ಅಮೆರಿಕಾ: ಕೋವಿಡ್-19 ಮಹಾಮಾರಿ ನ್ಯೂಯಾರ್ಕ್ ನ ಬ್ರಾಂಕ್ಸ್ ಮೃಗಾಲಯದಲ್ಲಿದ್ದ ಹುಲಿಯೊಂದಕ್ಕೂ ತಗುಲಿದ್ದು, ಪ್ರಾಣಿಗಳಲ್ಲಿ ಖಚಿತವಾದ ಮೊದಲ ಸೋಂಕು ಪ್ರಕರಣ ಇದಾಗಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
4 ವರ್ಷದ ಹೆಣ್ಣು ಮಲಾಯನ್ ಹುಲಿ ಇದಾಗಿದ್ದು ಮೃಗಾಲಯ ಸಿಬ್ಬಂದಿಯಿಂದ ಸೋಂಕು ಹರಡಿರುವ ಸಾಧ್ಯತೆಯಿದೆ. ಪ್ರಾಣಿಗಳ ಆರೈಕೆ ಮಾಡುತ್ತಿದ್ದ ಸಿಬ್ಬಂದಿಗೆ ಸೋಂಕಿನ ಲಕ್ಷಣಗಳಿದ್ದವು ಎಂದು ಬ್ರಾಂಕ್ಸ್ ಮೃಗಾಲಯದ ವನ್ಯಜೀವಿ ಸಂರಕ್ಷಣಾ ತಂಡ ತಿಳಿಸಿದೆ.
ಕೋವಿಡ್-19 ವೈರಸ್ ಜಗತ್ತಿನೆಲ್ಲೆಡೆ ತನ್ನ ಪ್ರತಾಪವನ್ನು ಮುಂದುವರೆಸಿದ್ದು ಸಾವಿನ ಸಂಖ್ಯೆ ಮತ್ತು ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಈ ವೈರಸ್ ನ ಕೇಂದ್ರಬಿಂದುವಾದ ಚೀನಾದಲ್ಲಿ ಮತ್ತೆ 33 ಹೊಸ ಪ್ರಕರಣಗಳು ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ವುಹಾನ್ ನಲ್ಲಿ ಲಾಕ್ ಡೌನ್ ನಂತರ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸೋಂಕು ಧೃಡಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದಲ್ಲೂ ಸೋಂಕಿತರ ಸಮಖ್ಯೆ 3,577 ಇದ್ದು , 277 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆಯಾಗಿ ದೇಶದಲ್ಲಿ 83 ಜನರು ಮೃತರಾಗಿದ್ದಾರೆಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಭಾನುವಾರ ಒಂದು ದಿನ 6 ಜನರು ಮೃತರಾಗಿದ್ದು, 514 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲೇ ಅತೀ ಹೆಚ್ಚು ಸೋಂಕಿತರಿದ್ದು(747) 45 ಜನರು ಮೃತಪಟ್ಟಿದ್ದಾರೆ.