ಊರ ದನಗಳನ್ನೆಲ್ಲ ಹುಲಿಯ ಬಾಯಿಂದ ಕಾಯುವ ದೇವರು ಹುಲಿಗಿರಿ¤. ಮೊನ್ನೆಯಷ್ಟೇ ಮಾದನ ಬೆಳ್ಳಿ ದನ ಕಾಣೆಯಾಗಿತ್ತು. ಸಣ್ಣ ಕರುವಿರುವ ದನ ಮರಳಿ ಬರಲಿಲ್ಲವೆಂದರೆ ಅದು ಹುಲಿಯ ಬಾಯಿಗೇ ಸೇರಿತು ಎಂದರ್ಥ. ಅದಕ್ಕೆ ಪುರಾವೆಯೆಂಬಂತೆ ಪೊದೆಯೊಂದರ ಮರೆಯಲ್ಲಿ ಬೆಳ್ಳಿ ದನದ ಅರ್ಧ ತಿಂದ ದೇಹ ಸಿಕ್ಕಿತ್ತು. ಪ್ರತಿವರ್ಷ ಹುಲಿಗಿರಿ¤ಗೆ ಅತಿದೊಡ್ಡ ಬಾಳೆಗೊನೆಯನ್ನು ಕೊಡುವ ಮಾದನಿಗೆ ಈಗ ದೇವರ ಬಗ್ಗೆ ಅಸಾಧಾರಣ ಕೋಪ ಬಂದುಬಿಟ್ಟಿತ್ತು. ಕುಡಿದ ಸುರೆಯ ಅಮಲಿನಲ್ಲಿ ಅವನೊಳಗಿರುವ ಕೋಪವೆಲ್ಲವೂ ಮಾತಾಗಿ ಹೊರಬರತೊಡಗಿದ್ದವು. “”ಏಯ್ ಹುಲಿಗಿರಿ¤, ನಿಂಗೇನಾರೂ ನಗ ನಾಚಿಕಿ ಅಂಬೂದಿತ್ತ? ದೊಡ್ಡ ದೇವರು ನಾನು ಅಂತ ನಿಂತಿದ್ದೀಯಲ್ಲ, ಎಂಥ ದೇವರು ನೀನು? ನಾನೇನ್ ನಿಂಗೆ ಕಡಿಮೆ ಮಾಡಿದ್ದೆ ಹೇಳು? ಪೂಜೆ ಕೊಟ್ಟಿಲ್ವ ಅಥಾÌ ನಿನ್ನ ಸನ್ನಿಧಾನಕ್ಕೆ ಅಪಚಾರ ಮಾಡಿದ್ನ? ಹೋಗಿ ಹೋಗಿ ಸಣ್ಣ ಕರು ಇದ್ದ ದನೀನ ಹುಲಿ ಬಾಯೀಗ್ ಕೊಟ್ಯಲ್ಲ, ನೀನೇನ ಹೊಟ್ಟಿàಗ್ ಅನ್ನ ಅಲ್ವಾ ತಿಂಬುದ್? ಈಗ ನಾನು ಆ ಕರೂಗೆ ಎಂಥ ಕುಡಿಸಲಿ? ಮಾಡ್ತೆ ನಿಂಗೆ ಕಾಣು. ನಾಳೆ ಆ ಕರೂನ ತಂದು ನಿನ್ನೆದುರು ಕಟ್ಟಿ ಹೋಗ್ತಿ. ನೀನೆ ಸಾಕು. ಈ ಸಲ ನಿಂಗೆ ಪೂಜೆ ಕೊಟ್ರೆ ನಾನು ಮಾದ ಅಲ್ಲ ತಿಳ್ಕ” ಮಾದನ ಬೈಗುಳಗಳ ಸುರಿಮಳೆ ಸುರಿಯುತ್ತಿರುವಾಗಲೇ ಅವನ ಹೆಂಡತಿ ಸಾಕು ಅವನನ್ನು ಸಂತೈಸಲು ಮುಂದಾದಳು. ಆದರೆ, ಹಠಮಾರಿ ಮಾದ ಮಾತ್ರ ಅವಳ ಸಾಂತ್ವನದಿಂದ ಇನ್ನಷ್ಟು ಉಗ್ರನಾಗಿ ಹುಲಿಗಿರಿ¤ಯನ್ನು ಬೈಯತೊಡಗಿದ.
ಮಾದನ ನೋವಿಗೆ ಮರುಗಿದ ಊರ ಪಂಚರ ತಂಡ ಹುಲಿಗೊಂದು ಗತಿಕಾಣಿಸಲು ತೀರ್ಮಾನಿಸಿತು. ಊರಿನಲ್ಲಿ ಪರವಾನಗಿಯಿರುವ ಕೋವಿಯೇನೋ ಇತ್ತಾದರೂ ಮೊದಲಿನಂತೆ ಅದನ್ನು ಹಿಡಿದು ಹುಲಿಯನ್ನು ಬೇಟೆಯಾಡುವ ಶೂರರು ಯಾರೂ ಇರಲಿಲ್ಲ. ಇನ್ನುಳಿದ ಉಪಾಯವೆಂದರೆ ದಡೆಕಟ್ಟಿ ಹುಲಿಯನ್ನು ಹೊಡೆಯುವುದು. ಅದರಲ್ಲಿ ಪರಿಣಿತಿಯಿರುವ ನಾಲ್ಕಾರು ಹಿರಿತಲೆಗಳು ಊರಿನಲ್ಲಿದ್ದವು. ಹೇಗೂ ಹುಲಿ ಇನ್ನು ಎರಡು ದಿನ ಅದೇ ಮಾಂಸವನ್ನು ತಿನ್ನಲು ಬಂದೇ ಬರುತ್ತದೆ. ಅದು ಬರುವ ದಾರಿಯಲ್ಲಿ ಕೋವಿಯನ್ನು ಅದಕ್ಕೆದುರಾಗಿ ಗಿಡಗಳನ್ನೇ ಕಂಬಗಳಾಗಿಸಿ ಕಟ್ಟುವುದು. ಕೋವಿಯ ಟ್ರಿಗರನ್ನು ದನದ ದೇಹಕ್ಕೆ ಬಳ್ಳಿಯಿಂದ ಕಟ್ಟಿದರಾಯಿತು. ಹುಲಿ ಬಂದು ದನದ ದೇಹವನ್ನು ಎಳೆದ ಕೂಡಲೇ ಕೋವಿಯಿಂದ ಗುಂಡು ಹಾರುವುದು. ಅದು ಹುಲಿಗೇ ತಾಗಬೇಕೆಂದರೆ ಹುಲಿಯ ಚಲನೆ ಮತ್ತು ಅದು ಬರುವ ದಾರಿಯ ಬಗ್ಗೆ ಅಷ್ಟು ಖಚಿತತೆಯಿರಬೇಕು. ಅಷ್ಟಾಗಿಯೂ ಗುಂಡು ಹುಲಿಯ ಆಯಕಟ್ಟಿನ ಜಾಗಕ್ಕೆ ತಾಗದೇ ಹೋದರೆ ಹುಲಿ ಗಾಯಗೊಂಡು ಉಳಿಯುತ್ತದೆ. ಗಾಯಗೊಂಡ ಹುಲಿ ಬಹಳ ಅಪಾಯಕಾರಿ. ಅದು ಮನುಷ್ಯರನ್ನು ಕಂಡೊಡನೇ ಎರಗುತ್ತದೆ ಎಂಬುದು ಊರಿನವರ ತಿಳುವಳಿಕೆ. ಆದರೂ ಇದೊಂದು ಸಲ ಮಾದನ ನೋವಿಗೆ ಇಡಿಯ ಊರೇ ಸ್ಪಂದಿಸಬೇಕೆಂದು ನಿರ್ಣಯವಾಯಿತು. ದಡೆ ಕಟ್ಟುವುದರಲ್ಲಿ ನಿಷ್ಣಾತನಾದ ಗಣಪಯ್ಯನ ನೇತೃತ್ವದಲ್ಲಿ ಊರ ನಾಲ್ಕಾರು ಜನರ ತಂಡ ಬೆಳ್ಳಿದನ ಸತ್ತ ಜಾಗಕ್ಕೆ ಹೋಗಿ, ಕೋವಿಯನ್ನು ಕಟ್ಟಿ, ಅಲ್ಲೆಲ್ಲೂ ತಾವು ನಡೆದಾಡಿದ ಸುಳಿವು ಹುಲಿಗೆ ಸಿಗದಂತೆ ಗಿಡಗಂಟಿಗಳಿಂದ ಕಾಲುಹಾದಿಯನ್ನು ಮುಚ್ಚಿ ಮನೆಗೆ ಬಂದರು.
ರಾತ್ರಿ ಇಡಿಯ ಊರು ಮಲಗಿತ್ತಾದರೂ, ಯಾರೊಬ್ಬರೂ ನಿದ್ರಿಸಲಿಲ್ಲ. “ಢಂ’ ಎಂಬ ಒಂದು ಸದ್ದಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಎಲ್ಲರ ನಿರೀಕ್ಷೆಯಂತೆ ಮಧ್ಯರಾತ್ರಿ ಕಳೆದು ಸ್ವಲ್ಪ ಹೊತ್ತಿನಲ್ಲಿಯೇ ಕಾಡಿನಿಂದ “ಢಂ’ ಎಂಬ ಶಬ್ದ ಕೇಳಿಬಂತು. ಇಡಿಯ ಊರೇ ತತ್‌ಕ್ಷಣ ಎಚ್ಚರಗೊಂಡು ಹುಲಿಯ ಸಾವಿನ ಲೆಕ್ಕಾಚಾರದಲ್ಲಿ ಮುಳುಗಿತು.
ಬೆಳಗಾಗುತ್ತಿದ್ದಂತೆ ಎಲ್ಲರಿಗೂ ಹುಲಿಯನ್ನು ನೋಡುವ ತವಕ. ಹುಲಿಯ ಸ್ಥಿತಿ ಹೇಗಿದೆಯೆಂದು ತಿಳಿಯದೇ ಕಾಡಿನೊಳಗೆ ಹೋಗಲು ಎಂಥವರಿಗಾದರೂ ಹೆದರಿಕೆಯೆ. ಯಾವುದೇ ಕಾರಣಕ್ಕೂ ಅವಸರ ಸಲ್ಲದೆಂಬ ಗಣಪಯ್ಯನ ಆಜ್ಞೆಯಂತೆಯೇ ಹತ್ತಾರು ಯುವಕರು, ಹಿರಿಯರು ಸೇರಿ ಜಾಗಟೆ, ಡೋಲುಗಳ ಶಬ್ದ ಮಾಡುತ್ತಾ ಕಾಡಿನೆಡೆಗೆ ನಿಧಾನವಾಗಿ ಸಾಗಿದರು. ಇತ್ತ ಊರ ಹೆಂಗಳೆಯರೂ ಕೂಡ ಹುಲಿಯನ್ನು ನೋಡುವ ಆಸೆಯಿಂದ ತಮ್ಮ ದೈನಂದಿನ ಕೆಲಸಗಳನ್ನು ಶರವೇಗದಿಂದ ಮುಗಿಸಿ ಕಾಯತೊಡಗಿದರು. ಹೋಗುವಾಗ ಆತಂಕದಿಂದ ಹೋದ ಯುವಪಡೆ ಬರುವಾಗ ಡೋಲು, ಜಾಗಟೆಗಳನ್ನು ಆವೇಶ ಬಂದವರಂತೆ ಬಡಿಯುತ್ತಾ ಹುಲಿಯ ಹೆಣವನ್ನು ಮೆರವಣಿಗೆಯಲ್ಲಿ ತಂದಿತು. ದೊಡ್ಡಗಾತ್ರದ ಪಟ್ಟೆಹುಲಿಯ ಹೆಣವನ್ನು ಕಂಡ ಮಾದನ ಖುಶಿಗೆ ಪಾರವೇ ಇರಲಿಲ್ಲ. ಚೆಂದದ ನಾಲ್ಕು ಆಧಾರ ಕೋಲನ್ನು ಕಡಿದು ತಂದ ಆತ ಹುಲಿಯನ್ನು ತನ್ನ ಮನೆಯ ಮುಂದೆ ಜೀವವಿದೆಯೇನೋ ಎಂಬಂತೆ ನಿಲ್ಲಿಸಿದ. ಹುಲಿಯ ಬೇಟೆಯ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಹುಲಿಯನ್ನು ನೋಡಲು ಸಾಲು-ಸಾಲು ಜನರು ಮಾದನ ಮನೆಯೆದುರು ಜಮಾಯಿಸತೊಡಗಿದರು.
ಬೆಳಗಿನ ಗಡಿಬಿಡಿಯಲ್ಲಿ ತಾವು ಒಗೆಯದೇ ಇರುವ ಬಟ್ಟೆ, ಪಾತ್ರೆಗಳ ನೆನಪಾದ ಊರ ಹೆಂಗಸರು ಅವುಗಳನ್ನೆಲ್ಲ ಹೊತ್ತುಕೊಂಡು ಹೊಳೆಯ ಹಾದಿ ಹಿಡಿದರು. ಹುಲಿಯ ಕಥೆಯನ್ನು ಹೊಳೆಗೆ ಹೇಳುತ್ತಲೇ ಬಟ್ಟೆ ಒಗೆಯುತ್ತಿರುವಾಗ ಹೊಳೆಯ ಆ ದಡದಲ್ಲಿ ನಿಂತ ಖಾಕಿಧಾರಿಗಳು ಅವರ ಕಣ್ಣಿಗೆ ಬಿದ್ದರು. ಕಳ್ಳಬಟ್ಟಿ ಹಿಡಿಯಲು ಬರುವ ಅಧಿಕಾರಿಗಳಂತಿರದ ಇವರನ್ನು ಕಂಡು ಹೆಂಗಸರಿಗೆ ಅದೇನೋ ಅನುಮಾನ ಬಂದೇಬಿಟ್ಟಿತು. “”ಏಯ್, ಇಲ್ಲಿ ಮಾದನ ಮನೆ ಎಲ್ಲಿದೆ? ಹೊಳೆಯನ್ನು ಎಲ್ಲಿ ದಾಟಬಹುದು?” ಎಂಬ ಅವರ ಪ್ರಶ್ನೆ ಅವರು ಪೊಲೀಸರು ಎಂಬುದನ್ನು ಸಾಬೀತುಪಡಿಸಿತು. ಇವರೆಲ್ಲಿಯಾದರೂ ಏನೇನೋ ಹೇಳಿ ಪೇಚಿಗೆ ತಂದಿಟ್ಟಾರೆಂದು ಹೆದರಿದ ಅಮ್ಮೆಣ್ಣು ಅವರೆಲ್ಲರಿಗೂ ಮಾತನಾಡದಂತೆ ಕಣ್ಣಲ್ಲೇ ಸಂಜ್ಞೆ ಮಾಡಿ, ಪೊಲೀಸರಿಗೆ “”ಮಾದನ ಮನೆಯೇನೋ ಇಲ್ಲೇ ಅದೆ. ಆದ್ರೆ ಹೊಳೀ ದಾಟೂಕೆ ಇಲ್ಲಿಂದ ಕೆಳಗೆ ಒಂದು ಮೈಲಿ ದೂರದಲ್ಲಿರೋ ಸಂಕವೇ ಗತಿ ಸಾಯೇಬ್ರೇ. ಮತ್ತೆಲ್ಲಾದ್ರೂ ಇಳಿದ್ರೆ ಸುಳೀಗ್ ಸಿಕ್ಕಿ ಸಾಯುದೇಯಾ” ಎಂದು ಹೆದರಿಸಿದಳು. ಅವರು ಕಣ್ಮರೆಯಾದ ಕೂಡಲೇ ಎಲ್ಲರೂ ಲಗುಬಗೆಯಿಂದ ಮಾದನ ಮನೆಯ ಕಡೆಗೆ ಓಡಿದರು.
ಪೊಲೀಸರು ಹೊಳೆದಾಟಿ ಮಾದನ ಮನೆಗೆ ಬಂದಾಗ ಹುಲಿಯೂ ಇರಲಿಲ್ಲ, ಅದರ ಕುರುಹೂ ಇರಲಿಲ್ಲ. ಹುಲಿಯ ಕಳೇಬರಕ್ಕಾಗಿ ಪೊಲೀಸರು ಸುತ್ತಮುತ್ತಲೆಲ್ಲ ಹುಡುಕಿದರಾದರೂ ಎಲ್ಲಿಯೂ ಅದನ್ನು ಹುಗಿದ ಗುರುತೂ ಕಾಣಿಸಲಿಲ್ಲ. ಹೊಳೆಯಲ್ಲೇನಾದರೂ ಎಸೆದಿರಬಹುದೆಂದು ಹೊಳೆಯ ತಡೆಗೋಡೆಗೂ ಹೋಗಿ ಹುಡುಕಿಯಾಯಿತು. ಯಾರೊಬ್ಬರೂ ಹುಲಿಯನ್ನು ಹೊಡೆದ ಸುದ್ದಿಯನ್ನೂ ಹೇಳಲಿಲ್ಲವಾಗಿ ಬಂದ ದಾರಿಗೆ ಸುಂಕವಿಲ್ಲದೆ ಪೊಲೀಸರು ಹಿಂದಿರುಗಿದರು. ತಿಂಗಳನಂತರ ಹೊಳೆಯ ದಂಡೆಯಲ್ಲಿ ಮಾದನ ಹೆಂಡತಿ ಸಾಕು ತಮ್ಮ ದನವನ್ನು ತಿಂದ ಹುಲಿ ಅದೇ ದನದ ಗೊಬ್ಬರದ ಗುಂಡಿಯಲ್ಲಿ ಮಲಗಿ, ಗೊಬ್ಬರವಾಗಿ ಹೋದ ಕಥೆಯನ್ನು ಹೇಳುತ್ತಿದ್ದರೆ, ಮಾದ ತನ್ನಷ್ಟೆತ್ತರದ ಬಾಳೆಗೊನೆಯನ್ನು ಹುಲಿಗಿರಿ¤ಗೆ ಒಪ್ಪಿಸಲೆಂದು ಹಿಡಿದು ಹೊರಟಿದ್ದ!
ಸುಧಾ ಆಡುಕಳ