Advertisement

ಹುಲಿ ಗಣತಿ: ರಾಜ್ಯಕ್ಕೆ 1ನೇ ಸ್ಥಾನ ಸಾಧ್ಯತೆ

06:02 PM Apr 08, 2022 | Team Udayavani |

ಗುಂಡ್ಲುಪೇಟೆ: ಈ ಬಾರಿಯ ಗಣತಿ ಪ್ರಕಾರ 6800 ಆನೆಗಳು, 400 ಚಿರತೆ, 563 ಹುಲಿ ಸೇರಿದಂತೆ ಇತರೆ ಕಾಡು ಪ್ರಾಣಿಗಳ ಇರುವಿಕೆ ಕಂಡು ಬಂದಿದೆ. ಈ ಕಾರಣದಿಂದ ಹುಲಿ ಸಂತತಿಯಲ್ಲಿ ರಾಜ್ಯ 1ನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಹೇಳಿದರು.

Advertisement

ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕೇಂದ್ರಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಲಂಟಾನ ತೆರವು ಪರಿಶೀಲಿಸಿದ ನಂತರ ಮಾತನಾಡಿದರು.

ರೋಪ್‌ವೈರ್‌ ಬೇಲಿ ನಿರ್ಮಾಣ:
ವನ್ಯಪ್ರಾಣಿಗಳು ಮತ್ತು ಮಾನವನ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಖರ್ಚಾಗುವ ರೈಲ್ವೆ ಬ್ಯಾರಿಕೇಡ್‌ ಬದಲು ರೋಪ್‌ವೈರ್‌ ಬೇಲಿ ನಿರ್ಮಾಣದ ಉದ್ದೇಶವಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನ 600 ಕಿ.ಮೀ ಪ್ರದೇಶದ ಪೈಕಿ ಈಗಾಗಲೇ 180 ಕಿ.ಮೀ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲಾಗಿದೆ. 1 ಕಿ.ಮೀ 1.50 ಕೋಟಿ ರೂ. ಖರ್ಚಾಗುವ ಜೊತೆಗೆ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲು ಕಂಬಿಗಳ ಲಭ್ಯತೆ ಇಲ್ಲ.

ಈಗಾಗಿ ಕಿ.ಮೀಗೆ 50 ಲಕ್ಷದಲ್ಲಿ ಮುಗಿಯುವ ರೋಪ್‌ವೈರ್‌ ಬೇಲಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸುವ ಮತ್ತು ಬಿಳಿಗಿರಿರಂಗನಬೆಟ್ಟದ ಬೂದಿಪಡಗದಲ್ಲಿ ಆನೆ ಶಿಬಿರ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟ ಬಗ್ಗೆ ಮತ್ತು ಬಂಡೀಪುರ ರಾಂಪುರ ಆನೆ ಕ್ಯಾಂಪ್‌ ನಿರ್ವಹಣೆ ಸಮರ್ಪಕವಾಗಿಲ್ಲದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು.

ಮಹದೇಶ್ವರ ಬೆಟ್ಟ ಈಗಾಗಲೇ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆಯಾಗಿದ್ದು, ಹುಲಿ ಯೋಜನೆಗೆ ಸೇರಿಸುವ ಪ್ರಯತ್ನ ಪರಿಶೀಲನೆಯಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಸಾಕಾನೆಗಳ ಶಿಬಿರ ಇರುವ ಕಾರಣ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಾಂಪುರ ಕ್ಯಾಂಪ್‌ಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವ ನೀಡಿದರು.

Advertisement

13 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು: ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದ 13 ಲಕ್ಷ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. 13 ಲಕ್ಷ ಪಡಿತರ ಚೀಟಿದಾರದಲ್ಲಿ 24 ಸಾವಿರ ಮಂದಿ ಸರ್ಕಾರಿ ನೌಕರರೇ ಇದ್ದು ಅವರಿಗೆಲ್ಲಾ ನೋಟಿಸ್‌ ಜಾರಿಗೊಳಿಸಿ ದಂಡ ಕಟ್ಟಲು ಸೂಚನೆ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಆಹಾರ ಭದ್ರತಾ ಕಾಯಿದೆಯಡಿ ಕೇಂದ್ರ ಸರಕಾರದ ವತಿಯಿಂದ ಮತ್ತು ರಾಜ್ಯದ ಪಾಲು ಸೇರಿ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ ಪಡಿತರ ವಿತರಣೆ ಇನ್ನೂ 6 ತಿಂಗಳು ಮುಂದುವರೆಯುತ್ತದೆ. ಯಾರು ಅಕ್ಕಿಯನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.

ಮೈಸೂರು ವೃತ್ತದ ಡಿಸಿಎಫ್ ಮಾಲತಿಪ್ರಿಯ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್‌, ಎಸಿಎಫ್ಗಳಾದ ಕೆ.ಪರಮೇಶ್‌, ನವೀನ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಯೋಗಾನಂದ್‌, ವಿಶೇಷಾಧಿಕಾರಿ ಕಾ.ರಾಮೇಶ್ವರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next