Advertisement

ಸೆರೆ ಹಿಡಿಯುವ ವೇಳೆ ಹುಲಿ ದಾಳಿ, ವಾಚರ್‌ಗೆ ಗಾಯ

07:10 AM Feb 02, 2019 | Team Udayavani |

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮ ಸಮೀಪ ರೈತರಿಗೆ ಕಾಣಿಸಿದ್ದ ಹುಲಿ, ಸೆರೆ ಹಿಡಿಯುವ ವೇಳೆಯಲ್ಲಿ ಅರಣ್ಯ ವೀಕ್ಷಕರ ಕೈಗೆ ಬಲವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ. ಬಂಡೀಪುರ ಹುಲಿಯೋಜನೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ಹಿರೀಕೆರೆ ಸಮೀಪ ಹುಲಿ ಕಾಣಿಸಿಕೊಂಡು ಮುದುಕಪ್ಪ ಮೇಲೆ ದಾಳಿಗೆ ಮುಂದಾಗಿದ್ದ ವೇಳೆ ಅಕ್ಕಪಕ್ಕದ ಜಮೀನಿನ ರೈತರು ಕಲ್ಲು ತೂರಿ ಹುಲಿ ಓಡಿಸಿ ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.

Advertisement

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ, ಪಟಾಕಿ ಸಿಡಿಸಿ, ಹುಲಿಗಾಗಿ ಹುಡು ಕಾಡ ನಡೆಸಿದರೂ ಪತ್ತೆಯಾಗಲಿಲ್ಲ. ನಂತರ ಹುಲಿ ಹೆಜ್ಜೆ ಜಾಡು ನೋಡಿ ಬೋನು ಅಳವಡಿಸಿ ಹಿಂದುರುಗುವಾಗ ದಿಢೀರ್‌ ಪ್ರತ್ಯಕ್ಷವಾದ ಹುಲಿ ರಾಮು ಎಂಬ ವಾಚರ್‌ ಮೇಲೆ ಎರಗಿ ಆತನ ಕೈಗೆ ಕಚ್ಚಿದೆ. ಇದರಿಂದ ರಾಮು ಅವರ ಬಲಗೈಗೆ ಆಳವಾದ ಗಾಯಗಳಾಗಿದೆ. ಇದಾದ ನಂತರ ಹುಲಿ ಪೊದೆಯತ್ತ ಓಡಿಹೋಗಿದೆ.

ಕೂಡಲೇ ಗಾಯಾಳು ರಾಮು ಅವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ ಲಾಗಿದೆ. ಹುಲಿಯು ಇದೇ ಸ್ಥಳದ ಸುತ್ತಮುತ್ತ ಅಡಗಿರಬಹುದೆಂದು ಭಾವಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗೆ ನಾಗರ ಹೊಳೆಯಿಂದ ಆನೆ ಕರೆಸಿ ಮತ್ತೆ ಕಾರ್ಯಾಚರಣೆ ನಡೆಸಲಿದ್ದಾರೆ.

ಹುಲಿ ದಾಳಿಗೆ ಒಳಗಾದ ವಾಚರ್‌ ರಾಮು ಆರೋಗ್ಯವಾಗಿದ್ದು, ಹುಲಿ ಸೆರೆ ಹಿಡಿಯಲು ನಾಗರಹೊಳೆಯ ಎರಡು ಆನೆ ಸಹಾಯ ಪಡೆಯಲು ಮುಂದಾಗಿದ್ದು, ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಮತ್ತು ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು, ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ, ಹುಲಿ ಸಂರಕ್ಷಣಾ ವಿಶೇಷ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next