ಲಕ್ನೋ: ಉತ್ತರ ಪ್ರದೇಶದ ಝೂ, ಲಯನ್ ಸಫಾರಿಗಳಲ್ಲಿ ಹುಲಿ, ಸಿಂಹಗಳ ಮೆನು ಬದಲಾಗಿದೆ! ಇಷ್ಟು ದಿನ ಎಮ್ಮೆ (ಬಫೇಲೋ) ಮಾಂಸದ ಭೋಜನ ಸವಿಯುತ್ತಿದ್ದ ಪ್ರಾಣಿಗಳ ಮುಂದೀಗ ಚಿಕನ್, ಮಟನ್ ಸ್ಪೆಷಲ್!
ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಅಕ್ರಮ ಕಸಾಯಿಖಾನೆಗಳ ಬಾಗಿಲು ಮುಚ್ಚಲು ಹೊರಟಿರುವುದು ಝೂಗಳಿಗೂ ಬಿಸಿ ಮುಟ್ಟಿಸಿದೆ. ಇಟಾವಾ ಲಯನ್ ಸಫಾರಿಯಲ್ಲಿ ಒಟ್ಟು 8 ಸಿಂಹಗಳಿದ್ದು, “ನಿತ್ಯ 50 ಕೆ.ಜಿ. ಎಮ್ಮೆ ಮಾಂಸದ ಅಗತ್ಯವಿತ್ತು. ಆದರೆ, ಕಳೆದೆರಡು ದಿನಗಳಿಂದ ಅದರ ಮಾಂಸ ಎಲ್ಲೂ ಸಿಗದ ಕಾರಣ ಚಿಕನ್, ಮಟನ್ ನೀಡುವುದು ಅನಿವಾರ್ಯವಾಗಿದೆ’ ಎಂದು ಸಫಾರಿಯ ಉಪನಿರ್ದೇಶಕ ಅನಿಲ್ ಪಟೇಲ್ ಹೇಳುತ್ತಾರೆ.
ಇನ್ನು ಲಕ್ನೋ ಝೂ ಕತೆಯೂ ಅಷ್ಟೇ. ನಿತ್ಯ 235 ಕೆಜಿ ಎಮ್ಮೆ ಮಾಂಸವನ್ನು ಪ್ರಾಣಿಗಳು ಸೇವಿಸುತ್ತಿದ್ದವು. ಯೋಗಿ ಸರಕಾರ ಆದೇಶ ಹೊರಡಿಸಿದ ಮೇಲೆ ಈಗ ಮಾಂಸದ ಕೊರತೆ ಕಾಡಿದ್ದು, ಝೂಗೆ 80 ಕೆಜಿ ಮಾಂಸ ಮಾತ್ರ ಪೂರೈಕೆಯಾಗುತ್ತಿದೆ. ಹುಲಿ, ಸಿಂಹಗಳಲ್ಲದೆ ಚಿರತೆ, ಕತ್ತೆಕಿರುಬ, ನರಿ, ತೋಳಗಳು ಬಫೇಲೋ ಮಾಂಸವನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಹುಲಿಗಳಿಗೆ ಎಮ್ಮೆ ಮಾಂಸವೇ ಆರೋಗ್ಯಕರ. ಚಿಕನ್, ಮಟನ್ ನೀಡುವುದರಿಂದ ಕೊಬ್ಬು ಹೆಚ್ಚಾಗುವ ಅಪಾಯವಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.
ಇಬ್ಬರ ಬಂಧನ: ಅಕ್ರಮ ಕಸಾಯಿಖಾನೆಗಳ ವಿರುದ್ಧ ದಾಳಿ ಆರಂಭಗೊಂಡಿದೆ. ಶುಕ್ರವಾರ ಮುಂಜಾನೆ ಮುಝಾಫರ್‌ನಗರದ ಮನೆ ಮೇಲೆ ನಡೆದ ಕಾರ್ಯಾಚರಣೆ ವೇಳೆ ಇಬ್ಬರನ್ನು ಬಂಧಿಸಲಾಗಿದೆ. ದಿಲ್ ನವಾಜ್ ಮತ್ತು ರಫೀಕ್‌ರನ್ನು ಬಂಧಿಸಲಾಗಿದ್ದು, 6 ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಕಸಾಯಿಖಾನೆಗೆ ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದರೆಂಬ ಆರೋಪದಡಿ ಕೇಸು ದಾಖಲಿಸಲಾಗಿದೆ.
ಮುಲಾಯಂ ಹಿರಿಸೊಸೆ ಬಿಜೆಪಿಯತ್ತ?: ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಹಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರುತ್ತಾರಾ? ಈ ಹಿಂದೆ ಮೋದಿ ರ್ಯಾಲಿಯಲ್ಲಿ ಪಾಲ್ಗೊಂಡು ಅಚ್ಚರಿ ಸೃಷ್ಟಿಸಿದ್ದ ಅಪರ್ಣಾ, ಶುಕ್ರವಾರ ಪತಿ ಪ್ರತೀಕ್ ಯಾದವ್ ಜತೆ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಸುಮಾರು 20 ನಿಮಿಷ ಮಾತುಕತೆ ನಡೆದಿದ್ದು, “ಇದೊಂದು ಔಪಚಾರಿಕ ಭೇಟಿ’ ಎಂದಷ್ಟೇ ಪ್ರತೀಕ್ ಹೇಳಿದ್ದಾರೆ. ಚುನಾವಣೆಯುದ್ದಕ್ಕೂ ಅಖೀಲೇಶ್ ಯಾದವ್ ವಿರೋಧಿ ಬಣದಲ್ಲಿದ್ದ ಅಪರ್ಣಾ, ಬಿಜೆಪಿಯ ರೀಟಾ ಬಹುಗುಣ ಜೋಷಿ ವಿರುದ್ಧ ಸೋಲನ್ನಪ್ಪಿದ್ದರು.
ರೇಪ್ ಸಂತ್ರಸ್ತೆಗೆ 1 ಲಕ್ಷ ರೂ.: ಲಕ್ನೋ ರೈಲಿನಲ್ಲಿ ಇಬ್ಬರು ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ, ಆ್ಯಸಿಡ್ ದಾಳಿಗೆ ಗುರಿಯಾದ ಯುವತಿಗೆ ಸಿಎಂ ಆದಿತ್ಯನಾಥ್ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಿಂಗ್ ಜಾರ್ಜ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಸಿಎಂ ಭೇಟಿ ಆಗಿ, ಯೋಗಕ್ಷೇಮ ವಿಚಾರಿಸಿದರು.
ಶೇ.90 ಬ್ಯುಸಿನೆಸ್ಸೇ ಇಲ್ಲ!
ಲಕ್ನೋದ ಶತಮಾನ ಇತಿಹಾಸವುಳ್ಳ ಟುಂಡೇ ಕಬಾಬಿ ಮತ್ತು ರಹೀಮ್ ಹೋಟೆಲ್ಲನ್ನು ಈಗ ಯಾರೂ ಕೇಳ್ಳೋರೇ ಇಲ್ಲ. ಗೋಮಾಂಸದ ಖಾದ್ಯಗಳಿಗೆ ಹೆಸರಾಗಿದ್ದ ಇವರೆಡೂ ಕೇಂದ್ರಗಳಲ್ಲಿ ಕಬಾಬ್ ಬಹಳ ಜನಪ್ರಿಯ. ಅದರಲ್ಲೂ “ನಿಹಾರಿ’, “ಪಸಂದಾ’ ಸೇರಿದಂತೆ 150 ರೀತಿಯ ವಿವಿಧ ಭಕ್ಷ್ಯಗಳಿಂದ ಭರಪೂರ ಗ್ರಾಹಕರನ್ನು ಸೆಳೆಯುತ್ತಿದ್ದವು. ಆದರೆ, ಇಲ್ಲೀಗ ಶೇ.80-90 ವ್ಯಾಪಾರವೇ ಇಲ್ಲ ಎನ್ನುವುದು ಮಾಲೀಕರ ಮಾತು. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿರುವುದರಿಂದ ಹೀಗಾಗಿದೆ!