ಎಚ್.ಡಿ.ಕೋಟೆ: ತಾಲೂಕಿನ ಆಗಸನಹುಂಡಿ, ಕಲ್ಲಹಟ್ಟಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿದ್ದಲ್ಲದೇ ರೈತರು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಹೊತ್ತೂಯ್ದು ಭಕ್ಷಸಿದ್ದ ಹುಲಿ ಭಾನುವಾರ ರಾತ್ರಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
ಹುಲಿಯ ಉಪಟಳ ಮಿತಿಮೀರಿದ ಪರಿಣಾಮ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಸಾಕು ಆನೆಗಳನ್ನು ಬಳಸಿಕೊಂಡು ಹುಲಿ ಪತ್ತೆಗಾಗಿ ವಾರಗಟ್ಟಲೆ ಕಾರ್ಯಾಚರಣೆ ನಡೆಸಿದರೂ ಹುಲಿ ಸುಳಿವು ಸಿಕ್ಕಿರಲಿಲ್ಲ. ಇದರಿಂದಾಗಿ ಕೋಬಿಂಗ್ ನಿಲ್ಲಿಸಿ ಅಯ್ದ ಸ್ಥಳಗಳಲ್ಲಿ ಬೋನುಗಳನ್ನು ಇಟ್ಟು ಅಕ್ಕಪಕ್ಕದಲ್ಲಿ ಟ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಹುಲಿ ಬೋನಿನ ಹತ್ತಿರಕ್ಕೆ ಬಂದರೂ ಸಹ ಬೋನಿನ ಒಳಕ್ಕೆ ಹೋಗಿ ಸೆರೆಯಾಗಿರಲಿಲ್ಲ.
ಕಳೆದ ಭಾನುವಾರ ಅಗಸನಹುಂಡಿ ಗ್ರಾಮದ ಸ್ವಾಮಿಗೌಡ ಅವರ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಇಡಲಾಗಿದ್ದ ಬೋನಿಗೆ 4 ವರ್ಷದ ಹೆಣ್ಣು ಹುಲಿ ಸೆರೆಯಾಗಿದ್ದು, ಈ ಭಾಗದ ಗ್ರಾಮಗಳ ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ. ಸೆರೆಯಾದ ಹುಲಿಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಕಾಡಿಗೆ ಬಿಡಲಾಗಿದೆ ಎಂದು ಅರಣ್ಯಾಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಕಾಡಂಚಿನ ಗ್ರಾಮಗಳಾದ ಮೇಟಿಕುಪ್ಪೆ, ಅಗಸನಹುಂಡಿ, ಸಿದ್ದಾಪುರ, ಸೊಳ್ಳೇಪುರ, ಜಿ.ಎಂ.ಹಳ್ಳಿ ಮತ್ತು ಕಲ್ಲಹಟ್ಟಿ ಗ್ರಾಮಗಳಲ್ಲಿ ಜಾನುವಾರುಗಳನ್ನು ಬಲಿ ಪಡೆದು ರೈತರನ್ನು ಬೆಚ್ಚಿಬೀಳಿಸಿದ್ದ ಈ ಹುಲಿ ಚಾಣಕ್ಷತೆಯಿಂದ ಬೇರೆ ಬೇರೆ ಕಡೆಗಳಲ್ಲಿ ಬೇಟೆಯಾಡಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬೀಳದೆ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಜಾನುವಾರುಗಳನ್ನು ಮೇಯಿಸಲು ಅರಣ್ಯದಲ್ಲಿ ಅವಕಾಶ ನೀಡಬೇಕು. 6 ಕಿ.ಮೀ ರೈಲ್ವೆ ಕಂಬಿ ಬೇಲಿಗಳನ್ನು ಅಳವಡಿಸಿ ಆನೆಗಳಿಂದ ಉಂಟಾಗುವ ನಷ್ಟವನ್ನು ತಪ್ಪಿಸಬೇಕು ಎಂದು ಸುತ್ತಮುತ್ತಲ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಸಿಎಫ್ ಕೆ.ಎನ್.ನಾರಾಯಣಸ್ವಾಮಿ, ಎಸಿಎಫ್ ಕೇಶವೇಗೌಡ, ಮೇಟಿಕುಪ್ಪೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಶರಣಬಸಪ್ಪ, ವಿಶೇಷ ಹುಲಿ ಸಂರಕ್ಷಣಾ ದಳದ ಆರ್‌ಎಫ್‌ಒ ಸಂತೋಷ್ ಹೂಗರ್ ಮತ್ತು ಸಿಬ್ಬಂದಿ ಸೇರಿದಂತೆ ಅರಣ್ಯ ವನ್ಯಜೀವಿ ವಾರxನ್ ಕೃತಿಕಾ, ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ರಾಜ್‌ಕುಮಾರ್ ಇತರರಿದ್ದರು.