Advertisement

ಪಕ್ಷ ಸಂಘಟನೆ ಮಾಡಿದ್ರೆ ಟಿಕೆಟ್‌: ಎಚ್‌.ಡಿ.ದೇವೇಗೌಡ

06:20 AM Oct 12, 2017 | Team Udayavani |

ಬೆಂಗಳೂರು:”ಟಿಕೆಟ್‌ಗಾಗಿ ನಾಯಕರ ಹಿಂದೆ-ಮುಂದೆ ಸುತ್ತಾಡೋದು ಬೇಡ. ಪಕ್ಷದ ಧ್ವಜ ಹಿಡಿದು ಸಂಘಟನೆ ಮಾಡಿ. ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡರೆ ನಾಯಕರಾಗುವುದಿಲ್ಲ. ಜನರ ವಿಶ್ವಾಸ ಗಳಿಸಿದರೆ ಮಾತ್ರ ನಾಯಕರಾಗುತ್ತಾರೆ’ ಇದು ಮಾಜಿ ಪ್ರಧಾನಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಟಿಕೆಟ್‌ ಆಕಾಂಕ್ಷಿಗಳಿಗೆ ಹೇಳಿದ ಕಿವಿಮಾತು.

Advertisement

ಪಕ್ಷದ ಕಚೇರಿಯಲ್ಲಿ ವಿಧಾನಸಭೆ ಚುನಾವಣೆಯ ಆಕಾಂಕ್ಷಿಗಳ ಸಭೆ ನಡೆಸಿದ ಅವರು,ಟಿಕೆಟ್‌ಗಾಗಿ ಲಾಬಿ-ಗೀಬಿ ಮಾಡುವ ಅಗತ್ಯವಿಲ್ಲ. ನಾನು ಕುಮಾರಸ್ವಾಮಿ ಭಾಷಣ ಮಾಡುವಾಗ ಟಿವಿಯಲ್ಲಿ ಮುಖ ತೋರಿಸಲು ನಮ್ಮ ಹಿಂದೆ ಬಂದು ನಿಂತುಕೊಳ್ಳುವುದಲ್ಲ.  ವೇದಿಕೆಗೆ ಸೀಮಿತರಾಗಿರುವ ಗಿರಾಕಿಗಳನ್ನು  ಈ ಬಾರಿ ಹತ್ತಿರಕ್ಕೂ ಸೇರಿಸುವುದಿಲ್ಲ. ಪಕ್ಷ ಕಟ್ಟುವವರಿಗೆ ಮಾತ್ರ ಟಿಕೆಟ್‌. ಪ್ರತಿ ಜಿಲ್ಲೆ ಮತ್ತು ಕ್ಷೇತ್ರಾವಾರ ಮಾಹಿತಿ ಪಡೆಯುತ್ತೇವೆ. ಯಾರು ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೋ ಅವರಿಗೆ ಟಿಕೆಟ್‌ ಎಂದು ತಿಳಿಸಿದರು.

ರಾಜ್ಯ ವಿಧಾನಸಭೆಗೆ ನಿಗದಿತ ಸಮಯಕ್ಕಿಂತ ಎರಡು -ಮೂರು ತಿಂಗಳ ಮುಂಚೆಯೇ ಚುನಾವಣೆ ಎದುರಾಗುವ ಸಾಧ್ಯತೆಯಿದ್ದು ಕಾರ್ಯಕರ್ತರು, ಮುಖಂಡರು ಸಜ್ಜಾಗಬೇಕು .  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ನಲ್ಲಿ ಇರುವುದರಿಂದ ಜನವರಿಯಲ್ಲಿ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಯಾವಾಗ ಚುನಾವಣೆ ನಡೆದರೂ ಎದುರಿಸಲು ಸನ್ನದ್ದರಾಗಬೇಕು ಎಂದು ಹೇಳಿದರು.

ಮುಂದಿನ ಒಂದು ತಿಂಗಳ ಕಾಲ ಮನೆ ಮನೆಗೆ ಕುಮಾರಣ್ಣ ಅಭಿಯಾನ ಪ್ರತಿಯೊಬ್ಬರೂ ಯಶಸ್ವಿ ಮಾಡಬೇಕು. ಆಕಾಂಕ್ಷಿಗಳು ಗ್ರಾಮಗಳತ್ತ ಹೋಗಬೇಕು. ಟಿಕೆಟ್‌ ಜಪ ಬಿಟ್ಟು ಕೆಲಸ ಮಾಡಿ. ನೀವು ಮಾಡಿರುವ ಕೆಲಸ ಚೆನ್ನಾಗಿದ್ದರೆ ನಾವೇ ಕರೆದು ಟಿಕೆಟ್‌ ಕೊಡ್ತೇವೆ ಎಂದರು.

ನವೆಂಬರ್‌ 2 ರಂದು ಪ್ರಧಾನಿ ನರೇಂದ್ರಮೋದಿ ರಾಜ್ಯಕ್ಕೆ ಆಗಮಿಸಲಿದ್ದು ದ್ವಿಚಕ್ರ ವಾಹನ ಮೂಲಕ ನವಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ. ಇಲ್ಲಿ ಸಿದ್ದರಾಮಯ್ಯ ಮನ್‌ಕಿಬಾತ್‌ಗೆ ಸರಿ ಸಮನಾಗಿ ಕಾಮ್‌ಕಿ ಬಾರ್‌  ಎಂದಿದ್ದಾರೆ. ನಾವು ಎರಡೂ ಪಕ್ಷಗಳಷ್ಟು ಆರ್ಥಿಕವಾಗಿ ಬಲಶಾಲಿಗಳಲ್ಲ, ಸ್ವಂತ ಪರಿಶ್ರಮದಿಂದ ಗೆಲ್ಲಬೇಕು. ನಮ್ಮ ಕಾರ್ಯಕ್ರಮಗಳೇ ನಮ್ಮ ಜೀವಾಳ ಎಂದು ತಿಳಿಸಿದರು.

Advertisement

ಶಸ್ತ್ರ ಚಿಕಿತ್ಸೆಗೊಳಗಾಗಿ ವಿಶ್ರಾಂತಿಯಲ್ಲಿರುವ ಎಚ್‌.ಡಿ.ಕುಮಾರಸ್ವಾಮಿ ನವೆಂಬರ್‌ 1 ರಿಂದ ರಾಜ್ಯ ಪ್ರವಾಸ ಮಾಡಲಿದ್ದಾರೆ. ಯಾರ ಹಂಗೂ ಇಲ್ಲದೆ ಸ್ವಂತ ಶಕ್ತಿಯ ಮೇಲೆ ಸರ್ಕಾರ  ತರುವುದು ಅವರ ಕನಸು. ಅದು ಸಾಕಾರವಾಗಲು ನಿಮ್ಮೆಲ್ಲರ ಶ್ರಮ, ತ್ಯಾಗ, ಪರಿಶ್ರಮ ಅಗತ್ಯ ಎಂದು ಹೇಳಿದರು.

ಟಿಕೆಟ್‌ಗಾಗಿ ಹೊಡೆದಾಡುವುದು, ಬಡಿದಾಡುವುದು ಬೇಡ. ಸರ್ಕಾರ ತರುವುದು ನಮ್ಮ ಗುರಿಯಾಗಬೇಕು. ಒಬ್ಬರೇ ಆಕಾಂಕ್ಷಿ ಇರುವ ಕಡೆ ಸಮಸ್ಯೆಯಿಲ್ಲ. ಇಬ್ಬರು ಮೂವರು ಇರುವ ಕಡೆ ಸ್ವಲ್ಪ ಹೊಂದಾಣಿಕೆ ಅಗತ್ಯ. ಪಕ್ಷದ ಹಿತದೃಷ್ಟಿಯಿಂದ ನೀವೇ ಒಮ್ಮತದ ಆಯ್ಕೆ ಮಾಡಿಕೊಂಡರೂ ಸರಿಯೇ. ಇಲ್ಲವೇ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಎಂದು ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್‌ ಸರ್ಕಾರದ ಸಾಧನೆಗಳು, ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ರೂಪಿಸಿದ ಯೋಜನೆಗಳ ಕಿರುಹೊತ್ತಿಗೆ” ಮನೆ ಮನೆಗೆ ಕುಮಾರಣ್ಣ’ ಬಿಡುಗಡೆ ಮಾಡಲಾಯಿತು.

ಕುಮಾರಣ್ಣ ನಿಮ್ಮ ಅಪ್ಪನನ್ನು ಬಿಟ್ಟು ಬಾ, ಮತ್ತೆ ನಾವು ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೇವೆ ಎಂದವರೆಲ್ಲಾ ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಅಂದು ಕುಮಾರಸ್ವಾಮಿಯನ್ನು ಸಿಎಂ ಮಾಡ್ತೀವಿ ಎಂದವರು  ಈಗ ಪಂತಾಹ್ವಾನ ನೀಡುತ್ತಿದ್ದಾರೆ. ರಾಮನಗರದಲ್ಲಿ ಗೆದ್ದು ತೋರಿಸಲು ಸಾಕು ಎನ್ನುತ್ತಿದ್ದಾರೆ. ರಾಜ್ಯದ ಜನ ನಮ್ಮೊಂದಿಗಿದ್ದಾರೆ. ನೂರಕ್ಕೆ ನೂರರಷ್ಟು ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next