ವಿಜಯಪುರ: ಜಿಲ್ಲೆಯ ಬಿಜೆಪಿ ಪ್ರಭಾವಿ ನಾಯಕ ವಿಜುಗೌಡ ಪಾಟೀಲ ಅವರ ಮಗ ಶಾಶ್ವತಗೌಡ ಪಾಟೀಲ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಗರದಲ್ಲಿರುವ ವಿಜುಗೌಡ ಪಾಟೀಲ ಅವರ ಮನೆಯಲ್ಲಿ ಹುಲಿಯ ಪೆಂಡೆಂಟ್ ನೈಜತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಅರಣ್ಯಾಧಿಕಾರಿಗಳಾದ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ನೇತೃತ್ವದಲ್ಲಿ ಸಿಬ್ಬಂದಿ ವಿಜುಗೌಡ ಅವರ ಮನೆಗೆ ಭೇಟಿ ನೀಡಿ, ಹುಲಿ ಪೆಂಡೆಂಟ್ ನೈಜತೆ ಪರಿಶೀಲನೆ ನಡೆಸಿದ್ದಾರೆ.
ವಿಜುಗೌಡ ಪುತ್ರ ಶಾಶ್ವತಗೌಡ ಪಾಟೀಲ ಧರಿಸಿದ್ದ ಪೆಂಡೆಂಟ್ ನಲ್ಲಿ ಹುಲಿ ಉಗುರು ಮಾದರಿ ಪೋಟೋ ವೈರಲ್ ಆಗಿದ್ದವು.
ಅರಣ್ಯ ಅಧಿಕಾರಿಗಳ ಪರಿಶೀಲನೆ ವೇಳೆ ಮಾತನಾಡಿದ ವಿಜುಗೌಡ, ನನ್ನ ಮಗ ಶಾಶ್ವತಗೌಡ ಪಾಟೀಲ ಧರಿಸಿದ್ದ ಹುಲಿ ಉಗುರು ಮಾದರಿಯನ್ನು ಏಳು ವರ್ಷಗಳ ಹಿಂದೆ ನಾನೇ ಖರೀದಿಸಿ, ಚಿನ್ನದಲ್ಲಿ ಪೆಂಡೆಂಟ್ ಮಾಡಿಸಿ, ನನ್ನ ಮಗನಿಗೆ ನೀಡಿದ್ದೆ. ಆದರೆ ಪೆಂಡೆಂಟ್ ನಲ್ಲಿ ಇರುವ ಹುಲಿಯ ಅಸಿ ಉಗುರು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದೇನೆ. ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ನನ್ನ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ತನಿಖೆಯ ಬಳಿಕ ಅವರೇ ಉತ್ತರಿಸಲಿದ್ದಾರೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ತನಿಖೆ ಮಾಡಿದರೂ ನಾವು ತನಿಖೆಗೆ ಸಿದ್ಧ. ತನಿಖಾ ಅಧಿಕಾರಿಗಳು ಬಯಸಿದಲ್ಲಿ ಚಿನ್ನದ ಪೆಂಡೆಂಟ್ ತೋರಿಸುತ್ತೇವೆ. ನಮಗೆ ಕಾನೂನಿನ ಅರಿವು ಇದೆ, ನಮ್ಮ ಕುಟುಂಬ ಕಾನೂನು ಪಾಲಿಸುತ್ತದೆ. ನಾನು ಚಿಲ್ಲರೇ ರಾಜಕಾರಣ ಮಾಡುವುದಿಲ್ಲ ಎಂದರು.
ನಮ್ಮ ಮಗನ ಪೋಟೋ ಇಟ್ಟುಕೊಂಡು ಕೆಲವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಅವರದ್ದು ನನ್ನ ಬಳಿ ಬಹಳ ಇದೆ, ಎಂದು ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲ ವಿರುದ್ಧ ವಿಜುಗೌಡ ಆಕ್ರೋಶ ವ್ಯಕ್ತಪಡಿಸಿದರು.