ಮಧ್ಯಪ್ರದೇಶ: ಗುನ್ ಘುಟ್ಟಿ ಅರಣ್ಯ ಪ್ರದೇಶದಿಂದ ಇಳಿದು ಬಂದು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಹುಲಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಮರಿಯಾ ಪ್ರದೇಶದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ;ಅಕ್ಟೋಬರ್ ನಲ್ಲಿ ಮತ್ತೆ ಭಾರತದಲ್ಲಿ ಕೋವಿಡ್ 3ನೇ ಅಲೆ ಸಾಧ್ಯತೆ: ರಾಯಿಟರ್ಸ್ ಸಮೀಕ್ಷೆ
ಉಮರಿಯಾ ಜಿಲ್ಲಾ ಕೇಂದ್ರದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಎನ್ ಎಚ್ 43ರಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಶುಕ್ರವಾರ ನಸುಕಿನ 3ಗಂಟೆ ವೇಳೆ ವಾಹನವೊಂದು ಹೊಡೆದ ಪರಿಣಾಮ ಹುಲಿ ಸಾವನ್ನಪ್ಪಿರುವುದಾಗಿ ಉಮರಿಯಾ ವಲಯಾರಣ್ಯಾಧಿಕಾರಿ (ಡಿಎಫ್ ಒ) ಮೋಹಿತ್ ಸೂದ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಹುಲಿ ಬಾಂಧವ್ ಗಢ್ ಸಂರಕ್ಷಿತ ಅರಣ್ಯ ಪ್ರದೇಶದಿಂದ ಬಂದಿಲ್ಲ ಎಂದು ಡಿಎಫ್ ಒ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಹುಲಿಗಳು ವಾಸವಾಗಿರುವ ಅಭಯಾರಣ್ಯಕ್ಕೆ ಸಮರ್ಪಕವಾದ ರಕ್ಷಣೆ ವ್ಯವಸ್ಥೆ ಇಲ್ಲ ಎಂದು ದೂರಿದ್ದಾರೆ.
ಇಂತಹ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ಕಾಣಿಸುವ ರೀತಿಯಲ್ಲಿ ಹೊಳೆಯುವ ಬೋರ್ಡ್ ಗಳನ್ನು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಹಾಕುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 43ರಲ್ಲಿ ಸ್ಪೀಡ್ ಬ್ರೇಕರ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ಸೂದ್ ತಿಳಿಸಿದ್ದಾರೆ.