Advertisement

ಟೈ ಟೈ ಸಿಂಗಾರಿ…

06:43 PM Jun 18, 2019 | mahesh |

ಬಟ್ಟೆಯ ಯಾವುದಾದರೂ ಒಂದು ಮೂಲೆ ಅಥವಾ ತುದಿಗೆ ದಾರ ಕಟ್ಟಿ, ಬಟ್ಟೆಯನ್ನು ಬಣ್ಣದಲ್ಲಿ ಅದ್ದಿದರೆ, ಬಟ್ಟೆ ಒಣಗಿದ ಬಳಿಕ, ಕಟ್ಟಿದ ಆ ದಾರವನ್ನು ತೆಗೆದಾಗ ಬಟ್ಟೆಯಲ್ಲಿ ಬಗೆಬಗೆಯ ಚಿತ್ತಾರ ಕಾಣಸಿಗುತ್ತದೆ. ಈ ರೀತಿ ಬಟ್ಟೆಗೆ ಬಣ್ಣ ಹಾಕುವುದಕ್ಕೆ “ಟೈ- ಡೈ’ ಎನ್ನಲಾಗುತ್ತದೆ. ಭಾರತೀಯರಿಗೆ ಈ ಶೈಲಿ ಹೊಸತೇನಲ್ಲ. ರಾಜಸ್ಥಾನದ ಜೈಪುರಿ ಬಾಂಧಾನಿ ಅಥವಾ ಬಂಧೇಜ್‌ ಶೈಲಿಯಲ್ಲಿ, ಇದೇ ರೀತಿ ಸೀರೆ ಹಾಗೂ ದುಪಟ್ಟಾಗಳ ಮೇಲೆ ಬಣ್ಣಗಳ ರಂಗೋಲಿಯನ್ನೇ ಮೂಡಿಸಲಾಗುತ್ತದೆ. ಅಲ್ಲದೆ, ಕನ್ನಡಿ, ಮಣಿ, ಗೆಜ್ಜೆ, ದಾರ, ಮುತ್ತಿನಂಥ ವಸ್ತುಗಳನ್ನೂ ಬಳಸಿ, ಈ ರಂಗೋಲಿಯನ್ನು ಇನ್ನಷ್ಟು ವಿಶಿಷ್ಟವಾಗಿ ಚಿತ್ರಿಸಲಾಗುತ್ತದೆ. ಇದನ್ನೇ ವಿದೇಶಗಳಲ್ಲಿ “ಟೈ-ಡೈ’ ಎಂಬ ಹೆಸರಿನಲ್ಲಿ ತಯಾರಿಸಿ ಮಾರಲಾಗುತ್ತದೆ.

Advertisement

90ರ ದಶಕದಲ್ಲೂ ಇತ್ತು
ಫ್ಯಾಷನ್‌ಲೋಕದಲ್ಲಿ ಈಗ ಟ್ರೆಂಡ್‌ ಆಗುತ್ತಿರುವ “ಟೈ-ಡೈ’ ಶೈಲಿ ಬಳಸಿ ತಯಾರಿಸಲಾದ ಉಡುಗೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇವುಗಳು ಕೇವಲ ಸೀರೆ, ಲಂಗ, ದುಪಟ್ಟಾದಂಥ ಸಾಂಪ್ರದಾಯಿಕ ಉಡುಗೆಗಳ ಮೇಲೆ ಮಾತ್ರವಲ್ಲ; ಪಾಶ್ಚಾತ್ಯ ದಿರಿಸುಗಳ ಮೇಲೂ ಕಾಣಸಿಗುತ್ತಿವೆ. ಟೀ ಶರ್ಟ್‌ಗಳು, ಅಂಗಿ, ಹುಡ್ಡೀ, ಕೋಟ್‌, ಜರ್ಕಿನ್‌, ಜಾಕೆಟ್‌, ಪ್ಯಾಂಟ್‌, ಶಾರ್ಟ್ಸ್, ಮಿನಿ ಸ್ಕರ್ಟ್‌, ಶ್ರಗ್‌, ಲೆಗಿಂಗÕ…, ಈಜುಡುಗೆ… ಹೀಗೆ ಅನೇಕ ವೆಸ್ಟರ್ನ್ ದಿರಿಸಿನ ಮೇಲೂ “ಟೈ-ಡೈ’ ಶೈಲಿ ವಿಜೃಂಭಿಸುತ್ತಿದೆ. “ಟೈ-ಡೈ’ ಶೈಲಿ ಟ್ರೆಂಡ್‌ ಆಗಿದ್ದೂ ಇದೇ ಮೊದಲೇನಲ್ಲ. 90ರ ದಶಕದಲ್ಲಿ ಫ್ಯಾಷನ್‌ ಲೋಕದಲ್ಲಿ ಈ ಶೈಲಿ ಬಿರುಗಾಳಿ ಎಬ್ಬಿಸಿತ್ತು. ಈಗ ಮತ್ತೆ ಈ ಶೈಲಿ ಕಮ್‌ ಬ್ಯಾಕ್‌ ಮಾಡುತ್ತಿದೆ ಎಂದರೂ ತಪ್ಪಾಗಲಾರದು.

ಎಲ್ಲೆಲ್ಲೂ ಟೈ ಡೈ
ನೇಲ್‌ ಆರ್ಟ್‌ನಲ್ಲಿ ಆಸಕ್ತಿ ಇರುವವರು ಕೈ ಹಾಗೂ ಕಾಲಿನ ಉಗುರುಗಳ ಮೇಲೆಯೂ “ಟೈ-ಡೈ’ ಶೈಲಿ ರಾರಾಜಿಸುವಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ… ಟೋಪಿ, ಬ್ಯಾಗ್‌, ಪಾದರಕ್ಷೆ, ಕನ್ನಡಕಗಳ ಪ್ರೇಮ…, ಬೆಲ್ಟ್ , ವಾಚ್‌ ಸ್ಟ್ರಾಪ್‌, ಕಿವಿಯೋಲೆ, ನೆಕ್ಲೆಸ್‌, ಬ್ರೇಸ್‌ ಲೆಟ್‌, ಉಂಗುರ ಮುಂತಾದ ಆಕ್ಸೆಸರೀಸ್‌ಗಳ ಮೇಲೂ ಟೈ ಡೈಯನ್ನು ಕಾಣಬಹುದು. ಹಾಗಾಗಿ ಬಣ್ಣಗಳ ಚಿತ್ತಾರವುಳ್ಳ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗಾಯಕಿಯರು, ರೂಪದರ್ಶಿಗಳು, ಚಿತ್ರ ನಟಿಯರು, ಕ್ರೀಡಾಪಟುಗಳು ಮುಂತಾದ ಸೆಲೆಬ್ರಿಟಿಗಳು “ಟೈ-ಡೈ’ ಶೈಲಿ ಪ್ರಖ್ಯಾತಿ ಪಡೆಯಲು ಕಾರಣರಾಗಿದ್ದಾರೆ. ಅಂತೆಯೇ ಅವರ ಅಭಿಮಾನಿಗಳು ಮತ್ತು ಫ್ಯಾಷನ್‌ ಪ್ರಿಯರೂ ಸಹ ತಮ್ಮ ನೆಚ್ಚಿನ ತಾರೆಗಳಂತೆ ಉಡುಪು ತೊಟ್ಟು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

ಮನೆಯಲ್ಲೇ ಪ್ರಯತ್ನಿಸಬಹುದು!
ಟೈ ಡೈಯನ್ನು ಯಾರೂ ಬೇಕಾದರೂ ಸ್ವತಃ ಉಡುಗೆ ಮೇಲೆ ಮೂಡಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಕಲಿಸುವ ಅನೇಕ ವಿಡಿಯೋಗಳಿವೆ. ಅವನ್ನು ನೋಡಿಕೊಂಡು ಮನೆಯಲ್ಲೇ ಪ್ರಯತ್ನಿಸಬಹುದು. ಹಳೆಯ ಅಂಗಿ ಅಥವಾ ಬೇಡವಾದ ಯಾವುದಾದರೂ ಒಂದು ಬಟ್ಟೆಯ ಜೊತೆ ಮೊದಲು ಪ್ರಯೋಗ ಮಾಡಿ ನೋಡಿ. ಯಶಸ್ವಿಯಾದಲ್ಲಿ ನಂತರ ಹೊಸ ಬಟ್ಟೆಗಳ ಮೇಲೆ ಪ್ರಯೋಗ ಮಾಡಲು ಮುಂದಾಗಿ. ತರಕಾರಿಯಿಂದ ಸಿಗುವ ನೈಸರ್ಗಿಕ ಬಣ್ಣಗಳನ್ನು ಬಳಸುವುದು ಒಳಿತು. ಉದಾಹರಣೆಗೆ ಬೀಟ್ರೂಟ್‌, ಅರಿಶಿನ, ನೇರಳೆ ಹಣ್ಣು, ಮದರಂಗಿ, ಕುಂಕುಮ, ಇತ್ಯಾದಿ. ಕೃತಕ ಬಣ್ಣಗಳಿಂದ ಹಾನಿ ಹೆಚ್ಚು. ಆದರೆ ನೆನಪಿರಲಿ, ಬಣ್ಣ ಬಿಡುತ್ತದೆ ಎಂದಾದರೆ, ಆ ಬಟ್ಟೆಗಳನ್ನು ಬಿಳಿ ಅಥವಾ ಇತರ ತಿಳಿ ಬಣ್ಣದ ಬಟ್ಟೆಗಳ ಜೊತೆ ಒಗೆಯುವುದು ಅಥವಾ ಒಗೆಯಲು ಹಾಕುವುದು ಮಾಡಬೇಡಿ.

– ಅದಿತಿ ಮಾನಸ ಟಿ. ಎಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next