ಕಟ್ಟಲಾಗದ್ದು. ಆನಂತರ ಮನದಲ್ಲಿ ಮೂಡುವ ಸಾರ್ಥಕ ನೆಮ್ಮದಿ ವಿವರಿಸಲಾಗದ್ದು. ಅಂತಾರಾಷ್ಟ್ರೀಯ ಹುಲಿ ದಿನ
ನಿನ್ನೆಯಷ್ಟೇ ಮುಗಿದಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಇಂಥ ಸಂದರ್ಭದಲ್ಲಿಯೇ, ಹುಲಿರಾಯನನ್ನು ಮೊಟ್ಟಮೊದಲ ಬಾರಿಗೆ ಕಾಡಿನಲ್ಲಿ ಕಂಡಾಗಿನ ರೋಮಾಂಚನ, ಸಂಭ್ರಮ ಮತ್ತು ಆ ಕ್ಷಣದ ತಲ್ಲಣವನ್ನು ಲೇಖಕರು ಹೇಳಿಕೊಂಡಿದ್ದಾರೆ…