ಭಾರತದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ? ಎಂಬುದನ್ನು ಅರಿಯಲು 2018ರಲ್ಲಿ ಕೈಗೊಂಡಿದ್ದ ಕೆಮರಾ-ಆಧಾರಿತ ಹುಲಿ ಗಣತಿಗೆ ಈಗ ವಿಶ್ವದಾಖಲೆಯ ಮನ್ನಣೆ ದೊರೆತಿದೆ. ಭಾರತದಲ್ಲಿ ನಡೆದ ಗಣತಿಯು ಜಗತ್ತಿನಲ್ಲೇ ಅತಿದೊಡ್ಡ ಕೆಮರಾ-ಟ್ರ್ಯಾಪ್ ವನ್ಯಜೀವಿ ಸಮೀಕ್ಷೆ ಎಂದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾಬ್ಡೇಕರ್ ಅವರೇ ಈ ವಿಚಾರ ತಿಳಿಸಿದ್ದು ದೇಶದಲ್ಲಿ ನಿಗದಿತ ಗುರಿಗಿಂತ 4 ವರ್ಷಗಳ ಮುನ್ನವೇ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
26,760 ಕಡೆ ಕೆಮರಾ
ದೇಶದ 26,760 ಪ್ರದೇಶಗಳಲ್ಲಿ ಕೆಮರಾ ಟ್ರ್ಯಾಪ್ ಅಳವಡಿಸುವ ಮೂಲಕ ಗಣತಿ ಕೈಗೊಳ್ಳ ಲಾಗಿತ್ತು. ಕೆಮರಾಗಳು ಒಟ್ಟಾರೆ 3.50 ಕೋಟಿ ಫೋಟೋಗಳನ್ನು ಸೆರೆಹಿಡಿದಿದ್ದವು. ಇದು ಜಗತ್ತಿನ ಬೇರೆಲ್ಲೂ ಈವರೆಗೆ ಕೈಗೊಳ್ಳದ ಅತೀ ದೊಡ್ಡ ವನ್ಯಜೀವಿ ಸಮೀಕ್ಷೆಯೇ? ಎಂಬುದನ್ನು ದೃಢಪಡಿ ಸಿಕೊಳ್ಳಲು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸಂಕಲ್ಪ್ ಸೆ ಸಿದ್ಧಿ ಅಭಿಯಾನದ ಮೂಲಕ ಭಾರತದಲ್ಲಿ ನಿಗದಿತ ಗುರಿಗಿಂತ 4 ವರ್ಷ ಮೊದಲೇ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಭಾರತದ ಹುಲಿ ಗಣತಿಯು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ.
– ಪ್ರಕಾಶ್ ಜಾಬ್ಡೇಕರ್, ಕೇಂದ್ರ ಅರಣ್ಯ ಸಚಿವ