ಎಚ್.ಡಿ.ಕೋಟೆ: ಅಂತರಸಂತೆ ಗ್ರಾಮದ ಆಸುಪಾಸಿ ನಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು, ಜನಸಮಾನ್ಯರು ಕತ್ತಲಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುವುದರ ಜತೆಗೆ ರಾತ್ರಿ ವೇಳೆ ಕೃಷಿ
ಚಟುವಟಿಕೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಮನೆಯಿಂದ ಹೊರಬಾರದಂತೆ ಅರಣ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಪೊದೆಗಳಲ್ಲಿ ಬೀಡುಬಿಟ್ಟಿರಬಹುದು: ಕಳೆದ ಹಲವು ದಿನಗಳ ಹಿಂದಿನಿಂದ ಹುಲಿಯೊಂದು ಅಂತರಸಂತೆ ಆಸುಪಾಸಿನಲ್ಲಿ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿ ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿದೆ. ಸಾರ್ವಜನಿಕರ ಆರೋಪದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದಾಗ ಹುಲಿ ಹೆಜ್ಜೆ ಗುರುತು ಕಂಡು ಬಂದಿದ್ದು,
ಹುಲಿ ಭೇಟೆ ಯಾಡಲು ಅಶಕ್ತವಾಗಿ ಗ್ರಾಮದ ಹೊರವಲಯದ ಪೊದೆಗಳಲ್ಲಿ ಬೀಡು ಬಿಟ್ಟಿರಬೇಕೆಂದು ಅಂದಾಜಿಸಲಾಗಿದೆ.
ಹಾಡಿ ಸಮೀಪ ಹೆಜ್ಜೆ ಗುರುತು: ಅದರಂತೆಯೇ ಅಂತರಸಂತೆಯಿಂದ ಸುಮಾರು ಒಂದೆರಡು ಕಿ.ಮೀ. ಅಂತರದಲ್ಲಿರುವ ಮೊತ್ತ ಹಾಡಿಯಲ್ಲಿಯೂ ಹುಲಿ ಪ್ರತ್ಯಕ್ಷಗೊಂಡು 2 ಮೇಕೆ ಕೊಂದು ತಿಂದಿದೆ. ಅಲ್ಲಿಯೂ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು 2 ಕಡೆಗಳಲ್ಲಿಯೂ ಒಂದೇ ಹುಲಿ ಸಂಚರಿಸುತ್ತಿರಬಹುದೆಂದು ಅಂದಾಜಿಸಿ ಕಳೆದ 3ದಿನಗಳ ಹಿಂದೆ ಮೊತ್ತ ಹಾಡಿಯ ಸಮೀಪದಲ್ಲಿ ಹುಲಿ ಹೆಜ್ಜೆ ಗುರುತು ಗಳಿರುವ ಕಡೆ ಹುಲಿ ಸೆರೆಗೆ ಬೋನಿರಿಸಿ ತಂತ್ರ ರೂಪಿಸಲಾಗಿದೆ.
ಬೇಟೆಯಾಡದ ಸ್ಥಿತಿಯಲ್ಲಿದೆ: ಈ ಎಲ್ಲಾ ಬೆಳವಣಿಗೆ ಗಮನಿಸಿದಾಗ ಹುಲಿ ಬೇಟೆಯಾಡದ ಸ್ಥಿತಿಯಲ್ಲಿದ್ದು, ಸುಲಭವಾಗಿ ನಾಡಿನಲ್ಲಿ ಸಿಗುವ ಸಾಕು ಪ್ರಾಣಿಗಳನ್ನು ಕೊಂದು ತಿನ್ನುವ ಸಲುವಾಗಿ ನಾಡಿನಲ್ಲಿ ಬೀಡುಬಿಟ್ಟಿರುವ ಶಂಕೆ ಇದೆ. ರೈತರು ರಾತ್ರಿ ವೇಳೆ ಕೃಷಿ ಚಟುವಟಿಕೆ ನಡೆಸುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಮನೆಯಿಂದ ಹೊರ ಬರುವುದು ಸೂಕ್ತವಲ್ಲ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.
ಇದನ್ನೂ ಓದಿ : ಒಮಾನ್‌ನಲ್ಲಿ ಧಾರಾಕಾರ ಮಳೆ; ಹಠಾತ್ ಪ್ರವಾಹ