Advertisement

ಸೆರಾಯ್‌ ಖಾಸಗಿ ರೆಸಾರ್ಟ್‌ನಲ್ಲಿ ಹುಲಿ ಪ್ರತ್ಯಕ್ಷ

12:07 PM Nov 17, 2017 | Team Udayavani |

ಎಚ್‌.ಡಿ.ಕೋಟೆ: ನಾಗರಹೊಳೆ ಅಭಯಾರಣ್ಯದ ಅಂತರಸಂತೆ ಅರಣ್ಯ ವ್ಯಾಪ್ತಿಯ ಕಾರಾಪುರ ಗ್ರಾಮದ ಸಮೀಪ ಇರುವ ಸರ್ಕಾರಿ ಒಡೆತನದ ಕಬಿನಿ ರಿವರ್‌ ಲಾಡ್ಜ್ (ಜಂಗಲ್‌ ಲಾಡ್ಜ್) ನಲ್ಲಿ ಕಳೆದ 10 ದಿನಗಳ ಹಿಂದೆ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಆತಂಕ ಮೂಡಿಸಿದ್ದ ಹುಲಿ ಈಗ, ಮತ್ತೆ ಸಮೀಪದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಮಾಲಿಕತ್ವದ ಸೆರಾಯ್‌ ಖಾಸಗಿ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದೆ.

Advertisement

ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಹುಲಿ ಸೆರೆಗಾಗಿ ಕೂಬಿಂಗ್‌ ನಡೆಸಿದರೂ ಹುಲಿ ಸುಳಿವಿಲ್ಲ. ಇದರಿಂದಾಗಿ ಇಲ್ಲಿ ಉಳಿದಿರುವ ಪ್ರವಾಸಿಗರಲ್ಲಿ ಮತ್ತು ರೆಸಾರ್ಟ್‌ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ರಾತ್ರಿ ಕಾವಲಿಗೆ ಹೆಚ್ಚಿನ ಸಿಬ್ಬಂದಿಯನ್ನು ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ನಿಯೋಜಿಸಿ ಸ್ಥಳದಲ್ಲೇ ಬಿಡು ಬಿಟ್ಟಿದ್ದಾರೆ.

ಕಳೆದ 10 ದಿನದ ಹಿಂದೆ ಸರ್ಕಾರಿ ಸ್ವಾಮ್ಯದ ಜಂಗಲ್‌ಲಾಡ್ಜ್ ರೆಸಾರ್ಟ್‌ನ ಸಿಬ್ಬಂದಿಗೆ ಕಾಣಿಸಿಕೊಂಡು ಅದೇ ರಾತ್ರಿ ಟ್ರ್ಯಾಪಿಂಗ್‌ ಕ್ಯಾಮರಾದಲ್ಲಿ ಹುಲಿ ಕಾಣಿಸಿತ್ತು. ನಂತರ ಜಂಗಲ್‌ ಲಾಡ್ಜ್ ಮತ್ತು ಹಾಸುಪಾಸಿನ ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ದಸರಾ ಆನೆಗಳಾದ ಅರ್ಜುನ ಹಾಗೂ ಅಭಿಮನ್ಯು ಸೇರಿದಂತೆ ಹೆಚ್ಚಿನ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ.

ಹೀಗಾಗಿ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ತದ ನಂತರ ಕಳೆದ 4 ದಿನಗಳ ಹಿಂದಷ್ಟೇ ಹುಲಿಯೊಂದು ಸಮೀಪದ ಎನ್‌.ಬೆಳತ್ತೂರು ಗ್ರಾಮದಲ್ಲಿ ಜನರಿಗೆ  ಕಾಣಿಸಿಕೊಂಡಿದ್ದಲ್ಲದೇ ಅದೇ ದಿನ ಗ್ರಾಮದ ವ್ಯಕ್ತಿಯೋರ್ವರಿಗೆ ಸೇರಿದ ಹಸುವನ್ನು ಕೊಂದು ತಿಂದು ಹಾಕಿತ್ತು. 

ಅಂದು ಜಂಗಲ್‌ಲಾಡ್ಜ್ ರೇಸಾರ್ಟ್‌ನ ಸಿಬ್ಬಂದಿಗೆ ಕಾಣಿಸಿ ಕ್ಯಾಮಾರಾದಲ್ಲಿ ಸೆರೆಯಾದ ಹುಲಿ ಕಳೆದ ಬುಧವಾರ ರಾತ್ರಿ ಸೆರಾಯ್‌ ಖಾಸಗಿ ರೆಸಾರ್ಟ್‌ನ ಜೀಪ್‌ ಚಾಲಕರಿಗೆ ಕಾಣಿಸಿಕೊಂಡಿತ್ತು. ಪರಿಣಾಮ ರೆಸಾರ್ಟ್‌ ವ್ಯವಸ್ಥಾಪಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

Advertisement

ಗುರುವಾರ ಸೆರಾಯ್‌ ರೆಸಾರ್ಟ್‌ಗೆ ಬಂದ ಅಂತರಸಂತೆ ಹಾಗೂ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯ ವಲಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆದರೆ, ಎಲ್ಲಿಯೂ ಹುಲಿ ಹೆಜ್ಜೆ ಗುರುತು ಕಂಡು ಬಂದಿಲ್ಲ. ಅಲ್ಲದೆ, ಹೆಚ್ಚಿನ ಸಿಬ್ಬಂದಿ ಕರೆಸಿ ಪತ್ತೆಗಾಗಿ ಕೂಂಬಿಂಗ್‌ ನಡೆಸಿದರೂ ಪತ್ತೆಯಾಗಿಲ್ಲ. ಹೀಗಾಗಿ ರೆಸಾರ್ಟ್‌ಗೆ ಹೆಚ್ಚಿನ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದ್ದು, ರೆಸಾರ್ಟ್‌ ಆಯ್ದಾ ಸ್ಥಳಗಳಲ್ಲಿ ಟ್ರ್ಯಾಪಿಂಗ್‌ ಕ್ಯಾಮರಾ ಅಳವಡಿಸಲಾಗಿದೆ. 

ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಅಂತರಸಂತೆ ವನ್ಯಜೀವಿ ವಲಯದ ಎಸಿಎಫ್ ಪೂವಯ್ಯ, ಡಿ.ಬಿ.ಕುಪ್ಪೆ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಅಂತರಸಂತೆ ವಲಯ ಅರಣ್ಯಾಧಿಕಾರಿ ವಿನಯ್‌ ನೇತೃತ್ವದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ, ಪಶುವೈದ್ಯರಿದ್ದರು.

ಬುಧವಾರ ರಾತ್ರಿ ಸೆರಾಯ್‌ ರೆಸಾರ್ಟ್‌ ಜೀಪ್‌ ಚಾಲಕರಿಗೆ ಹುಲಿ ಕಾಣಿಸಿದೆ ಎಂದು ಆತ ಹೇಳಿದ್ದರಿಂದ ಗುರುವಾರ ರೆಸಾರ್ಟ್‌ನಲ್ಲಿ ಕೂಂಬಿಂಗ್‌ ನಡೆಸಿದ್ದೇವೆ. ಹುಲಿಯಾಗಲಿ, ಹೆಜ್ಜೆ ಗುರುತಾಗಲಿ ಕಾಣಿಸಿಲ್ಲ. ಹೀಗಾಗಿ ಕೂಂಬಿಂಗ್‌ ನಿಲ್ಲಿಸಿ ರೆಸಾರ್ಟ್‌ಗೆ ಟ್ರ್ಯಾಪಿಂಗ್‌ ಕ್ಯಾಮರಾಗಳನ್ನು ಅಳವಡಿಸಿದ್ದೇವೆ. ಅವರಿಗೂ ಹೆಚ್ಚಿನ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವಂತೆ ತಿಳಿಸಿದ್ದೇವೆ. ಶುಕ್ರವಾರ ಕ್ಯಾಮರಾದಲ್ಲಿ ಹುಲಿ ಚಲನ ವಲನ ಕಂಡರೆ ಸೆರೆಗಾಗಿ ಕಾರ್ಯಾಚರಣೆ ಕೈಗೊಳ್ಳುತ್ತೇವೆ.
-ವಿನಯ್‌, ವಲಯ ಅರಣ್ಯಾಧಿಕಾರಿ

* ಬಿ.ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next