Advertisement

ಗುಜರಾತ್‌ನಲ್ಲಿ ಹುಲಿ ಪತ್ತೆ!

12:30 AM Feb 11, 2019 | |

ಅಹಮದಾಬಾದ್‌: ಅಧಿಕ ಸಂಖ್ಯೆಯಲ್ಲಿ ಸಿಂಹಗಳನ್ನು ಹೊಂದಿರುವ ಗುಜರಾತ್‌ನಲ್ಲಿ 25 ವರ್ಷಗಳ ನಂತರ ಹುಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದೆ. ದಟ್ಟ ಕಾನನದಿಂದ ತುಂಬಿರುವ ಡಂಗ್‌ ಅರಣ್ಯ ಪ್ರದೇಶದ ರಸ್ತೆಯೊಂದನ್ನು ಹುಲಿಯೊಂದು ದಾಟುತ್ತಿರುವ ದೃಶ್ಯಗಳನ್ನು ಮಹೇಶ್‌ ಮಹೇರಾ ಎಂಬ ಶಿಕ್ಷಕರೊಬ್ಬರು ತಮ್ಮ ಮೊಬೈಲಿನಿಂದ ಸೆರೆ ಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹೊತ್ತಿಸಿವೆ. ಸಂಪೂರ್ಣವಾಗಿ ನಶಿಸಿ ಹೋಗಿದೆಯೆಂದೇ ತೀರ್ಮಾನಿಸಲಾಗಿದ್ದ ಗುಜರಾತ್‌ನಲ್ಲಿ ಹುಲಿ ಸಂತತಿ ಮತ್ತೆ ಕುಡಿಯೊಡೆದಿರುವುದು ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿದೆ.

Advertisement

ಹುಲಿಯೊಂದು ಈ ಪ್ರದೇಶದಲ್ಲಿ ಅಡ್ಡಾಡುತ್ತಿದೆಯೆಂದು ಕಳೆದ ವರ್ಷದ ಮಧ್ಯಭಾಗದಲ್ಲೇ ಗುಲ್ಲೆದ್ದಿತ್ತು. ಆದರೆ, ಇದನ್ನು ಖುದ್ದು ಅರಣ್ಯ ಇಲಾಖೆಯೇ ನಂಬಿರಲಿಲ್ಲ. ಅಷ್ಟರ ಮಟ್ಟಿಗೆ, ಗುಜರಾತ್‌ನಲ್ಲಿ ಹುಲಿ ಸಂತತಿ ಇಲ್ಲ ಎಂಬ ನಿರ್ಧಾರಕ್ಕೆ ಇಲಾಖೆಯೂ ಬಂದಿತ್ತು. ಆದರೀಗ, ಶಿಕ್ಷಕ ಮಹೇಶ್‌ ಮೊಬೈಲ್‌ ಚಿತ್ರಗಳು ಹುಲಿ ಬಗೆಗಿನ ಮಾಹಿತಿಗಳಿಗೆ ಪುಷ್ಟಿ ನೀಡಿವೆ.

ಅಸಲಿಗೆ, ಮೊದಲಿನಿಂದಲೂ ಡಂಗ್‌ ಅರಣ್ಯ ಪ್ರದೇಶವೇ ಹುಲಿಗಳ ಆವಾಸ ಸ್ಥಾನ. ಹಾಗಿದ್ದರೂ ಅಲ್ಲಿ 80-90ರ ದಶಕದಲ್ಲೇ ಬೆರಳೆಣಿಕೆಯಷ್ಟು ಹುಲಿಗಳಿದ್ದವು. 1985ರಲ್ಲಿ ರಸ್ತೆ ಅಪಘಾತದಲ್ಲಿ ಹುಲಿಯೊಂದು ಪ್ರಾಣ ತೆತ್ತಿತ್ತು. ಇನ್ನು, 1993-94ರಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಹುಲಿಯೂ ಜನರಿಗೆ ಕಾಣಿಸಿಕೊಂಡ ಉದಾಹರಣೆಯಿರಲಿಲ್ಲ.

ಹುಲಿ ಇರುವಿಕೆಗೆ ಸಾಕ್ಷ್ಯ ಸಿಕ್ಕಿದೆ. ಮತ್ತಷ್ಟು ನಿಖರತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಹುಲಿಯ ಇರುವಿಕೆ ಖಾತ್ರಿ ಆದರೆ, ಅದರ ಸಂರಕ್ಷಣೆ, ವಂಶಾವಭಿವೃದ್ಧಿಗೆ ಹೊಸ ಯೋಜನೆ ಹಮ್ಮಿಕೊಳ್ಳುತ್ತೇವೆ.
 – ಅಕ್ಷಯ್‌ ಸಕ್ಸೇನಾ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next