Advertisement

ತಲೆಂಜಿ: ಮೋರಿ ಕಾಮಗಾರಿ ಅಪೂರ್ಣ

07:35 AM May 09, 2019 | mahesh |

ಬಡಗನ್ನೂರು: ನಿಡ್ಪಳ್ಳಿ ಶಾಂತದುರ್ಗಾ ದೇವಾಲಯದ ಸಂಪರ್ಕ ರಸ್ತೆ ಯಲ್ಲಿ ಮೋರಿ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿರುವ ಪರಿಣಾಮ ಸ್ಥಳೀಯರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

Advertisement

ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ತಲೆಂಜಿ- ಚಂದುಕೊಡ್ಲು – ನಿಡ್ಪಳ್ಳಿ ಶಾಂತಾದುರ್ಗಾ ದೇವಾಲಯದ ಸಂಪರ್ಕ ರಸ್ತೆಯಲ್ಲಿ ಮೋರಿ ನಿರ್ಮಾಣಕ್ಕೆ 14ನೇ ಹಣಕಾಸು ಯೋಜನೆಯಲ್ಲಿ 90 ಸಾವಿರ ರೂ. ಅನುದಾನ ಇರಿಸ ಲಾಗಿದೆ. ಎರಡು ತಿಂಗಳ ಹಿಂದೆಯೇ ಗುತ್ತಿಗೆ ದಾರರು ಕಾಮಗಾರಿ ಪ್ರಾರಂಭಿಸಿದ್ದರು. ಆದರೆ, ಅದನ್ನು ಸ್ಥಗಿತಗೊಳಿಸಿದ್ದರಿಂದ ಸಂಚರಿಸಲು ಕಷ್ಟಪಡಬೇಕಾಗಿದೆ. ಇದನ್ನು ತತ್‌ಕ್ಷಣ ಪೂರ್ಣಗೊಳಿಸದಿದ್ದರೆ ಮಳೆ ಗಾಲದಲ್ಲಿ ಇನ್ನಷ್ಟು ಸಮಸ್ಯೆ ಆಗಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪಿಡಿಒ ಪರಿಶೀಲನೆ
ಕಾಂಕ್ರೀಟ್ ಮೋರಿ ನಿರ್ಮಿಸಿದ್ದು, ಒಟ್ಟು ಮೂರು ದಿನ ಮಾತ್ರ ಕ್ಯೂರಿಂಗ್‌ ಮಾಡಿದ್ದಾರೆ. ಆಮೇಲೆ ನೀರು ಹಾಕದ ಕಾರಣ ಘನ ವಾಹನಗಳು ಸಂಚರಿಸಿ ದರೆ ಮೋರಿ ಒಡೆದು ಹೋಗುವ ಸಾಧ್ಯತೆ ಇದೆ. ಕನಿಷ್ಠ 15 ದಿನ ನೀರು ಹಾಯಿಸಬೇಕಿತ್ತು. ಇಲ್ಲದಿದ್ದರೆ ಕಾಂಕ್ರೀಟ್ ಕ್ಯೂರಿಂಗ್‌ ಆಗುವುದಿಲ್ಲ. ಮೋರಿಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸಿಲ್ಲ. ಇದು ವಾಹನ ಸವಾರರಿಗೆ ಕಂಟಕವಾಗಬಹುದು. ಅಧಿಕಾರಿಗಳು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಪಿಡಿಒ ವಸೀಮ ಗಂಧದ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ.

ಅಪಾಯದ ಭೀತಿ
ಮೋರಿ ನಿರ್ಮಾಣ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮೋರಿಯ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ಮಾಡಿದ್ದು, ಎರಡು ತಿಂಗಳ ಕಾಲ ವಾಹನಗಳು ಅದರಲ್ಲಿ ಸಂಚರಿಸಿದ್ದರಿಂದ ರಸ್ತೆ ಹೊಂಡ ಬಿದ್ದಿದೆ. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಈಗಲೇ ಸಮಸ್ಯೆಯಾಗುತ್ತಿದೆ. ಮಳೆಗಾಲದ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅಪಾಯ ಸಂಭವಿ ಸುವ ಸಾಧ್ಯತೆ ಹೆಚ್ಚು. ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನಕ್ಕೆ ಬರವು ಈಶ್ವರಮಂಗಲ, ಸುಳ್ಯಪದವು ಹಾಗೂ ಬಡಗನ್ನೂರು ಭಾಗದ ಜನರಿಗೆ ಇದು ತೀರಾ ಹತ್ತಿರದ ರಸ್ತೆ. ಮುಂದೆ ಇದು ಬೆಟ್ಟಂಪಾಡಿಗೂ ಸಂಪರ್ಕ ಕಲ್ಪಿಸುತ್ತದೆ.

Advertisement

ಎಸ್ಟಿಮೇಟ್ ಪ್ರಕಾರ ಕಾಮಗಾರಿ
ಎಂಜಿನಿಯರ್‌ ಎಸ್ಟಿಮೇಟ್ ಪ್ರಕಾರ ಕಾಮಗಾರಿ ಮಾಡಲಾಗಿದೆ. 90 ಸಾವಿರ ರೂ. ವೆಚ್ಚದಲ್ಲಿ ಮಣ್ಣಿನ ಕೆಲಸ ಹಾಗೂ ಮೋರಿ ರಚನೆ ಮಾಡಲಾಗಿದೆ. ಮುಂದಿನ ಯೋಜನೆಯಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಎಂಜಿನಿಯರ್‌ ತಿಳಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡಿದೆ. ಕಾಂಕ್ರೀಟ್‌ಗೆ ನೀರು ಹಾಕಿಲ್ಲ ಎಂದು ಸ್ಥಳೀಯರು ಗ್ರಾ.ಪಂ.ಗೆ ದೂರು ನೀಡಿದ್ದರು. ಪಿಡಿಒ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದರಿಂದ ಮಣ್ಣು ತೆರವು ವಿಳಂಬ ಮಾಡಲಾಗಿದೆ. ಎರಡು ದಿನಗಳಲ್ಲಿ ರಸ್ತೆಯನ್ನು ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿಕೊಡಲಾಗುವುದು.
– ಕೃಷ್ಣ ಪಾಟಾಳಿ ಪಟ್ಟೆ ಗುತ್ತಿಗೆದಾರ

ಪರಿಶೀಲಿಸಿಯೇ ಬಿಲ್ ಪಾವತಿ
ಕಾಮಗಾರಿ ಪೂರ್ಣಗೊಂಡ ಬಳಿಕ ಎಂಜಿನಿಯರ್‌ ಎಸ್ಟಿಮೇಟ್ ಪ್ರಕಾರ ಎಂ.ಬಿ. ಹಾಕಬೇಕು ಆ ಬಳಿಕ ಕಾಮಗಾರಿ ಪರಿಶೀಲನೆ ನಡೆಸಿ ಬಿಲ್ ಪಾವತಿ ಮಾಡಲಾಗುವುದು.
– ವಸೀಮ ಗಂಧದ ಪಿಡಿಒ

ನಡೆಯಲೂ ಕಷ್ಟವಾದೀತು

ಮೋರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ರಸ್ತೆ ಹೊಂಡ ಬಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ವಾರ್ಡ್‌ ಸದಸ್ಯರಿಗೆ ಹಾಗೂ ಅಧಿಕಾರಿಗೆ ತಿಳಿಸಲಾಗಿದೆ. ಆದರೂ ಈ ವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಮಳೆಗಾಲದ ಮುಂಚಿತವಾಗಿ ರಸ್ತೆ ದುರಸ್ತಿ ಪೂರ್ಣಗೊಳಿಸದಿದ್ದರೆ ವಾಹನ ಸಂಚಾರ ಹಾಗೂ ಕಾಲ್ನಡಿಗೆಗೂ ಕಷ್ಟವಾಗಬಹುದು.
-ಅಪ್ಪಯ್ಯ ನಾಯ್ಕ ತಲೆಂಜಿ ಜೀಪು ಚಾಲಕ

-ದಿನೇಶ್‌ ಪೇರಾಲು

Advertisement

Udayavani is now on Telegram. Click here to join our channel and stay updated with the latest news.

Next