ಸಿಡ್ನಿ: ಭಾರತ-ಆಸ್ಟ್ರೇಲಿಯ ನಡುವಿನ ಬಹುನಿರೀಕ್ಷೆಯ ಕ್ರಿಕೆಟ್ ಸರಣಿಗೆ ವೀಕ್ಷಕರು ದೊಡ್ಡ ಮಟ್ಟದಲ್ಲಿ ಸ್ಪಂದಿಸಿದ್ದಾರೆ. ಟಿಕೆಟ್ ಮಾರಾಟ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿದೆ. ಶುಕ್ರವಾರ ಸಾರ್ವಜನಿಕರಿಗಾಗಿ ಟಿಕೆಟ್ ಕೌಂಟರ್ ತೆರೆಯಲಾಗಿತ್ತು. ಜತೆಗೆ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕೋವಿಡ್-19 ಕಾಲದಲ್ಲಿ ಪ್ರೇಕ್ಷಕರಿಗೆ ಕ್ರೀಡಾಂಗಣದ ಬಾಗಿಲು ತೆರೆಯುವುದು ಇದೇ ಮೊದಲ ಸಲವಾದ್ದರಿಂದ ಹಾಗೂ ಸೀಮಿತ ಸಂಖ್ಯೆಯ ವೀಕ್ಷಕರಿಗಷ್ಟೇ ಪ್ರವೇಶ ಇರುವುದರಿಂದ ಟಿಕೆಟ್ ಖರೀದಿ ಬಹಳ ಬಿರುಸಿನಿಂದಲೇ ಸಾಗಿತು.
ಮೊದಲ ಏಕದಿನ ಪಂದ್ಯದ ಎರಡು ಸಾವಿರದಷ್ಟು ಟಿಕೆಟ್‌ಗಳಷ್ಟೇ ಲಭ್ಯವಿದೆ. ಉಳಿದ ಐದೂ ಪಂದ್ಯಗಳ ಟಿಕೆಟ್ ಸಂಪೂರ್ಣ ಮಾರಾಟವಾಗಿದೆ. ಕೊರೊನಾ ಮಾರಿ ಜಗತ್ತನ್ನು ವ್ಯಾಪಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳೆಲ್ಲ ರದ್ದುಗೊಂಡಿದ್ದವು.
ಜುಲೈಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಗೊಂಡಿತಾದರೂ ಪ್ರೇಕ್ಷಕರಿಗೆ ನಿರ್ಬಂಧವಿತ್ತು. ಈ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ವಿರುದ್ಧ ಸರಣಿಯನ್ನು ಆಡಲಾಗಿತ್ತು. ಐಪಿಎಲ್ ಪಂದ್ಯಗಳಿಗೂ ಖಾಲಿ ಸ್ಟೇಡಿಯಂಗಳೇ ಸಾಕ್ಷಿಯಾದವು.
ಆಸ್ಟ್ರೇಲಿಯದ ಹೆಗ್ಗಳಿಕೆ
ಇದೀಗ ಜಾಗತಿಕ ಕ್ರಿಕೆಟ್ ಸರಣಿ ಮರಳಿ ಆರಂಭಗೊಂಡ 117 ದಿನಗಳ ಬಳಿಕ ವೀಕ್ಷಕರಿಗೆ ಸ್ಟೇಡಿಯಂ ಬಾಗಿಲು ತೆರೆಯುತ್ತಿದೆ. ಈ ಹೆಗ್ಗಳಿಕೆ ಆಸ್ಟ್ರೇಲಿಯದ್ದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಟೇಡಿಯಂ ಸಾಮರ್ಥ್ಯದ ಅರ್ಧದಷ್ಟು ಮಂದಿಗೆ ಅವಕಾಶ ಕಲ್ಪಿಸಲು ಕ್ರಿಕೆಟ್ ಆಸ್ಟ್ರೇಲಿಯ ಮುಂದಾಗಿದೆ.
“ಭಾರತ-ಆಸ್ಟ್ರೇಲಿಯ ಕ್ರಿಕೆಟ್ ಸರಣಿ ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಕ್ರೀಡೆ ಎನಿಸಿದೆ. ನಮ್ಮ ಪಾಲಿಗೆ ಇದೊಂದು ಮಹಾಕಾವ್ಯವಿದ್ದಂತೆ…’ ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯದ ಆ್ಯಂಟನಿ ಎವರಾರ್ಡ್ ಹೇಳಿದ್ದಾರೆ. 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲಿದೆ. ನ. 27, 29 ಮತ್ತು ಡಿ. 2ರಂದು ಏಕದಿನ; ಡಿ. 4, 6 ಮತ್ತು 8ರಂದು ಟಿ20 ಪಂದ್ಯಗಳು ನಡೆಯಲಿವೆ