Advertisement

ಪಂಜರದಿಂದ ಹೊರಬಂದ ಹುಲಿ ಮರಿಗಳು

07:37 AM Jul 29, 2019 | Suhan S |

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಭಾನುವಾರ ಸಫಾರಿ ತೆರಳಿದ್ದ ಪ್ರವಾಸಿಗರು ಮುದ್ದಾದ ಏಳು ಹುಲಿ ಮರಿಗಳನ್ನು ಕಣ್ತುಂಬಿಕೊಂಡರು. ಜೂ.29ರಂದು ವಿಶ್ವ ಹುಲಿ ದಿನಾಚರಣೆ ನಿಮಿತ್ತ ಉದ್ಯಾನವನದ ಅಧಿಕಾರಿಗಳು ಈ ವ್ಯವಸ್ಥೆ ಕಲ್ಪಿಸಿದ್ದರು.

Advertisement

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಧಾನ ಕಾರ್ಯದರ್ಶಿ (ಖಜಾನೆ 2) ಕರ್ನಾಟಕ ಸರ್ಕಾರ ಹಣಕಾಸು ವಿಭಾಗದ ಡಾ ರವೀಂದ್ರನ್‌ ಡಿ.ಎಸ್‌., 7 ಮರಿಗಳು ಹಾಗೂ ತಾಯಿಗೆ ಪಂಜರದಿಂದ ಸ್ವಾತಂತ್ರ್ಯ ನೀಡಿ ಹುಲಿ ದಿನಾಚರಣೆಗೆ ಚಾಲನೆ ನೀಡಿದರು.

ಮರಿ ಹುಲಿಗೆ ಹಿಮಾ ಹೆಸರು: ಇತ್ತೀಚೆಗೆ ಅಂತಾರಾಷ್ಟ್ರೀಯ ಕೂಟವೊಂದರಲ್ಲಿ ಐದು ಚಿನ್ನದ ಪದಕ ಗೆದ್ದ ಅಥ್ಲಿಟ್ ಹಿಮಾ ದಾಸ್‌ ಹೆಸರನ್ನು ಮರಿ ಹುಲಿಗೆ ನಾಮಕರಣ ಮಾಡಲಾಯಿತು. 12 ವರ್ಷ ವಯಸ್ಸಿನ ಗಂಡು ಹುಲಿ ಅಮರ್‌, 12 ವರ್ಷ ವಯಸ್ಸಿನ ಹೆಣ್ಣು ಹುಲಿ ವಿಸ್ಮಯ ಜೋಡಿಯ ಏಳು ಮರಿಗಳನ್ನು ಭಾನುವಾರ ಬಯಲು ಆಲಯಕ್ಕೆ ಬಿಡಲಾಗಿತ್ತು. ಎರಡೂವರೆ ವರ್ಷದ ಶಿವ, ಶಾಂಭವಿ, ಅರುಣ್ಯ, ಹಾಗೂ ಆರು ತಿಂಗಳ ಗೋಕುಲ್, ಕಿರಣ್‌, ಅನಿತಾ ಮತ್ತು ಹಿಮಾದಾಸ್‌ ಹೆಸರಿನ ಮರಿಗಳು ಪಂಜರಿಂದ ಹೊರಗೆ ಕಾಣಿಸಿಕೊಂಡವು.

ಪ್ರವಾಸಿಗರ ಸಂತಸ: ಸಹಜವಾಗಿ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಸಫಾರಿ ಆವರಣದಲ್ಲಿ ಏಕಾಏಕಿ ಮುದ್ದಾದ ನಾಲ್ಕು ಮರಿಗಳು ಅದರೊಂದಿಗೆ ಕೊಂಚ ದೊಡ್ಡದು ಅನಿಸುವ 3 ಮರಿಗಳು ಹಾಗೂ ತಾಯಿ ಹುಲಿ ನೋಡಿ ಪ್ರವಾಸಿಗರು ಖುಷಿ ಪಟ್ಟರು. ಬೋನಿನಿಂದ ಹೊರ ಬರುತ್ತಿದ್ದ ಹುಲಿ ಮರಿಗಳನ್ನು ನೋಡಲು ಸಫಾರಿ ವಾಹನಗಳು ಸಾಲಿನಲ್ಲಿ ನಿಂತಿದ್ದವು. ಹುಲಿ ಮರಿಗಳನ್ನು ಕಂಡ ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಪೋಟೋದಲ್ಲಿ ಸೆರೆ ಹಿಡಿದರು.

ಹುಲಿ ದಿನಾಚರಣೆ: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ರವೀಂದ್ರನ್‌ ಡಿ.ಎಸ್‌. ಮಾತನಾಡಿ, ವಿಶ್ವ ಹುಲಿ ದಿನಾಚರಣೆ ಹಿನ್ನಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರಿಗೆ ಹುಲಿ ಮರಿಗಳನ್ನು ನೋಡುವ ವಿಶೇಷ ಅನುಕೂಲ ಕಲ್ಪಿಸಲಾಗಿದೆ. ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

Advertisement

ಇಲ್ಲಿನ ಹವಾಗುಣ, ಹುಲಿ ಸಂತತಿ ಬೆಳವಣಿಗೆಗೆ ಪೂರಕವಾಗಿರುವುದರಿಂದ ಜನಿಸಿದ ಮರಿಗಳು ಅಕಾಲಿಕ ಮರಣ ಹೊಂದುವುದಿಲ್ಲ. ಸಫಾರಿಗೆ ಬರುವ ಪ್ರವಾಸಿಗರು ಬಿಳಿ ಹುಲಿ, ಹೊಸ ಮರಿಗಳು ಸೇರಿದಂತೆ ಒಟ್ಟು 14 ಹುಲಿಗಳನ್ನು ನೋಡ ಬಹುದಾಗಿದೆ ಎಂದು ಹೇಳಿದರು.

ಮೃಗಾಲಯ ಮಾಹಿತಿಯ ತಾಣ: ಉದ್ಯಾನವನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌, ಮೃಗಾಲಯಗಳ ಉದ್ದೇಶವೇ ಜನರಿಗೆ ವನ್ಯಜೀವಿಗಳೆಡೆಗೆ ಆಸಕ್ತಿ ಮೂಡಿಸುವುದು ಹಾಗೂ ಪ್ರಾಣಿಗಳ ಕುರಿತು ಅರಿವು ಮೂಡಿಸುವುದಾಗಿದೆ. ಇದೇ ಕಾರಣದಿಂದ ಮೃಗಾಲಯ ಆವರಣದಲ್ಲಿ ಹುಲಿ ಚಿತ್ರಗಳ ಮಾದರಿಗಳನ್ನಿಟ್ಟು, ಹುಲಿ ವೇಷ ಧರಿಸಿ ಮಕ್ಕಳೊಂದಿಗೆ ಆಟ ವಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.ವಾರದ ಹಿಂದಷ್ಟೇ ಉದ್ಯಾನದ ಅಧಿಕಾರ ಸ್ವೀಕರಿಸಿದ್ದೇನೆ. ಉದ್ಯಾನವನದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಮುಖ್ಯವಾಗಿ ಉದ್ಯಾನವಕ್ಕೆ ಬರುವ ಪ್ರವಾಸಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಉದ್ಯಾನವನದಲ್ಲಿ ನಡೆಸಲು ಚಿಂತಿಸಲಾಗುತ್ತಿದೆ. ಅದರಲ್ಲೂ ನಾಟಕಗಳ ಮೂಲಕ ವನ್ಯಜೀವಿ ಸಂರಕ್ಷಣೆ ಕಾರ್ಯ ಚಟುವಟಿಕೆಗಳನ್ನು ನಡೆಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಅಮರ್‌-ವಿಸ್ಮಯ ಹಿನ್ನೆಲೆ: ಪ್ರವಾಸಿಗರ ವೀಕ್ಷಣೆಗೆ ಲಭ್ಯವಾದ ಮರಿಗಳ ತಂದೆ-ತಾಯಿ ಹಿನ್ನಲೆ ವಿಶೇಷವಾಗಿದೆ. ಅಮರ್‌ ಜನನ ತುಂಬಾ ಅಪರೂಪದ್ದು. ಬಿಳಿ ಹುಲಿಗಳಾದ ಅಮರ್‌ ತಂದೆ ಬ್ರಾಂಡಿಸ್‌ ಮತ್ತು ತಾಯಿ ತನು. ಈ ಎರಡಕ್ಕೂ ಎರಡು ಮರಿಗಳು ಜನಿಸಿದ್ದವು. ಅದರಲ್ಲಿ ಒಂದು ಬಿಳಿ ಹುಲಿಯಾಗಿದ್ದರೆ, ಇನ್ನೊಂದು ಸಾಮಾನ್ಯ ಹುಲಿ ಬಣ್ಣದ್ದಾಗಿತ್ತು ಉದ್ಯಾನವನದ ಸಹಾಯಕ ನಿರ್ದೇಶಕ ಹಾಗೂ ಪಶುವೈದ್ಯ ಸೇವೆ ಡಾ. ಉಮಾಶಂಕರ್‌ ಹೇಳಿದರು. ಇನ್ನೂ ವಿಸ್ಮಯ ಹೆಸರಿನ ಹುಲಿ ಜನನದ ಹಿನ್ನಲೆಯೂ ವಿಶೇಷವಾಗಿದೆ. ವಿಸ್ಮಯ ತಂದೆ ಮಾಸ್ತಿ ಕಾಡಿನ ಹುಲಿ ಹಾಗೂ ಮಾನಸ ಹುಲಿಗೆ ಜನಿಸಿದ ವಿಸ್ಮಯ. ಈ ಎರಡು ವಿಶೇಷ ಹುಲಿಗಳ ಸಂತತಿಯೇ ಏಳು ಮರಿಗಳು ಆರೋಗ್ಯವಾಗಿವೆ. ಬಣ್ಣ, ಸಾಮರ್ಥ್ಯ, ರೂಪ ಎಲ್ಲವೂ ಸಂತತಿಯ ಮೂಲ ಚಹರೆ ಹೋಲುತ್ತವೆ ಎಂದು ತಿಳಿಸಿದರು. ಉದ್ಯಾನವನದ ಉಪನಿರ್ದೇಶಕ ಎಚ್.ಟಿ. ಕುಶಾಲಪ್ಪ, ವಲಯ ಅರಣ್ಯಾಧಿಕಾರಿಗಳಾದ ಭೀಮ್‌ರಾಯ್‌, ಚಂದ್ರೇಗೌಡ, ಪಿಆರ್‌ಒ ಶ್ರೀನಿವಾಸ್‌, ಶಿಕ್ಷಣಾಧಿಕಾರಿ ಅಮಲಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next