ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರು ಡಾಲರ್ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೆ ಕೊಪ್ಪ ತಾಲೂಕು ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ದೂರು ದಾಖಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆ ಮೂಲದ ಅಮರೇಂದ್ರ ಕಿರೀಟಿ ಅವರು ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದು ವಿನಯ್ ಗುರೂಜಿ ಅವರಿಗೆ ಉಡುಗೊರೆಯಾಗಿ ನೀಡಿದ್ದು, ಅವರ ತಂದೆಯ ಕಾಲದಿಂದಲೂ ಅವರ ಮನೆಯಲ್ಲಿದ್ದ ಹುಲಿಚರ್ಮ ಇತ್ತು ಎನ್ನಲಾಗುತ್ತಿದ್ದು, ಆ ಹುಲಿ ಚರ್ಮವನ್ನು ಉಡುಗೊರೆಯಾಗಿ ನೀಡಿದ್ದಾರೆ. 2022ರಲ್ಲಿ ಹುಲಿಚರ್ಮವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ದಾರೆಂದು ಆಶ್ರಮದವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.
ಅವಧೂತ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬಂದಿಗಳು ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ವಿನಯ್ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಯಾವುದೇ ಸಮಯದಲ್ಲಿ ತನಿಖೆಗೆ ಸಿದ್ದವಿದ್ದೇನೆ. ಆಶ್ರಮದಲ್ಲಿ ಒಂದು ದಿನ ಮಾತ್ರ ಹುಲಿ ಚರ್ಮ ಇತ್ತು. ಆ ಸಮಯದಲ್ಲಿ ತೆಗೆದಿರುವ ಪೋಟೋ ಆದಾಗಿದ್ದು, ಆ ಪೋಟೋ ಈಗ ವೈರಲ್ ಆಗಿದೆ. ಕಾನೂನು ರೀತಿಯಲ್ಲಿ ಶಿವಮೊಗ್ಗ ಮೂಲಕದ ಅಮರೇಂದ್ರ ಕಿರೀಟಿ ಅವರ ಬಳಿ ಇತ್ತು. ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದರು.
‘ಹುಲಿ ಚರ್ಮದ ಮೇಲೆ ಕುಳಿತಿರುವ ಅವಧೂತ ವಿನಯ್ ಗುರೂಜಿಯವರ ವಿಡಿಯೋ ಹಾಗೂ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೊಪ್ಪ ಡಿಎಫ್‌ಓ ನಂದೀಶ್ ಅವರ ನೇತೃತ್ವದ ಮೂವರು ಅಧಿಕಾರಿಗಳ ತಂಡ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ವಿನಯ್ ಗುರೂಜಿ ಅವರಿಂದ ಹೇಳಿಕೆ ಪಡೆದುಕೊಂಡರು.ವಿನಯ್ ಗುರೂಜಿ ಮಾತನಾಡಿ, ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ನನ್ನ ಬಳಿ ಮಾತನಾಡಿದ್ದು, ಎಲ್ಲಾ ದಾಖಲೆ ನೀಡಿದ್ದೇನೆ. ಮಾಹಿತಿ ಕೇಳಿದ್ದಾರೆ ನಮ್ಮ ಬಳಿ ಇದ್ದ ಎಲ್ಲಾ ದಾಖಲೆ ಗಳನ್ನು ನೀಡಿದ್ದೇನೆ ಎಂದರು.
‘ಬೆಂಗಳೂರಿನ ಕೇಂದ್ರ ಕಚೇರಿಯಿಂದ ಆಶ್ರಮದಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಸ್ಥಳ ಮಹಜರು ಮಾಡಿದ್ದೇವೆ. ವಿನಯ್ ಗುರೂಜಿ ಅವರಿಂದ ಹುಲಿ ಚರ್ಮದ ವಿಚಾರ ಮಾಹಿತಿ ಪಡೆದುಕೊಂಡಿದ್ದೇವೆ. ಎರಡು ವರ್ಷದ ಹಿಂದಿನ ಪೋಟೋ ಎಂದು ಹೇಳಿದ್ದು, ಯಾರು ಕೊಟ್ಟಿದ್ದು ಎಂಬ ಮಾಹಿತಿಯನ್ನು ನೀಡಿದ್ದಾರೆ. ಪರಿಶೀಲನೆ ನಡೆಸಿದ್ದು ಹಿರಿಯ ಅಧಿಕಾರಿ ಗಳಿಗೆ ಮಾಹಿತಿ ನೀಡುತ್ತೇವೆ.’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.