ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಹುಲಿ -ಸಿಂಹಗಳು ಇದ್ದ ಹಾಗೆ ಎಂದು ಹೇಳಿರುವ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ 69 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹುಲಿ, ಸಿಂಹ, ಕಿರುಬಗಳನ್ನು ನಾವೂ ಸಾಕಷ್ಟು ನೋಡಿದ್ದೇವೆ. 2018 ರ ಚುನಾವಣೆ ಮುಗಿದ ನಂತರ ಯಾರು ಹುಲಿ, ಸಿಂಹ ಅಂತ ಗೊತ್ತಾಗಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಾಗಲೆಲ್ಲ ಕೇಂದ್ರ ಸರ್ಕಾರ ನೀಡಿದ ಅನುದಾನದ ಲೆಕ್ಕ ಕೇಳುತ್ತಾರೆ. ಲೆಕ್ಕ ಕೇಳಲು ಇವರ್ಯಾರು ?ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿಯಿಂದ ಮಾತನಾಡಲಿ. ಕೇಂದ್ರ ಸರ್ಕಾರ ಕೊಡುವ ಅನುದಾನದಲ್ಲಿ ರಾಜ್ಯದ ಪಾಲೂ ಇರುತ್ತದೆ. ಇದನ್ನು ಅಮಿತ್ ಶಾ ಅರ್ಥ ಮಾಡಿಕೊಂಡಿಲ್ಲ. ಅಮಿತ್ ಶಾಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಸರಿಯಾಗಿ ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ಮಹದಾಯಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಅಮಿತ್ ಶಾ ರಾಜ್ಯಕ್ಕೆ ಬಂದರೂ ಮಹದಾಯಿ ವಿಷಯ ಪ್ರಸ್ತಾಪಿಸಿಲ್ಲ. ಉತ್ತರ ಕರ್ನಾಟಕ ಭಾಗದ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. ಅಮಿತ್ ಶಾ ಆ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ಹಗರಣಗಳನ್ನು ಬಿಚ್ಚಿಡುವುದಾಗಿ ಹೇಳುತ್ತಾರೆ. ಹಗರಣಗಳ ದಾಖಲೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ದಾಖಲೆಗಳು ಇದ್ದರೆ ಬಹಿರಂಗ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.