Advertisement

ಇಬ್ಬರನ್ನು ಕೊಂದ ವ್ಯಾಘ್ರ ಕೊನೆಗೂ ಸೆರೆ

10:58 AM Oct 14, 2019 | Suhan S |

ಚಾಮರಾಜನಗರ: ಬಂಡೀಪುರ ಅರಣ್ಯದಂಚಿನ ಗ್ರಾಮದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ.

Advertisement

ಭಾನುವಾರ  ನಡೆದ ಕಾರ್ಯಾಚರಣೆಯಲ್ಲಿ ಬಂಡೀಪುರ ಹುಲಿ ರಕ್ಷಿತ ಅರಣ್ಯದ ಮಗುವಿನಹಳ್ಳಿಯ ಸಿದ್ದಿಕ್ ಎಂಬುವರ ಜಮೀನಿನ ಪೊದೆಯಲ್ಲಿ ಅಡಗಿ ಕುಳಿತಿದ್ದ ಹುಲಿಯನ್ನು ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯಲಾಗಿದೆ. ಈ ವ್ಯಾಘ್ರನ ವಯಸ್ಸು ಸುಮಾರು 7 ವರ್ಷ ಎಂದು ಅಂದಾಜಿಸಲಾಗಿದೆ.

ಈ ಹುಲಿ ಸೆರೆಗೆ ಕಳೆದ ಐದು ದಿನಗಳಿಂದ  ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಮತ್ತು ಶಿವಲಿಂಗಪ್ಪ ಎಂಬ ಇಬ್ಬರು ರೈತರನ್ನು ಈ ಹುಲಿ ಕೊಂದು ಹಾಕಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಈ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ರೀತಿಯ ಕಾರ್ಯಾಚರಣೆ ನಡೆಸಿದ್ದರು.  ದಸರಾ ಕರ್ತವ್ಯ ಮುಗಿಸಿದ ಅಭಿಮನ್ಯು, ಗೋಪಾಲಸ್ವಾಮಿ, ರೋಹಿತ್ ಮತ್ತು ಗಜೇಂದ್ರ ಆನೆಗಳನ್ನು ಹುಲಿ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

Advertisement

ಭಾನುವಾರ, ವನ್ಯಪ್ರಾಣಿಗಳ ಪತ್ತೆಗೆ ಪ್ರಸಿದ್ಧವಾದ ರಾಣಾ ಎಂಬ ಶ್ವಾನವನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.ಮಧ್ಯಾಹ್ನದ ವೇಳೆಗೆ ಸಿದ್ದಿಕ್ ಎಂಬುವರ ಜಮೀನಿನಲ್ಲಿ ಹುಲಿ ಇರುವುದು ಪತ್ತೆಯಾಗಿ, ಪಶುವೈದ್ಯಾಧಿಕಾರಿ ಡಾ. ನಾಗರಾಜ್ ಅವರು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಇಂಜೆಕ್ಷನ್ ಅನ್ನು ಶೂಟ್ ಮಾಡುವ ಅಸ್ಗರ್ ಅಭಿಮನ್ಯು ಆನೆಯ ಮೇಲೆ ಕುಳಿತು ಕಾರ್ಯಾಚರಣೆ ನಡೆಸಿದ್ದರು. ಮೊದಲ ಎರಡು ಅರವಳಿಕೆ ಚುಚ್ಚುಮದ್ದಿಗೆ ಹುಲಿ ಬಗ್ಗಲಿಲ್ಲ. ಮೂರನೇ ಬಾರಿ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿದ ನಂತರ ಹುಲಿ ಪ್ರಜ್ಞೆ ತಪ್ಪಿತು. ಬಳಿಕ ಬಲೆ ಹಾಕಿ ಹುಲಿಯನ್ನು ಸೆರೆ ಹಿಡಿದು ಬೋನಿಗೆ ಹಾಕಲಾಯಿತು. ಹುಲಿಯನ್ನು ಮೈಸೂರು ಮೃಗಾಲಯಕ್ಕೆ  ರವಾನಿಸಲು ಸಿದ್ದತೆಗಳು ನಡೆಯುತ್ತಿವೆ. ಮಾವುತರಾದ ಅಕ್ರಮ್, ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next