ಕನಕಪುರ: ಕನಕಪುರ -ಬೆಂಗಳೂರು ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಟಿಕೆಟ್ ಪಡೆದು ಬನಶಂಕರಿಯಲ್ಲಿ ನಿಲುಗಡೆ ಮಾಡುತ್ತಿರುವ ಸಾರಿಗೆ ಸಂಸ್ಥೆ, ಮಾರುಕಟ್ಟೆಗೆ ತೆರಳಬೇಕಾದ ಪ್ರಯಾಣಿಕರು ಮತ್ತೆ ನಗರಸಾರಿಗೆ ಬಸ್ ಅಥವಾ ಮೆಟ್ರೋದಲ್ಲಿ ಪತ್ಯೇಕ ಹಣ ತೆತ್ತು ಪ್ರಯಾಣಿಸುತ್ತಿದ್ದು, ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತ್ಯವೂ ಕನಕಪುರದಿಂದ ಬೆಂಗಳೂರು ನಗರಕ್ಕೆ ಸರ್ಕಾರಿ ನೌಕರರು, ಖಾಸಗಿ ಕಂಪನಿಯ ನೌಕರರು, ಉದ್ಯಮಿಗಳು ಹೀಗೆ ನಿತ್ಯದ ತಮ್ಮ ಕೆಲಸಕ್ಕಾಗಿ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಬಹುತೇಕ ಮಾರುಕಟ್ಟೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಈ ಹಿಂದೆ ಎಲ್ಲಾ ಸಾರಿಗೆ ಸಂಸ್ಥೆ ಬಸ್‌ಗಳು ಮಾರುಕಟ್ಟೆಗೆ ತೆರಳುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ ಬನಶಂಕರಿಯಲ್ಲೇ ನಿಲುಗಡೆ ಮಾಡುವ ಮೂಲಕ ಪ್ರಯಾಣಿಕರಿಗೆ ವಂಚಿಸುತ್ತಿವೆ ಎನ್ನುವುದು ಪ್ರಯಾಣಿಕರ ಆರೋಪವಾಗಿದೆ.
ಬದಲಾವಣೆ ಜಾಗೃತಿಯಿಲ್ಲ: ಕನಕಪುರ ನಿಲ್ದಾಣದಲ್ಲಿ ನಿರಂತರವಾಗಿ ಮಾರುಕಟ್ಟೆ ತೆರಳುವವರು, ನಿತ್ಯ ಕಾರ್ಮಿಕರು, ತರಕಾರಿ ಮಾರಾಟಗಾರರು, ಕೆಲವು ಗ್ರಾಹಕರು ಹೀಗೆ ಅನೇಕ ಮಂದಿ ನಿತ್ಯವೂ ಪ್ರಯಾಣಿಸುತ್ತಾರೆ. ಅದರೆ ಇದ್ದಕ್ಕಿದ್ದ ಹಾಗೆ ಟಿಕೆಟ್ ದರದ ಜತೆಗೆ ಮಾರುಕಟ್ಟೆಗೆ ಬಸ್ ಪ್ರಯಾಣವಿಲ್ಲದಂತೆ ಮಾಡಿರುವುದಕ್ಕೆ ಈ ಭಾಗದ ಜನರಿಗೆ ಯಾವುದೇ ಸೂಚನೆಯನ್ನೂ ನೀಡಿಲ್ಲ. ಹಾಗೊಂದು ಬಾರಿ ಬದಲಾವಣೆ ಮಾಡಬೇಕೆಂದರೆ ಸಾರ್ವಜನಿಕರ ಗಮನಕ್ಕೆ ತರಬೇಕೆಂಬುದನ್ನು ಸಾರಿಗೆ ಇಲಾಖೆ ಮರೆತಿದೆ. ಹೀಗಾಗಿ ಸಾರ್ವಜನರಿಕರು ಟಿಕೆಟ್‌ಗೆ ಹಣ ನೀಡಿ ಬನಶಂಕರಿಯಲ್ಲಿ ಮಾರ್ಗಮಧ್ಯದಲ್ಲಿಯೇ ಇಳಿದು ಸಾರಿಗೆ ಇಲಾಖೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಜ್ಯ ರಾಜದಾನಿಗೆ ನಿತ್ಯವೂ ತೆರಳುವ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ ಬಿಟ್ಟರೆ ಅನ್ಯ ಮಾರ್ಗವಿಲ್ಲ, ಬೇರೆ ಯಾವುದೇ ಸೌಲಭ್ಯವಿಲ್ಲದ ಇಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡಿದ್ದೇ ಕಾನೂನು ಅನ್ನುಂತಾಗಿದೆ ಎಂದು ಸಾರ್ವಜನಿಕರು ದೂರಿದ್ದು, ಇದನ್ನು ವಿಚಾರಿಸುವ ಜನಪ್ರತಿನಿಧಿಗಳು ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ.
ನರಕ ಯಾತನೆ: ವಾರದ ಮೊದಲ ದಿನ ಆರಂಭವಾದರೆ ಸಾಕು ಕನಕಪುರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕಾದರೆ ನನಗೆ ಎಲ್ಲಿ ಜಾಗ ಸಿಗುವುದಿಲ್ಲ ಎಂದು ತರಾತುರಿಯಲ್ಲಿ ಬಸ್ ಹತ್ತಬೇಕು. ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಅಂದುಕೊಂಡ ಸ್ಥಳ ತಲುಪಲು ಅಸಾಧ್ಯ. ಇದರ ಜತೆಗೆ, ಪಿಕ್ ಪಾಕೆಟ್ ಪ್ರಕರಣಗಳೂ ನಡೆಯುತ್ತಿದ್ದ ಪ್ರಯಾಣಿಸುವವರಿಗೆ ಸೂಕ್ತ ಭದ್ರತೆಯಿಲ್ಲದಂತಾಗಿದೆ. ಹೀಗಾಗಿ, ಜನರು ಪ್ರಯಾಣಿಸಲು ಹರಸಾಹ ಪಡಬೇಕು ಹಣ ಕೊಟ್ಟರೂ ಇಲ್ಲ ನರಕ ನೋಡಬೇಕು ಎನ್ನುತ್ತಾರೆ ಪ್ರಯಾಣಿಕರು.
ಬನಶಂಕರಿಯಿಂದ ಮೆಟ್ರೋದಲ್ಲಿ ತೆರಳಿದರೆ 22 ರೂ , ನಗರ ಸಾರಿಗೆಯಲ್ಲಿ ತೆರಳಿದರೆ 19 ರೂ ನೀಡಬೇಕಿದ್ದು, ಕನಕಪುರದಿಂದ ಟಿಕೆಟ್ ಪಡೆಯುವ ಸಾರಿಗೆ ಸಂಸ್ಥೆ ಮಾರುಕಟ್ಟೆಗೆ ನಿಗದಿ ಮಾಡಿದ ಹಣವನ್ನು ಬನಶಂಕರಿಗೆ ಪಡೆದು ಪ್ರಯಾಣಿಕರನ್ನು ವಂಚಿಸುತ್ತಿದ್ದು, ಮಾರುಕಟ್ಟೆಗೆ ತರಳುತ್ತಿದ್ದ ಬಸ್ ನಿಲ್ಲಿಸಿ ಈಗ ದೂರು ನೀಡಿ ಎಂದರೆ ತಪ್ಪು ಯಾರದ್ದು ಪ್ರಯಾಣಿಕರಿಗೆ ತೊಂದರೆ ಕೊಟ್ಟು ಈಗ ದೂರು
ಕೊಡಿ ಎಂದರೆ ನಮಗೆ ಸಮಯವೇ ಇಲ್ಲ ಇವರಿಗೆ ಎಲ್ಲಿಂದ ದೂರು ಕೊಡುವುದು ಎನ್ನುತ್ತಾರೆ ಪ್ರಯಾಣಿಕರು.
ಕನಕಪುರದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಮಾರುಕಟ್ಟೆಗೆ ತೆರಳುವ ಬಸ್‌ನಲ್ಲಿ ತೆರಳಲಿ ಬನಶಂಕರಿಗೆ ಬಸ್‌ನಲ್ಲಿ ಯಾಕೆ ಹೋಗಬೇಕು, ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, 1.45 ಗಂಟೆಯಲ್ಲಿ ಸಾಗಲು ಸಾಧ್ಯವಾಗುತ್ತಿಲ್ಲ ಅದರಿಂದ ನಾವು ಬನಶಂಕರಿಯಲ್ಲಿ ನಿಲುಗಡೆ ಮಾಡಿದ್ದೇವೆ, ದರದ ಬಗ್ಗೆ ಮಾತನಾಡುವ ಅಧಿಕಾರಿಗಳು ಅದು ಸ್ಟೇಜ್ ಲೆಕ್ಕ ನಾವೇನು ಮಾಡಲು ಬರುವುದಿಲ್ಲ ಅಂತಹ ತೊಂದರೆಯಾಗುತ್ತಿದ್ದರೆ ದೂರು ನೀಡಲಿ ನಂತರ ಪರಿಶೀಲನೆ ನಡೆಸುತ್ತೇವೆ.
●ಸಚಿನ್, ಡಿಪೋ ವ್ಯವಸ್ಥಾಪಕ