ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಬೇಕಿದ್ದರೆ ಮೊದಲು ವಿಧವೆಯರ ಮನೆಯಲ್ಲಿ ವಾಸ್ತವ್ಯ ಮಾಡುವಂತೆ ಮಹಿಳಾ ಆಕಾಂಕ್ಷಿಗಳಿಗೆ ವೇಣುಗೋಪಾಲ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ದಲಿತರ ಮನೆಯಲ್ಲಿ ಭೋಜನ ಸವಿಯುತ್ತ ಅವರನ್ನು ಆಕರ್ಷಿಸುತ್ತಿರುವ ಬೆನ್ನ ಹಿಂದೆಯೇ ಅತ್ಯಧಿಕ ಸಂಖ್ಯೆಯಲ್ಲಿರುವ ಮಹಿಳಾ ಮತದಾರರ ಗಮನ ಸೆಳೆಯಲು ವಿಧವೆಯರ ಮನೆಯಲ್ಲಿ ತಂಗಲು ಮಹಿಳಾ ಮುಖಂಡರಿಗೆ ವೇಣುಗೋಪಾಲ್ ಸೂಚಿಸಿರುವುದು ಕುತೂಹಲ ಮೂಡಿಸಿದೆ.
ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವಂತೆ ಮಹಿಳಾ ಘಟಕದ ಪದಾಧಿಕಾರಿಗಳು ವೇಣುಗೋಪಾಲ್ ಎದುರು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಹಿಳಾ ಘಟಕವನ್ನು ಕ್ರೀಯಾಶೀಲವಾಗಿಡಲು ಕೆಲವು ಸೂಚನೆ ನೀಡಿರುವ ವೇಣುಗೋಪಾಲ, ಪ್ರತಿ ಕ್ಷೇತ್ರದಲ್ಲಿಯೂ ಭೂತ್ ಮಟ್ಟದಲ್ಲಿ ಮಹಿಳೆಯರನ್ನು ಸಂಪರ್ಕಿಸಿ, ಪ್ರತಿ ಭೂತ್‌ನಲ್ಲಿಯೂ 50 ಮಹಿಳಾ ಮತದಾರರನ್ನು ಕಾಂಗ್ರೆಸ್ ಕಡೆಗೆ ಸೆಳೆದರೆ, ಈಗಿರುವ ಸ್ಥಾನಕ್ಕಿಂತ ಇನ್ನೂ 20 ಸ್ಥಾನ ಹೆಚ್ಚು ಗೆಲ್ಲಬಹುದು. ಮಹಿಳಾ ಟಿಕೆಟ್ ಆಕಾಂಕ್ಷಿಗಳು ವಿಧವೆಯರು ಹಾಗೂ ಅಸಹಾಯಕ ಮಹಿಳೆಯರ ಮನೆಯಲ್ಲಿ ವಾಸ್ತವ್ಯ ಹೂಡಿ, ಅವರೊಂದಿಗೆ ಸಮಾಲೋಚನೆ ನಡೆಸುವುದು. ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿರುವ ಯೋಜನೆಗಳನ್ನು ಅವರಿಗೆ ತಲುಪಿಸುವ ಕಾರ್ಯ ಮಾಡುವಂತೆ ವೇಣುಗೋಪಾಲ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ಘಟಕದಿಂದ ಸದಸ್ಯತ್ವ ನೋಂದಣಿ ಕಡಿಮೆಯಾಗಿರುವುದಕ್ಕೆ ವೇಣುಗೋಪಾಲ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯುವ ಮತದಾರರನ್ನು ಸೆಳೆಯಲು ಕಾಲೇಜು ಹಾಸ್ಟೆಲ್‌ಗಳಿಗೆ ತೆರಳಿ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದನ್ನು ಸರ್ಕಾರದ ಗಮನಕ್ಕೆ ತರುವಂತೆ ವೇಣುಗೋಪಾಲ ಸೂಚಿಸಿದ್ದಾರೆ.
ನಮ್ಮೊಳಗಿನ ಇಂದಿರಾ : ಮಹಿಳಾ ಮತದಾರರನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಮಹಿಳೆಯರನ್ನು ಸೆಳೆಯಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳಲು ತೀರ್ಮಾನಿಸಿದೆ. ಇಂದಿರಾ ಗಾಂಧಿಯ ಶತಮಾನೋತ್ಸವದ ಅಂಗವಾಗಿ ‘ನಮ್ಮೊಳಗಿನ ಇಂದಿರಾ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಇಂದಿರಾ ಗಾಂಧಿಯ ಕಾರ್ಯಕ್ರಮಗಳು ಮತ್ತು ಅವರ ಸಾಧನೆಗಳನ್ನು ಮಹಿಳಾ ಮತದಾರರಿಗೆ ಮನವರಿಕೆ ಮಾಡಿ ಕೊಡಲು ಮಹಿಳಾ ಘಟಕ ಮುಂದಾಗಿದೆ.
ಸಭೆ ನಂತರ ಮಾತನಾಡಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವ ಮಹಿಳಾ ಆಕಾಂಕ್ಷಿಗಳು ವಿಧವೆಯ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದು ಕಡ್ಡಾಯ. ಅವರೊಂದಿಗೆ ಸಹ ಭೋಜನ ಮಾಡಿ, ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು. ಅಲ್ಲದೇ ನಮ್ಮೊಳಗಿನ ಇಂದಿರಾ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಜಾಗೃತಿ ಮೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಬೇಕು ಎಂದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಕೇಳಿರುವುದಾಗಿ ಲಕ್ಷ್ಮೀ ಹೆಬ್ಟಾಳ್ಕರ್ ತಿಳಿಸಿದರು.