Advertisement

ಹೆಚ್ಚು ವೋಟು ತಂದುಕೊಟ್ಟರಷ್ಟೇ ಕಾರ್ಪೊರೇಟರ್‌ಗಳಿಗೆ ಟಿಕೆಟ್ಟು 

11:09 AM Sep 17, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಬಿಎಂಪಿ ಕಾರ್ಪೊರೇಟರ್‌ಗಳು ತಮ್ಮ ವಾರ್ಡ್‌ಗಳಿಂದ ಲೀಡ್‌ ಕೊಟ್ಟರಷ್ಟೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್‌ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಬಿಬಿಎಂಪಿ ಕಾರ್ಪೊರೇಟರ್‌ಗಳು ಹಾಗೂ  2015 ರಲ್ಲಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ಸಭೆ ನಡೆಸಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿ ಪಕ್ಷಕ್ಕೆ ಲೀಡ್‌ ಕೊಡಿಸುವ ಜಬಾಬ್ದಾರಿ ನಿಮ್ಮದು. ಅದರ ಆಧಾರದ ಮೇಲೆಯೇ ಟಿಕೆಟ್‌ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಗೆದ್ದರೆ ಮಾತ್ರ ರಾಜ್ಯದಲ್ಲಿ ಪಕ್ಷ ಏಕಾಂಗಿಯಾಗಿ ಅಧಿಕಾರ ಹಿಡಿಯಲು ಸಾಧ್ಯ ಎಂಬುದನ್ನು ಕಾರ್ಪೊರೇಟರ್‌ಗಳಿಗೆ ಮನವರಿಕೆ ಮಾಡಿಕೊಟ್ಟ ವೇಣುಗೋಪಾಲ್‌,  ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಈಗಿನಿಂದಲೇ ಕೆಲಸ ಪ್ರಾರಂಭಿಸಬೇಕು. ತಮ್ಮ ತಮ್ಮ ವಾರ್ಡ್‌ಗಳಲ್ಲಿ ಭೂತ್‌ ಮಟ್ಟದ ಸಮಿತಿ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚನೆ ನೀಡಿದರು.

ಬೂತ್‌ ಮಟ್ಟದ ಸಮಿತಿ ರಚನೆಯನ್ನು ಹೈ ಕಮಾಂಡ್‌ ಮೆಚ್ಚಿಕೊಂಡಿದ್ದು, ಇದನ್ನು ದೇಶದ ಎಲ್ಲ ರಾಜ್ಯಗಳಿಗೂ ವಿಸ್ತರಿಸಲು ತೀರ್ಮಾನಿಸಿದೆ. ಬೂತ್‌ ಮಟ್ಟದ ಕಾರ್ಯಕರ್ತರ ಮುಖಾಂತರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ತಾಕೀತು ಮಾಡಿದರು.

ಅತ್ಯಂತ ಜನಪ್ರಿಯವಾಗಿರುವ ಇಂದಿರಾ ಕ್ಯಾಂಟೀನ್‌ ಯೋಜನೆ ರಾಷ್ಟ್ರಮಟ್ಟದಲ್ಲಿಯೂ ಸಾಕಷ್ಟು ಹೆಸರು ಮಾಡಿರುವುದರಿಂದ ಆ ಯೋಜನೆಯ ಫ‌ಲಾನುಭವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಇಂದಿರಾ ಕ್ಯಾಂಟೀನ್‌ಗೆ ಬರುವ ಸಾರ್ವಜನಿಕರೊಂ09/16/2017 9:41:36 ಕMದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುವಂತೆಯೂ ವೇಣುಗೋಪಾಲ್‌ ಸಭೆಯಲ್ಲಿ ತಿಳಿಸಿದರು.

Advertisement

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, 2013 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಐದು  ಸಾವಿರ ಮತಗಳ ಅಂತರದಲ್ಲಿ ಸುಮಾರು 10 ಕಡೆ ಸೋಲನುಭವಿಸಿದ್ದಾರೆ. 10 ಸಾವಿರ ಅಂತರದಲ್ಲಿ 26 ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಈ ಬಾರಿ ಬೂತ್‌ ಮಟ್ಟದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿದರೆ, ಅಷ್ಟು ಸ್ಥಾನಗಳನ್ನು ಹೆಚ್ಚಿಗೆಯಾಗಿ ಗೆಲ್ಲಲು ಅವಕಾಶವಿದೆ. ಹೀಗಾಗಿ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ ಪಾತ್ರ ಮುಖ್ಯ ಎಂದು ಹೇಳಿದರು.

ಜಾರ್ಜ್‌ ಮೇಲೆ ಜಿ.ಪಂ ಸದಸ್ಯರ ಅಸಮಾಧಾನ 
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್‌ ಸದಸ್ಯರುಗಳಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತಾಗಿದೆ ಎಂದು ಕಾಂಗ್ರೆಸ್‌ ಸದಸ್ಯರು ವೇಣುಗೋಪಾಲ್‌ ಎದುರು ಅಳಲು ತೋಡಿಕೊಂಡಿದ್ದಾರೆ. ನಗರ ಜಿಲ್ಲಾ ಪಂಚಾಯತಿಯ ಕಾಂಗ್ರೆಸ್‌ ಸದಸ್ಯರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ಗೆ ಹಲವು ಬಾರಿ ಮನವಿ ಮಾಡಿದರೂ, ಸಭೆ ಕರೆದು ಚರ್ಚಿಸುತ್ತಿಲ್ಲ.

ಹೀಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಗುತ್ತಿಲ್ಲ.  ಪಕ್ಷ ಮತ್ತು ನಮಗೂ ಯಾವುದೇ ಸಂಬಂಧ ಇಲ್ಲದಂತೆ ನಗರಾಭಿವೃದ್ಧಿ ಸಚಿವರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನಗರ ಜಿಲ್ಲಾ ಪಂಚಾಯ್ತಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸುವಂತೆ ಜಾರ್ಜ್‌ಗೆ ವೇಣುಗೋಪಾಲ್‌ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next