ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಿಂದ ಇಡಗುಂದಿಗೆ ತೆರಳುವ ರಸ್ತೆಯಲ್ಲಿ ಹದಿನೈದು ದಿನಗಳ ಹಿಂದೆ ಹುಲಿಯೊಂದ ಕಾಣಿಸಿಕೊಂಡಿದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿರುವುದು ಅನೇಕರಲ್ಲಿ ಸಂತಸ ತಂದಿದೆ. ಕೈಗಾದಿಂದ ಬಾರೆ ಗ್ರಾಮಕ್ಕೆ ತಲುಪುವ ಮುಂಚಿನ ರಸ್ತೆಯ ಎರಡೂ ಬದಿ ಇರುವ ದಟ್ಟ ಅರಣ್ಯ ಪ್ರದೇಶದಲ್ಲಿ ಹುಲಿ ರಸ್ತೆ ದಾಟುತ್ತಿರುವ ದೃಶ್ಯ ಪ್ರಯಾಣಿಕರ ವಿಡಿಯೋದಲ್ಲಿ ಸೆರೆ ಸಿಕ್ಕಿದೆ.
ಕೈಗಾ ಅಣುಸ್ಥಾವರದಿಂದ ಯಲ್ಲಾಪುರ ಮಾರ್ಗವಾಗಿ ತೆರಳುತಿದ್ದ ಕೈಗಾ ಉದ್ಯೋಗಿಯೊಬ್ಬರಿಗೆ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಹುಲಿಯ ವಿಡಿಯೋವನ್ನು ಚಿತ್ರಿಸಿ ಸ್ಥಳೀಯ ವ್ಯಕ್ತಿಯೊಬ್ಬರಿಗೆ ವಿಡಿಯೋ ಶೇರ್ ಮಾಡಿದ್ದರು ಎನ್ನಲಾಗಿದೆ. ಹುಲಿಯು ಕೈಗಾ, ಇಡಗುಂದಿ ಭಾಗದಲ್ಲಿ ಹಲವು ಕಡೆ ಓಡಾಡುತಿದ್ದು, ಸ್ಥಳೀಯ ಜನರಿಗೆ ಕಾಣಿಸಿಕೊಂಡಿದೆ.ಅಲ್ಲದೆ ಜೋಯಿಡಾ ತಾಲೂಕಿನಲ್ಲಿ ಸಹ ಹುಲಿ ಸಂಚರಿಸುತ್ತಿರುವ ಬಗ್ಗೆ ಜನರು ಆಗಾಗ ಮಾತಾಡಿಕೊಂಡಿದ್ದಾರೆ.
ಅರಣ್ಯದಲ್ಲಿ ಜಿಂಕೆ ಸೇರಿದಂತೆ ಹುಲಿಗೆ ಬೇಕಾದ ಆಹಾರವಿದ್ದು, ಆತಂಕಪಡುವ ಸನ್ನಿವೇಶವೇ ಉದ್ಭವಿಸಿಲ್ಲ ಎನ್ನಲಾಗಿದೆ. ಹುಲಿಯ ಚಲನೆಯ ಬಗ್ಗೆ ಕಾರವಾರ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಹುಲಿ ತನ್ನ ಪಾಡಿಗೆ ತಾನಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಕದ್ರಾ ಜಲಾಶಯದ ಹಿನ್ನೀರಿನ ಬಳಿ ಹುಲಿ ಕಾಣಿಸಿಕೊಂಡಿತ್ತು ಎಂದಿದ್ದಾರೆ. ಬಾರೆ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡ ವಿಡಿಯೋ ಹಳೆಯದ್ದು, ಹದಿನೈದರಿಂದ ಇಪ್ಪತ್ತು ದಿನಗಳ ಹಿಂದಿನದು ಎಂದು ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಜನರು ಆತಂಕ ಪಡಬೇಕಾಗಿಲ್ಲ ಎಂದಿದ್ದಾರೆ.