ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕರಿಗೆ ಟಿಕೆಟ್ ಬಹುತೇಕ ಪಕ್ಕಾ ಆಗಿರುವುದರಿಂದ ಆ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ತಳಮಳ ಶುರುವಾಗಿದೆ.
ತಮಗೇ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿಂದ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಿಗೆ ನಿರಾಶೆಯಾಗಿದ್ದು, ಇದರ ಪರಿಣಾಮ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಥವಾ ಪಕ್ಷಾಂತರ ಕಾಣಿಸಬಹುದು. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವಿ ಶಾಸಕರ ವಿರುದ್ಧ “ನಾಮಕಾವಸ್ಥೆ’ಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.
ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಡಾ.ಅಜಯ್‌ಸಿಂಗ್, ಪ್ರಿಯಾಂಕ್ ಖರ್ಗೆ, ಹ್ಯಾರೀಸ್ ಸೇರಿ ಹಾಲಿ ಶಾಸಕರು ಇರುವ ಕಡೆ ಆಕಾಂಕ್ಷಿಗಳು ಅರ್ಜಿ ಹಾಕಿರುವುದು ಕಡಿಮೆಯೇ. ಈಗ ಟಿಕೆಟ್ ಸಿಗದಿದ್ದರೂ ಪಕ್ಷ ಅಧಿಕಾರಕ್ಕೆ ಬಂದರೆ ಪರಿಷತ್ ಸದಸ್ಯತ್ವ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಡಬಹುದು ಎಂಬ ಕಾರಣಕ್ಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಎಚ್.ಕೆ.ಪಾಟೀಲ್ ಅವರು ಪ್ರತಿನಿಧಿಸುವ ಗದಗ ಕ್ಷೇತ್ರದಿಂದ ಬಲರಾಮ ಬಸವ, ನಂಜೇಗೌಡ ಪ್ರತಿನಿಧಿಸುವ ಮಾಲೂರು ಕ್ಷೇತ್ರದಿಂದ ಮಾಜಿ ಶಾಸಕ ಎ.ನಾಗರಾಜು, ಅಖಂಡ ಶ್ರೀನಿವಾಸ ಮೂರ್ತಿ ಪ್ರತಿನಿಧಿಸುವ ಪುಲಿಕೇಶಿನಗರದಿಂದ ಮಾಜಿ ಶಾಸಕ ಪ್ರಸನ್ನಕುಮಾರ್, ರಿಜ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿನಗರದಿಂದ ಎಸ್.ಎ.ಹುಸೇನ್, ರೂಪಕಲಾ ಪ್ರತಿನಿಧಿಸುವ ಕೆಜಿಎಫ್ನಿಂದ ಸಿ.ವಿ.ಬಾಲಕೃಷ್ಣ, ವೆಂಕಟರಮಣಪ್ಪ ಪ್ರತಿನಿಧಿಸುವ ಪಾವಗಡದಿಂದ ಕೃಷ್ಣಾನಾಯಕ್ ಸೇರಿಹಲವರು ಅರ್ಜಿ ಹಾಕಿದ್ದಾರೆ. ಅದೇ ಕ್ಷೇತ್ರದಿಂದ ಮಾಜಿ ಸಂಸದ ಚಂದ್ರಪ್ಪ ಆಕಾಂಕ್ಷಿ ಆದರೂ ಕ್ಷೇತ್ರದ ಹೆಸರು ಹೈಕಮಾಂಡ್ ತೀರ್ಮಾನಕ್ಕೆ ಎಂದು ಬಿಟ್ಟಿದ್ದಾರೆ.
Related Articles
ಆದರೆ, ಈ ಕ್ಷೇತ್ರಗಳ ಪೈಕಿ ಅಂತಿಮವಾಗಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟರೆ ಎರಡು ಕ್ಷೇತ್ರಗಳಲ್ಲಿ ಬಂಡಾಯದ ಲಕ್ಷಣಗಳಿವೆ.
ಕೆಪಿಸಿಸಿ ಚುನಾವಣಾ ಸಮಿತಿ ವತಿಯಿಂದ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಎಐಸಿಸಿ ತೀರ್ಮಾನ ಅಂತಿಮವಾಗುವ ಕಾರಣ ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಿಂದ ಶಿಫಾರಸು ಆಗಿರುವ ಪಟ್ಟಿಯಲ್ಲಿ ಇದೆ ಎಂಬ ಕಾರಣ ಮುಂದಿಟ್ಟು ಈಗಾಗಲೇ ಹೈಕಮಾಂಡ್ ಕದ ತಟ್ಟಲು ಮುಂದಾಗಿದ್ದಾರೆ.
ಪೈಪೋಟಿ: ಈ ಮಧ್ಯೆ, ಹಾಲಿ ಶಾಸಕರು ಇರುವ ಕ್ಷೇತ್ರಗಳಿಗಿಂತ ಬಿಜೆಪಿ ಹಾಗೂ ಜೆಡಿಎಸ್ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಪೈಪೋಟಿ ಇದೆ. ಅಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೆ ಮತ್ತೂಬ್ಬರು ಬೇರೊಂದು ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ಇದೇ ಕಾರಣಕ್ಕೆ ತೀವ್ರ ಪೈಪೋಟಿ ಇಲ್ಲದ 130 ರಿಂದ 140 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಪೈಪೋಟಿ ಇರುವ ಕ್ಷೇತ್ರಗಳಿಗೆ ಕೊನೇ ಗಳಿಗೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಸಭೆ ಸುಸೂತ್ರವಾಗಿ ಆಗಿದೆ. ಆದಷ್ಟು ಬೇಗ ಹೈಕಮಾಂಡ್‌ಗೆ ಕರಡು ಪಟ್ಟಿ ರವಾನೆ ಮಾಡಲಾಗುವುದು. ಫೆಬ್ರವರಿ 15 ರೊಳಗೆ ಪಟ್ಟಿ ಬಿಡುಗಡೆಯಾಗಲಿದೆ.
– ಡಿ.ಕೆ.ಶಿವಕುಮಾರ್