Advertisement

ಕಾರ್ಯಕರ್ತರು ಸೂಚಿಸುವ ಅಭ್ಯರ್ಥಿಗೇ ಟಿಕೆಟ್

12:48 PM Sep 13, 2019 | Suhan S |

ಕೆ.ಆರ್‌.ಪೇಟೆ: ಪಕ್ಷದ ಆಧಾರ ಸ್ತಂಭವಾಗಿರುವ ಕಾರ್ಯಕರ್ತರು ಸೂಚಿಸುವ ವ್ಯಕ್ತಿಗೇ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭರವಸೆ ನೀಡಿದರು.

Advertisement

ಪಟ್ಟಣದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಷ್ಠಾವಂತ ಕಾರ್ಯಕರ್ತರೇ ಪಕ್ಷದ ಜೀವಾಳ. ಮುಂದಿನ ಉಪ ಚುನಾವಣೆಯಲ್ಲಿ ಕಾರ್ಯಕರ್ತರು ಒಮ್ಮತದಿಂದ ಸೂಚಿಸುವ ವ್ಯಕ್ತಿಗೆ ಪಕ್ಷದ ಟಿಕೆಟ್ ನೀಡುತ್ತೇನೆ. ದೇಶದ ನಾಲ್ಕು ರಾಜ್ಯಗಳ ಚುನಾವಣೆ ಜೊತೆಯಲ್ಲಿ ರಾಜ್ಯದ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ. ನಾನು ಚುನಾವಣೆಯಲ್ಲಿ ಪರಾವಭವಗೊಂಡ ದಿನದಿಂದಲೇ ಪಕ್ಷ ಸಂಘಟನೆ ಆರಂಭಿಸಿದ್ದೇನೆ. ಕಾರ್ಯಕರ್ತರು ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಚುನಾವಣಾ ವೆಚ್ಚ ಕೇಳಿ ತಪ್ಪು ಮಾಡಿದೆ: ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆ.ಆರ್‌.ಪೇಟೆ ತಾಲೂಕಿನಿಂದ ಸ್ಪರ್ಧೆ ಮಾಡಬೇಕು ಎನ್ನುವವರು ಮುಂಗಡವಾಗಿ ಚುನಾವಣೆ ನಡೆಸಲು ಬೇಕಿರುವ ಹಣ ಮುಂದಿಟ್ಟು ಟಿಕೆಟ್ ಕೇಳಿ ಎಂದು ನಿಬಂಧನೆ ವಿಧಿಸಿದೆ. ಅದರಿಂದ ಕೆಲ ನಿಷ್ಠಾವಂತ ಕಾರ್ಯಕರ್ತರು ಚುನಾವಣೆ ಸ್ವರ್ಧೆಯಿಂದ ಹಿಂದೆ ಸರಿದಿದ್ದರು. ಅಂದು ನಾನು ಮಾಡಿದ ತಪ್ಪಿನಿಂದಾಗಿ ಮಾಜಿ ಶಾಸಕ ಪ್ರಕಾಶ್‌, ಬಿ.ಎಲ್.ದೇವರಾಜ್‌ ಮತ್ತಿತತರು ಹಿಂದೆ ಸರಿದಿದ್ದರು. ನನಗೀಗ ತಪ್ಪಿನ ಅರಿವಾಗಿದೆ ಎಂದರು.

ಕೊಟ್ಟಮಾತು ಉಳಿಸಿಕೊಂಡ ಎಚ್‌ಡಿಕೆ: ಕುಮಾರಸ್ವಾಮಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದರೂ ಕೊಟ್ಟಮಾತಿನಂತೆ ರೈತರ ಸಾಲಮನ್ನಾ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡರು. ರೈತರ 40 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಕ್ಷದಿಂದ ಮಾಜಿ ಸ್ಪೀಕರ್‌ ಕೃಷ್ಣ, ಮಾಜಿ ಶಾಸಕ ಪ್ರಕಾಶ್‌ ಮತ್ತು ದೇವರಾಜು ಅವರಿಗೆ ಅನ್ಯಾಯವಾಗಿದೆ.

ಒಂದು ಬಾರಿ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಾಗಿದೆ. ಅಷ್ಟೇ ಸಾಕು ಎಂದು ಎಷ್ಟೇ ಹೇಳಿದರೂ ನನ್ನ ಮಾತನ್ನು ಕೇಳದೇ ಕುಮಾರಸ್ವಾಮಿ ಮುಂಬೈವಾಲ ನಾರಾಯಣಗೌಡನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ ತಪ್ಪಿಗೆ ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಹೇಳಿದರು.

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಉದ್ಘಾಟಿಸಿದರು. ರಾಜ್ಯದ ಮಾಜಿ ಸಾರಿಗೆ ಸಚಿವ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ, ಶಾಸಕ ಡಾ.ಕೆ.ಅನ್ನದಾನಿ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ. ಮಂಜು, ಸದಸ್ಯರಾದ ರಾಮದಾಸು, ಬಿ.ಎಲ್. ದೇವರಾಜು, ಜೆ.ಪ್ರೇಮ ಕುಮಾರಿ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಎಪಿಎಂಸಿ ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಲೋಕೇಶ್‌, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್‌, ಮುಖಂಡರಾದ ಜಾನಕೀರಾಂ, ಬಸ್‌ ಕೃಷ್ಣೇಗೌಡ, ಶೀಳನೆರೆ ರಮೇಶ್‌, ಅಗ್ರಹಾರಬಾಚಹಳ್ಳಿ ನಾಗೇಶ್‌, ಮಂಜೇಗೌಡ, ಕೆ.ಎಸ್‌.ಸಂತೋಷ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next